ಕರ್ನಾಟಕ

3 ಸಾವಿರ ಸರ್ಕಾರಿ ಶಾಲೆಗಳಿಗೆ ಬೀಗ

Pinterest LinkedIn Tumblr

keyಬೆಂಗಳೂರು, ಜೂ. ೬- ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ ೨೯೫೯ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಸರ್ಕಾರಿ ಶಾಲೆಯಲ್ಲಿ ೧೦ ವಿದ್ಯಾರ್ಥಿಗಳಿಗಿಂತ ಕಡಿಮೆ ಮಕ್ಕಳು ಇದ್ದರೆ ಅಂತಹ ಶಾಲೆಗಳನ್ನು ಮುಚ್ಚಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಅದರಂತೆ ಈ ಬಾರಿ ೨೯೫೮ ಶಾಲೆಗಳಿಗೆ ಬೀಗಬೀಳುವುದು ನಿಶ್ಚಿತವಾಗಿದೆ. ಏಕೆದಂತೆ ರಾಜ್ಯದ ೨೯೫೮ ಶಾಲೆಗಳಲ್ಲಿ ೧೦ ವಿದ್ಯಾರ್ಥಿಗಳಿಗಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಮುಂದಿನ ವರ್ಷ ೬೯೮೩ ಶಾಲೆಗಳಿಗೆ ಬೀಗ ಬೀಳುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಸರ್ಕಾರಿ ಶಾಲೆಗಳು ಇತಿಹಾಸದ ಪುಟ ಸೇರಲಿವೆ.
೨೦೧೫-೧೬ನೇ ಸಾಲಿನಲ್ಲಿ ೬೫೭ ಸರ್ಕಾರಿ ಶಾಲೆಗಳಲ್ಲಿ ೦-೫ ಮಕ್ಕಳಿದ್ದರೆ, ೧೨೫೭ ಶಿಕ್ಷಕರು ಈ ಶಾಲೆಗಳಲ್ಲಿದ್ದರು. ೨೦೧೬-೧೭ರಲ್ಲಿ ೨೩೦೧ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೬-೧೦ ಆದರೆ ೪೫೮೧ ಶಿಕ್ಷಕರಿದ್ದರು. ೨೦೧೭-೧೮ರಲ್ಲಿ ೬೮೯೩ ಶಾಲೆಗಳಲ್ಲಿ ೧೧-೨೦ ವಿದ್ಯಾರ್ಥಿಗಳಿದ್ದಾರೆ. ೧೫೨೬೫ ಶಿಕ್ಷಕರು ಇದ್ದಾರೆ. ೨೦೧೯-೨೦ರವೇಳೆಗೆ ೬೮೫೯ ಶಾಲೆಗಳಲ್ಲಿ ೩೧-೫೦ ವಿದ್ಯಾರ್ಥಿಗಳು ಮತ್ತು ೨೨೧೯೪ ಶಿಕ್ಷಕರು ಇರುತ್ತಾರೆ. ಒಟ್ಟಾರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷ ಹೋದಂತೆ ಇಳಿಮುಖವಾಗುತ್ತದೆ. ಶಿಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದ ನಿರ್ಧಾರದಂತೆ ಪ್ರತಿವರ್ಷ ಮುಚ್ಚುವ ಶಾಲೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ.
೨೦೧೯-೨೦ರಲ್ಲಿ ೨೨೧೭೦ ಶಾಲೆಗಳು ಮುಚ್ಚಲ್ಪಡುತ್ತವೆ. ೨೦೧೯-೨೦ರಲ್ಲಿ ೫೬೯೦೮ ಶಿಕ್ಷಕರು ಹೆಚ್ಚುವರಿಯಾಗಿರುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಮೇ ೨೧ರಂದು ಹೊರಡಿಸಿದ ಸುತ್ತೋಲೆಯಂತೆ ಪ್ರಥಮ ಹಂತದಲ್ಲಿ ೭ ಶೈಕ್ಷಣಿಕ ಜಿಲ್ಲೆಗಳಲ್ಲಿ ೭೯೧ ಶಾಲೆಗಳನ್ನು ಮುಚ್ಚುವ, ವಿಲೀನಗೊಳಿಸುವ ನಿರ್ಧಾರ ಕೈಗೊಂಡಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ವಿಧಾನಸಭಾ ಕ್ಷೇತ್ರಗಳೂ ಸೇರಿದೆ ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿ.

