ಬೆಂಗಳೂರು, ಜೂ. ೯- ಬೆಂಗಳೂರು ವಿಶ್ವವಿದ್ಯಾಲಯ ಜಾಗವನ್ನು ಬಳಕೆ ಮಾಡಿಕೊಂಡಿರುವ ನಮ್ಮ ಮೆಟ್ರೋ ಕೊಟ್ಟ ವಾಗ್ದಾನದಂತೆ ನಡೆದುಕೊಳ್ಳದೇ ಬೆಂಗಳೂರು ವಿಶ್ವವಿದ್ಯಾಲಯಕ್ಕೆ `ಕೈ’ ಕೊಟ್ಟಿದೆ. ಮೆಜೆಸ್ಟಿಕ್ – ವಿಧಾನಸೌಧ ನಡುವಿನ ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಸ್ಫೋಟದಿಂದ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಕಟ್ಟಡಗಳು ಸ್ಫೋಟದಿಂದ ಬಿರುಕು ಬಿಟ್ಟಿದ್ದವು. ಇದರ ದುರಸ್ತಿ ಮಾಡಿಸುವುದಾಗಿ ಹೇಳಿದ್ದ ಮೆಟ್ರೋ ನಂತರ ಮಾತಿನಿಂದ ಹಿಂದೆ ಸರಿದಿದೆ. ಇದರ ಜೊತೆಗೆ ಹಾಳಾಗಿರುವ ಸೆಂಟ್ರಲ್ ಕಾಲೇಜಿನ ಒಳರಸ್ತೆಗಳನ್ನು ಮರು ನಿರ್ಮಿಸುವುದಾಗಿ ಹೇಳಿದ್ದ ಮೆಟ್ರೋ ಕೊನೆಗೆ ಕೈಕೊಟ್ಟು ರಸ್ತೆ ನಿರ್ಮಾಣ ಮಾಡುವುದು ತಮ್ಮ ಕೆಲಸ ಅಲ್ಲ ಎಂದು ಕೈತೊಳೆದುಕೊಂಡಿದೆ. ಈ ಬಗ್ಗೆ ಮೆಟ್ರೋ ನಿಗಮಕ್ಕೆ ಎರಡು ಬಾರಿ ಪತ್ರ ಬರೆದರೂ ಯಾವುದೇ ಕ್ರಮ ಆಗದ ಕಾರಣ ವಿಶ್ವವಿದ್ಯಾಲಯವೇ ತನ್ನ ವೆಚ್ಚದಲ್ಲಿ ಬಿರುಕುಬಿಟ್ಟ ಕಟ್ಟಡಗಳ ದುರಸ್ತಿಗೆ ಮುಂದಾಗಿದ್ದು, ಸೆಂಟ್ರಲ್ ಕಾಲೇಜಿನ ರಸ್ತೆಗಳ ರಿಪೇರಿಗೆ 60 ಲಕ್ಷ ರೂ.ಗಳ ಟೆಂಡರ್ ಕರೆದಿದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ತಿಮ್ಮೆಗೌಡ ಸುದ್ದಿಗಾರರಿಗೆ ತಿಳಿಸಿದರು.
ಕಾಮಗಾರಿ ಆರಂಭದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಸೆಂಟ್ರಲ್ ಕಾಲೇಜು ಜಾಗ ಪಡೆದ ಮೆಟ್ರೋ ಅದಕ್ಕೆ ಪ್ರತಿ ಚದುರಡಿಗೆ 5 ಸಾವಿರ ರೂ. ನಂತೆ 5 ಕೋಟಿ ಪರಿಹಾರ ನೀಡಿತ್ತು. ಆದರೆ ಈ ಪರಿಹಾರ ಬೇರೆ ಕಡೆ ಮೆಟ್ರೋ ನೀಡಿರುವ ಭೂ ಪರಿಹಾರಕ್ಕೆ ಹೋಲಿಸಿದರೆ ಕಡಿಮೆ, ಸುಮಾರು 20 ಕೋಟಿ ರೂ. ಪರಿಹಾರ ಸಿಗಬೇಕಿತ್ತು ಎಂದು ಅವರು ಹೇಳಿದರು.
