ಕರ್ನಾಟಕ

ಹೊಸದುರ್ಗದ ಸಬ್‌ಇನ್‌ಸ್ಪೆಕ್ಟರ್ ಪತ್ನಿ ಕೊಲೆ ಪ್ರಕರಣ : ಪತಿಯೇ ಈ ಕೃತ್ಯ ಮಾಡಿಸಿರುವ ಶಂಕೆ ..?

Pinterest LinkedIn Tumblr

prapulla

ತುಮಕೂರು: ಹೊಸದುರ್ಗದ ಸಬ್‌ಇನ್‌ಸ್ಪೆಕ್ಟರ್ ಪತ್ನಿ ಪ್ರಪುಲ್ಲಾ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಚನೆಗೊಂಡಿರುವ ಆರು ವಿಶೇಷ ತಂಡ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದು , ಪತಿಯೇ ಈ ಕೃತ್ಯ ಮಾಡಿಸಿರಬಹುದೆಂಬ ಹಲವು ಅನುಮಾನ ದಟ್ಟವಾಗಿ ಹರಡಿದ್ದು, ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದೆ. ನಿನ್ನೆಯಿಂದ ಇನ್‌ಸ್ಪೆಕ್ಟರ್ ಗಿರೀಶ್ ಮೊಬೈಲ್ ಸ್ಥಗಿತಗೊಂಡಿದ್ದು, ಇವರ ಹುಡುಕಾಟದಲ್ಲಿ ವಿಶೇಷ ತಂಡ ನಿರತವಾಗಿದೆ.

ಘಟನೆ ವಿವರ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್ ಇನ್‌ಸ್ಪೆಕ್ಟರ್ ಗಿರೀಶ್ 2012ರಲ್ಲಿ ಗುಬ್ಬಿ ತಾಲ್ಲೂಕು, ಚೇಳೂರು ಹೋಬಳಿಯ ಸಂಗನಹಳ್ಳಿಯ ಪ್ರಪುಲ್ಲಾ ಎಂಬುವರನ್ನು 2ನೇ ವಿವಾಹವಾಗಿದ್ದು , ಇವರಿಗೆ ಮೂರು ವರ್ಷದ ಗಂಡು ಮಗುವಿದೆ. ಪ್ರಪುಲ್ಲಾ ಪತಿಯೊಂದಿಗೆ ಜಗಳವಾಡಿಕೊಂಡು ಪತಿ ಗಿರೀಶ್‌ರನ್ನು ತೊರೆದು ತಾಯಿ ಮನೆಗೆ ಬಂದು ನೆಲೆಸಿದ್ದರು. ತಾಯಿ ಜೊತೆಯೂ ವಿನಾಕಾರಣ ಜಗಳವಾಡುತ್ತಿದ್ದರಿಂದ ಬೇರೆ ಮನೆ ಮಾಡಿಕೊಂಡು ತಾಯಿ ವಾಸವಿದ್ದರು. ಇತ್ತ ಪ್ರಪುಲ್ಲಾ ಒಬ್ಬರೇ ಮನೆಯಲ್ಲಿರುತ್ತಿದ್ದರು.

ಕಳೆದ ಶನಿವಾರ ರಾತ್ರಿ ಬೋವಿಪಾಳ್ಯದ ನಿವಾಸಿ ಪ್ರಪುಲ್ಲಾಳ ತಂದೆಯ ಸ್ನೇಹಿತರಾದ ಚಿದಾನಂದ ಅವರ ಮನೆಗೆ ಊಟಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯೆ ಪ್ರಪುಲ್ಲಾ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಗುಂಪು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ನಡೆಸಿ ಪರಾರಿಯಾಗಿತ್ತು. ಈ ಘಟನೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿತು. ಚೇಳೂರು ಠಾಣೆ ಸಬ್‌ಇನ್‌ಸ್ಪೆಕ್ಟರ್ ನದಾಫ್ ಪ್ರಕರಣ ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಮಂಜುನಾಥ್, ಶಿರಾ ಗ್ರಾಮಾಂತರ ಡಿವೈಎಸ್ಪಿ ವಿಜಯ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆಯೂ ದಿಗ್ಬ್ರಮೆ ವ್ಯಕ್ತಪಡಿಸಿದ್ದರು. ಆರೋಪಿಗಳ ಬಂಧನಕ್ಕಾಗಿ ಚೇಳೂರು ಠಾಣೆ ಸಬ್‌ಇನ್‌ಸ್ಪೆಕ್ಟರ್ ನದಾಫ್ ಅವರನ್ನೊಳಗೊಂಡ ಒಂದು ತಂಡ ಸಿಎಸ್‌ಪುರ ಠಾಣೆ ಸಬ್‌ಇನ್‌ಸ್ಪೆಕ್ಟರ್ ವಿಜಯಕುಮಾರ್, ಗುಬ್ಬಿ ಠಾಣೆ ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್, ಶಿರಾ ಠಾಣೆ ಇನ್‌ಸ್ಪೆಕ್ಟರ್ ಲಕ್ಷ್ಮಣ್, ಗುಬ್ಬಿ ಠಾಣೆ ಇನ್‌ಸ್ಪೆಕ್ಟರ್ ವೆಂಕಟರಮಣಪ್ಪ ಹಾಗೂ ಚಿತ್ರದುರ್ಗದ ಎಸ್.ಪಿ.ಅನುಚ್ಛೇದ್ ಸಹಕಾರದಿಂದ ಒಂದು ತಂಡ ಸೇರಿದಂತೆ ಒಟ್ಟು ಆರು ತಂಡ ರಚಿಸಲಾಗಿತ್ತು.

