ಬೆಂಗಳೂರು, ಜೂ. ೧೩- ದೇಶಾದ್ಯಂತ 1 ಕೋಟಿ 62 ಲಕ್ಷ ನಕಲಿ ಪಡಿತರ ಚೀಟಿಗಳನ್ನು ಗುರುತಿಸಿ ಅವುಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ 15 ಸಾವಿರ ಕೋಟಿ ರೂ. ಸಹಾಯಧನ ಉಳಿತಾಯವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಇಂದು ಇಲ್ಲಿ ಹೇಳಿದರು.
ಬೋಗಸ್ ಪಡಿತರ ಚೀಟಿಗಳನ್ನು ಇನ್ನಷ್ಟು ಗುರುತಿಸಿ ಅವುಗಳನ್ನು ರದ್ದುಪಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಪಡಿತರ ಆಹಾರ ಧಾನ್ಯ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ 3.7 ಕೋಟಿ ಅಡುಗೆ ಅನಿಲ ಸಿಲಿಂಡರ್ ವಿತರಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಡವರಿಗೆ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದ ಪರಿಣಾಮ ಎಲ್ಲಾ ರಾಜ್ಯಗಳಲ್ಲೂ ಇದು ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಿದ ಅವರು, ಪಾಂಡಿಚೇರಿ, ಚಂಡೀಘಡ ಹಾಗೂ ದಾದರ್ ನಗರ ಹವೇಲಿಗಳಲ್ಲಿ ನೇರ ಹಣ ವರ್ಗಾವಣೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಿದರು.
ಗ್ರಾಹಕರ ಹಿತರಕ್ಷಣೆ ಕಾಯಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದಕ್ಕೆ ಪೂರಕವಾಗಿ ಗ್ರಾಹಕ ಸುರಕ್ಷಾ ಕಾಯ್ದೆಗೆ ಲೋಕಸಭೆಯಲ್ಲಿ ಇನ್ನು ಅನುಮತಿ ಸಿಗಬೇಕಾಗಿದೆ ಎಂದು ಹೇಳಿದರು.
ಬೇಳೆಕಾಳು ಸೇರಿದಂತೆ ದ್ವಿದಳ ಧಾನ್ಯದ ಬೆಲೆ ಕಳೆದೊಂದು ತಿಂಗಳಿನಿಂದ ಕಡಿಮೆಯಾಗಿದೆ. ಬೇಳೆಕಾಳು ಸೇರಿದಂತೆ ಇತರ ದ್ವಿದಳ ಧಾನ್ಯ ಬೆಲೆ ಹೆಚ್ಚಾಗಲು ಉತ್ಪಾದನೆ ಹಾಗೂ ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಾಸವೇ ಕಾರಣ ಎಂದು ಹೇಳಿದರು.
ಬಫರ್ ಸ್ಟಾಕ್ ಅಡಿಯಲ್ಲಿ 1 ಲಕ್ಷದ 13 ಸಾವಿರ ಟನ್ ದ್ವಿದಳ ಧಾನ್ಯ ದಾಸ್ತಾನು ಮಾಡಲಾಗಿದ್ದು, ಎಲ್ಲಾ ರಾಜ್ಯಗಳಿಗೂ ಅಗತ್ಯವಿರುವಷ್ಟು ಕಾಳುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಘನತೆ ದೇಶ ಮತ್ತು ವಿದೇಶಗಳಲ್ಲಿ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೇಂದ್ರದ ಯಾವುದೇ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಸ್ವಾನ್ ಚಿರಾಗ್ ಪಾಸ್ವಾನ್ ಹಾಜರಿದ್ದರು.
ಕರ್ನಾಟಕ
Comments are closed.