ಕಾಮಗಾರಿ ಸಂದರ್ಭದಲ್ಲಿ ಸೆಂಟ್ರಲ್ ಕಾಲೇಜಿನ ದೊಡ್ಡ ಜಾಗವನ್ನು ಮೆಟ್ರೋ ತಾತ್ಕಾಲಿಕವಾಗಿ ಬಳಸಿಕೊಂಡಿತ್ತು. ಇದಕ್ಕೆ ಬಾಡಿಗೆ ನೀಡುವ ಬದಲು ಕಾಲೇಜಿನ ಒಳರಸ್ತೆಗಳನ್ನು ದುರಸ್ತಿ ಮಾಡುವ ಭರವಸೆ ನೀಡಿತ್ತು. ಆದರೆ ಆಗ ವಾಗ್ದಾನ ನೀಡಿದ್ದ ಮೆಟ್ರೋ ಈಗ ಅದರಂತೆ ನಡೆದುಕೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸುರಂಗ ನಿರ್ಮಾಣ ಸಂದರ್ಭದಲ್ಲಿ ನಡೆಸಲಾದ ಸ್ಫೋಟದಿಂದ ಪಾರಂಪರಿಕ ಕಟ್ಟಡವಾದ ಸೆಂಟ್ರಲ್ ಕಾಲೇಜಿನ ರಾಜಾಜಿಹಾಲ್, ಭೌತಶಾಸ್ತ್ರ ವಿಭಾಗ, ಅಪಾರೆಲ್ ಟೆಕ್ನಾಲಜಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳಲ್ಲಿ ಬಿರುಕುಗಳು ಆಗಿದ್ದವು. ಇದನ್ನು ವಿಶ್ವವಿದ್ಯಾಲಯದ ಹಣದಿಂದಲೇ ದುರಸ್ತಿ ಮಾಡಿಸಲಾಗಿದೆ ಎಂದರು.
ಸೆಂಟ್ರಲ್ ಕಾಲೇಜಿನ ಕಾಂಪೌಂಡ್ ಗೋಡೆಯ ಮರು ನಿರ್ಮಾಣ ಸಹ ನಮ್ಮ ನಿರೀಕ್ಷೆಗೆ ತಕ್ಕಂತೆ ಆಗಿಲ್ಲ ಎಂದು ಕುಲಪತಿ ತಿಮ್ಮೇಗೌಡರವರು ಹೇಳಿದರು.
ಸೆಂಟ್ರಲ್ ಕಾಲೇಜು ಬಳಿಯ ಮೆಟ್ರೋ ನಿಲ್ದಾಣಕ್ಕೆ ಈಗಿರುವ ಸರ್. ಎಂ. ವಿಶ್ವೇಶ್ವರಯ್ಯ ನಿಲ್ದಾಣದ ಹೆಸರನ್ನು ಸರ್. ಎಂ. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ನಿಲ್ದಾಣ ಎಂದು ಬದಲಿಸುವಂತೆ ಮೆಟ್ರೋ ನಿಗಮಕ್ಕೆ ಪತ್ರ ಬರೆಯುವುದಾಗಿಯೂ ಅವರು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿವಾದದಲ್ಲಿ ಮೆಟ್ರೋ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಒಂದು ರೀತಿ ನಿರ್ಲಕ್ಷ್ಯ ತಾಳಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜ್ಞಾನಭಾರತಿಗೆ ಜಾಗ ಮೆಟ್ರೋಗೆ
ಮೆಟ್ರೋ ಹಂತದ ಯೋಜನೆಯಲ್ಲಿ ಜ್ಞಾನ ಭಾರತಿ ಮೆಟ್ರೋ ನಿಲ್ದಾಣಕ್ಕೆ ವಿಶ್ವವಿದ್ಯಾಲಯ ಜಾಗವನ್ನು ನೀಡಿದ್ದು, ಈ ಜಾಗವನ್ನು ಉಚಿತವಾಗಿ ನೀಡುವಂತೆ ಕೋರಿತ್ತು. ಆದರೆ ಅದು ಸಾಧ್ಯವಿಲ್ಲ ಎಂದಾಗ 3.5 ಕೋಟಿ ರೂ. ಪರಿಹಾರ ನೀಡಿದೆ ಎಂದು ಕುಲಪತಿ ತಿಮ್ಮೆಗೌಡರು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯ ವಿಭಜಿಸಿ ಹೊಸದಾಗಿ ರಚನೆಯಾಗುತ್ತಿರುವ ಬೆಂಗಳೂರು ಕೇಂದ್ರ ಹಾಗೂ ಉತ್ತರ ವಿ.ವಿ.ಗಳು 2017-18ನೇ ಸಾಲಿನಲ್ಲಿ ಕಾರ್ಯಾರಂಭ ಮಾಡಲಿವೆ. ಈ ಎರಡು ವಿ.ವಿ.ಗಳು ಈಗಿನ ಬೆಂಗಳೂರು ವಿ.ವಿ.ಯ ಮಟ್ಟಕ್ಕೆ ಮೂಲಭೂತ ಸೌಕರ್ಯ ಪಡೆಯಲು ಕನಿಷ್ಠ 25 ವರ್ಷ ಬೇಕು. ಈ ಎರಡು ವಿ.ವಿ.ಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ಮಾತ್ರ ಕ್ಷಿಪ್ರವಾಗಿ ಮೂಲಭೂತ ಸೌಕರ್ಯ ಹೊಂದಲು ಸಾಧ್ಯ ಎಂದು ಅವರು ಹೇಳಿದರು.
ಕರ್ನಾಟಕ
Comments are closed.