ಕರ್ನಾಟಕ

ಮೇಜರ್ ಸರ್ಜರಿಗೆ ಅಪಸ್ವರ : ಕಾಮರಾಜ್ ಸೂತ್ರಕ್ಕೆ ಮಂತ್ರಿಗಳ ಹಿಂದೇಟು

Pinterest LinkedIn Tumblr

kamarajarಬೆಂಗಳೂರು, ಜೂ. ೧೪- ಸಾಮೂಹಿಕ ರಾಜೀನಾಮೆ ಪಡೆಯುವ ಮೂಲಕ ಅಮೂಲಾಗ್ರವಾಗಿ ಸಂಪುಟ ಪುನಾರಚನೆ ಮಾಡಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಮಂತ್ರಿಗಳ ವಲಯದಲ್ಲಿ ಒಳಗೊಳಗೆ ಅಪಸ್ವರ ಕೇಳಿ ಬಂದಿದೆ.

ಮೇಜರ್ ಸರ್ಜರಿ ನೆಪದಲ್ಲಿ ತಮ್ಮ ಸ್ಥಾನಕ್ಕೆ ಸಂಚಕಾರ ಭೀತಿ ಎದುರಾಗಿರುವುದು ಈ ಮಂತ್ರಿಗಳ ಕಳವಳಕ್ಕೆ ಕಾರಣ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ಬಲಿಷ್ಠವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬೀಳುವ ಸಾಮರ್ಥ್ಯ ಶಾಸಕರು ಹಾಗೂ ಮಂತ್ರಿಗಳಲ್ಲಿ ಕುಗ್ಗಿದೆ. ಇದರಿಂದಾಗಿ ಒಲ್ಲದ ಮನಸ್ಸಿನಿಂದ ಈ ಬೆಳವಣಿಗೆ ಕಾಂಗ್ರೆಸಿಗರು ಮೂಕ ಪ್ರೇಕ್ಷಕರಾಗಿದ್ದಾರೆ.

ಬಹು ದಿನಗಳಿಂದ ನಿರೀಕ್ಷಿಸಿರುವ ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಕಾಲ ಕೂಡಿ ಬರುತ್ತಿದ್ದಂತೆಯೇ ಸಚಿವಕಾಂಕ್ಷಿ ಶಾಸಕರು, ಮುಖಂಡರು ದೆಹಲಿ ಯಾತ್ರೆ ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

ಕಾಮರಾಜ್ ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉದ್ದೇಶ ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲಿದೆ ಎಂಬುನ್ನು ಕಾದು ನೋಡಬೇಕು.

ಸಚಿವ ಸಂಪುಟ ಪುನರ್ ರಚನೆ ಕಸರತ್ತು ತೀವ್ರಗೊಳ್ಳುತ್ತಿದ್ದಂತೆ ಬಹುತೇಕ ಶಾಸಕರು, ಮುಖಂಡರು ದೆಹಲಿಯತ್ತ ಮುಖ ಮಾಡಿದ್ದಾರೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟು ಸಚಿವ ಪಟ್ಟಕ್ಕಾಗಿ ಇನ್ನಿಲ್ಲದ ಲಾಭಿ ನಡೆಸಿದ್ದಾರೆ.

ಕೆಲ ಸಚಿವರು ದೌಡು

ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮರಾಜ್ ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆಯಲಿದ್ದಾರೆ ಎಂಬ ಸುದ್ದಿಗಳ ಹಿನ್ನಲೆಯಲ್ಲಿ, ಸಚಿವ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಕೆಲ ಸಚಿವರು ಸಹ ದೆಹಲಿಗೆ ದೌಡಾಯಿಸಿದ್ದಾರೆ.

ನಾಳೆ ನಿರ್ಧಾರ

ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನ‌ಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬುಧವಾರ ಮಂತ್ರಿ ಪರಿಷತ್‌ನ ಸಭೆ ಕರೆದಿದ್ದು, ಈ ಸಭೆಯಲ್ಲಿ ಸಚಿವ ಸಂಪುಟ ಪುನರ್ ರಚನೆ ಹಾಗೂ ಕೆಲ ಸಚಿವರನ್ನು ಪಕ್ಷದ ಸಂಘಟನೆಗೆ ತೊಡಗಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಕಾಮರಾಜ್ ಸೂತ್ರದಂತೆ ಎಲ್ಲಾ ಸಚಿವರನ್ನು ಕೈಬಿಟ್ಟು ಹೊಸದಾಗಿ ಸಂಪುಟ ರಚಿಸಬೇಕೋ? ಅಥವಾ ಈಗಿರುವ ಸಚಿವ ಸಂಪುಟದಲ್ಲಿರುವವರಲ್ಲಿ 7-8 ಮಂದಿಯನ್ನು ಕೈಬಿಟ್ಟು ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಸಂಪುಟ ಪುನರ್ ರಚನೆ ಮಾಡಬೇಕೊ? ಎಂಬ ಬಗ್ಗೆ ನಾಳೆ ನಡೆಯುವ ಮಂತ್ರಿ ಪರಿಷತ್ ಸಭೆಯಲ್ಲಿ ಚರ್ಚೆಗಳು ನಡೆಯಲಿದ್ದು, ಅಂತಿಮವಾಗಿ ಮುಖ್ಯಮಂತ್ರಿ ವಿವೇಚನೆಗೆ ಎಲ್ಲವನ್ನು ಬಿಡುವ ಬಗ್ಗೆ ಸಂಪುಟ ಸಭೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

16ರ ಬಳಿಕ ದೆಹಲಿಗೆ

ನಾಳೆ ನಡೆಯುವ ಮಂತ್ರಿ ಪರಿಷತ್‌ನ ಸಭೆಯ ಬಳಿಕ ಅಂದರೆ ಈ ತಿಂಗಳ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿ ವರಿಷ್ಠರೊಡನೆ ಚರ್ಚಿಸಿದ ನಂತರ ಸಂಪುಟ ಪುನರ್ ರಚನೆಗೆ ಮುಹೂರ್ತ ನಿಗದಿಯಾಗಲಿದೆ.

Comments are closed.