ಈ ತಂಡ ಎಲ್ಲಾ ಮೂಲಗಳಿಂದಲೂ ಮಾಹಿತಿ ಕಲೆ ಹಾಕಿ ಪುಪುಲ್ಲಾರ ತಾಯಿ ಮಹದೇವಮ್ಮ, ಗ್ರಾಮದ ಮಂಜುನಾಥ್ ಮತ್ತು ಚಿದಾನಂದ ಎಂಬುವರನ್ನು ಠಾಣೆಗೆ ಕರೆಸಿ ವಿವಿಧ ವಿಷಯಗಳನ್ನು ಸಂಗ್ರಹಿಸಿತ್ತು. ಈ ನಡುವೆ ಹೊಸದುರ್ಗದ ಬಡಾವಣೆಯೊಂದರ ನಿವಾಸಿ ರಂಗಪ್ಪ ಎಂಬುವರಿಗೆ ಕಳೆದ ಮೂರು ತಿಂಗಳಿನಿಂದ ಮಹದೇವಮ್ಮ, ಚಿದಾನಂದ ಅವರಿಂದ ಬಂದಿದ್ದ ದೂರವಾಣಿ ಕರೆ ಆಧಾರದ ಮೇಲೆ ವಿಶೇಷ ತಂಡಗಳು ರಂಗಪ್ಪನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಹಲವು ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಮಾಹಿತಿ ಆಧಾರದ ಮೇಲೆ ಕಾರ್ತಿಕ್ ರೆಡ್ಡಿ ಅವರು ಕಳ್ಳಂಬೆಳ್ಳ ಠಾಣೆ ಸಬ್‌ಇನ್‌ಸ್ಪೆಕ್ಟರ್ ಚಂದ್ರಶೇಖರ್, ಶಿರಾ ಗ್ರಾಮಾಂತರ ವೃತ್ತ ನಿರೀಕ್ಷ ರಾಮಕೃಷ್ಣ ನೇತೃತ್ವದಲ್ಲಿ ಮತ್ತೆರಡು ತಂಡ ರಚಿಸಿದ್ದರು. ಈ ತಂಡ ಹಲವು ಮಾಹಿತಿ ಕಲೆ ಹಾಕಿದ್ದು ಕಳೆದ ಮೂರು ತಿಂಗಳಿನಿಂದ ರಂಗಪ್ಪ ಎಂಬ ಹೆಸರಿನಲ್ಲಿ ಸಿಮ್ ಪಡೆದು ಸಬ್‌ಇನ್‌ಸ್ಪೆಕ್ಟರ್ ಗಿರೀಶ್ ದೂರವಾಣಿ ಸಂಭಾಷಣೆ ನಡೆಸುತ್ತಿದ್ದರೆಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಮೇರೆಗೆ ವಿಶೇಷ ತಂಡಗಳು ಸಬ್‌ಇನ್‌ಸ್ಪೆಕ್ಟರ್ ಗಿರೀಶ್ ಹುಡುಕಾಟದಲ್ಲಿ ತೊಡಗಿದ್ದು , ಸದ್ಯ ಗಿರೀಶ್ ಅವರ ಮೊಬೈಲ್ ಸ್ಥಗಿತಗೊಂಡಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿದೆ. ಗೌಪ್ಯ ಸ್ಥಳದಲ್ಲಿದ್ದಾರೆಂಬ ಮಾಹಿತಿ ಮೇರೆಗೆ ಸಬ್‌ಇನ್‌ಸ್ಪೆಕ್ಟರ್ ಗಿರೀಶ್ ಅವರನ್ನು ವಶ್ಕೆಕ ಪಡೆಯಲು ವಿಶೇಷ ತಂಡ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.

Comments are closed.