ಕರ್ನಾಟಕ

ಇಳಕಲ್‌ ನಲ್ಲಿ ಅರಳಿದ ಅಪರೂಪದ ಜೆಬ್ರಿನಾ ಹೂವು

Pinterest LinkedIn Tumblr

ilakalಇಳಕಲ್‌: ನೋಡಲು ಥೇಟ್ ಗೂಬೆಯ ಕಣ್ಣಿನಂತೆ ಅಥವಾ ಹಳೆ ಕಾಲದ ಔಷಧಗಳ ಬೂಚಿನಂತೆ ಕಾಣುವ ಈ ವಿಲಕ್ಷಣ ಹೂವು ಭಾನುವಾರ ಇಳಕಲ್‌ ನಗರದಲ್ಲಿ ಅರಳಿ ಅನೇಕರನ್ನು ಆಕರ್ಷಿಸಿತು.

ಸಾಮಾನ್ಯವಾಗಿ ‘ಲೈಫ್‌ ಸೇವರ್’ ಎಂದು ಕರೆಯಲ್ಪಡುವ ಈ ಹೂವು ಹ್ಯುರ್ನಿಯಾ ತಳಿ. ಒಂದೇ ಕುಂಡದಲ್ಲಿ ನಾಲ್ಕು ಹೂವುಗಳು ಒಂದೇ ದಿನ ಇಲ್ಲಿಯ ಕೆ.ಎಸ್.ಕಂದಿಕೊಂಡ ಅವರ ಮನೆಯ ಕೈತೋಟದಲ್ಲಿ ಅರಳಿವೆ. ನೋಡಲು ಪಾಪಾಸುಕಳ್ಳಿಯಂತೆ ಕಂಡರೂ ಇದನ್ನು ರಸಭರಿತ ಸಸ್ಯ ಅಥವಾ ಸಕ್ಯುಲೆಂಟ್‌ ಎಂದು ಗುರುತಿಸಲಾಗುತ್ತದೆ.

Huernia Zebrina ಎನ್ನುವುದು ಈ ತಳಿಯ ಹೆಸರು. ಒಂದೂವರೆ ಇಂಚು ವ್ಯಾಸವುಳ್ಳ ಕಡುಗೆಂಪು ಬಣ್ಣದ ಬಟನ್ ಆಕಾರದ ದಪ್ಪ ದುಂಡು ಹೂ ಇದು. ಕೇಸರಿ ಹಾಗೂ ಬಿಳಿ ಜಿಬ್ರಾ ಪಟ್ಟಿಗಳಿಂದ ಕೂಡಿರುವ ಐದು ಚೂಪು ದಳಗಳು ಇದಕ್ಕಿವೆ. ವಿಷವನ್ನು ಹೀರಿಕೊಳ್ಳುವ ಗುಣ ಈ ಸಸ್ಯಕ್ಕಿದೆ ಅಂತೆ. ಹಾಗಾಗಿ ಇದನ್ನು ‘ಲೈಫ್ ಸೇವರ್’ ಎಂದು ಕರೆಯಲಾಗುತ್ತದೆ.

ನಮೀಬಿಯಾ, ಕೀನ್ಯಾ, ಬೋಟ್ಸವಾನಾ, ಜಿಂಬಾಬ್ವೆ ಮುಂತಾದ ಕಡೆ ವಿಪುಲವಾಗಿ ಬೆಳೆಯುವ ಈ ರಸಸಸ್ಯವು ನಮ್ಮಲ್ಲಿ ಬೆಳೆಯುವುದು ವಿರಳ. ಅಮೆಜಾನ್ ಕಂಪೆನಿ 2 ಪೌಂಡ್‌ ತೂಕದ ಇದರ ಸಸಿಯನ್ನು ಸುಮಾರು 15 ಡಾಲರ್‌ಗಳಿಗೆ ಆನ್‌ಲೈನ್‌ ಮೂಲಕ ಮಾರುತ್ತದೆ.

ತೆರಿಗೆ ಸಲಹೆಗಾರ ಕೆ.ಎಸ್.ಕಂದಿಕೊಂಡ ಈ ಸಸ್ಯವನ್ನು 8 ವರ್ಷಗಳಿಂದ ಪೋಷಿಸಿಕೊಂಡು ಬಂದಿದ್ದಾರೆ. ಸಣ್ಣ ಕುಂಡಗಳಲ್ಲಿ ಬೆಳೆಯುವ ಇದು, ಎಷ್ಟೇ ಬಿಸಿಲು ಇದ್ದರೂ ತಾಳಿಕೊಳ್ಳಬಲ್ಲದು. ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಬೆಳೆಯುತ್ತದೆ. ‘ಲೈಫ್‌ಸೇವರ್‌’ ಎಂದು ಹೆಸರಿರುವ ಈ ಸಸ್ಯವನ್ನು ನಾವು ‘ರಕ್ಷಕ’ ಎಂದು ಕರೆಯಬಹುದು ಎನ್ನುತ್ತಾರೆ ಕಂದಿಕೊಂಡ.

Comments are closed.