ಪ್ರಥಮ ಹಂತದಲ್ಲಿ ಮುಚ್ಚಲ್ಪಡುವ ಶಾಲೆಗಳ ವಿವರ
ಸರ್ಕಾರದ ಸುತ್ತೋಲೆಯಂತೆ ಮೊದಲ ಹಂತದಲ್ಲಿ ೧೦ ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಲಾಗುತ್ತದೆ. ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ೬೩ ಶಾಲೆಗಳು, ಬೀದರ್ ೫೬, ಕೊಡಗು ೩೯, ಮಂಡ್ಯ ೧೯೧, ಮೈಸೂರು ೯೮ (ಮುಖ್ಯಮಂತ್ರಿಯವರ ಕ್ಷೇತ್ರ ಸೇರಿ), ರಾಮನಗರ ೧೭೭, ಶಿವಮೊಗ್ಗ ೧೬೭ (ಶಿಕ್ಷಣ ಸಚಿವರ ಕ್ಷೇತ್ರ ಸೇರಿದೆ) ಸೇರಿದಂತೆ ಒಟ್ಟು ೭೯೧ ಶಾಲೆಗಳು ಮುಚ್ಚಲ್ಪಡುತ್ತವೆ.
೧೦ ವಿದ್ಯಾರ್ಥಿಗಳಿಗಿಂತ ಕಡಮೆ ವಿದ್ಯಾರ್ಥಿಗಳಿದ್ದರೆ ಅದನ್ನು ಹತ್ತಿರದ ಸರ್ಕಾರಿ ಶಾಲೆ ಅಥವಾ ಅನುದಾನಿತ ಶಾಲೆಗಳೊಂದಿಗೆ ವಿಲೀನಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ಆ ಮಕ್ಕಳನ್ನು ಹತ್ತಿರದ ಶಾಲೆಗೆ ಸ್ಥಳಾಂತರಿಸಬೇಕು. ಅವರಿಗೆ ಸಾರಿಗೆ ಮತ್ತು ಸಮವಸ್ತ್ರ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಿದೆ. ಹಾಗಾಗಿ ಈ ವರ್ಷ ೨೯೫೯ ಶಾಲೆಗಳನ್ನು ಮುಚ್ಚಲಾಗುತ್ತದೆ.
ಎರಡನೆ ಹಂತದಲ್ಲಿ ಬೆಂಗಳೂರು ದಕ್ಷಿಣದಲ್ಲಿ ೧೯, ಬೆಂಗಳೂರು ದಕ್ಷಿಣ ೪೨, ಬೆಂಗಳೂರು ಗ್ರಾಮಾಂತರ ೧೪೬, ಬಾಗಲಕೋಟೆ ೧೦, ಚಿಕ್ಕೋಡಿ ೬೪, ಬಳ್ಳಾರಿ ೧೪, ಬಿಜಾಪುರ ೫೦, ಚಾಮರಾಜನಗರ ೪೭, ಚಿಕ್ಕಮಗಳೂರು ೨೦೩, ಚಿಕ್ಕಬಳ್ಳಾಪುರ ೧೬೦, ಚಿತ್ರದುರ್ಗ ೮೦, ದಕ್ಷಿಣ ಕನ್ನಡ ೨೫, ದಾವಣಗೆರೆ ೫೩, ಧಾರವಾಡ ೯, ಗದಗ ೨, ಯಾದಗಿರಿ ೬, ಗುಲ್ಬರ್ಗ ೫೦, ಹಾಸನ ೩೨೦, ಹಾವೇರಿ ೧೭, ಕೋಲಾರ ೧೯೯, ಕೊಪ್ಪಳ ೧೨, ರಾಯಚೂರು ೨೫, ರಾಯಚೂರು ೨೫, ಮಧುಗಿರಿ ೧೧೨, ತುಮಕೂರು ೨೦೬, ಉಡುಪಿ ೨೫, ಉತ್ತರಕನ್ನಡ ೧೧೬, ಸಿರಸಿ ೧೫೬ ಸೇರಿದಂತೆ ಒಟ್ಟು ೨೧೬೮ ಶಾಲೆಗಳು ಮುಚ್ಚಲ್ಪಡುತ್ತವೆ. ಇದು ಇದೇ ರೀತಿ ಮುಂದುವರಿದರೆ ೨೦೧೯-೨೦ರವೇಳೆಗೆ ೨೨೧೭೦ ಶಾಲೆಗಳನ್ನು ಮುಚ್ಚಬೇಕಾಗುತ್ತದೆ.
ಇದರ ವಿರುದ್ಧ ಎಸ್‌ಡಿಎಂಸಿ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಹೋರಾಟಕ್ಕೆ ಮುಂದಾಗಿದ್ದು, ಈಗಾಗಲೇ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರದ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿರುವ ಪ್ರಾಮಾಣಿಕ ಅಧಿಕಾರಿಗಳು ಸರ್ಕಾರದ ನಿಲುವಿಗೆ ವಿರೋಧವಿದ್ದಾರೆ. ಶಿಕ್ಷಣ ಡಾ. ನಿರಂಜನಾರಾಧ್ಯ ಅವರು ಈಗಾಗಲೇ ಹೋರಾಟದ ರೂಪುರೇಷೆ ಸಿದ್ಧಪಡಿಸಿ, ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟವರ ಗಮನಕ್ಕೆ ಈ ವಿಷಯ ತಂದು ಸರ್ಕಾರಿ ಶಾಲೆ ಉಳಿಸಲು ಒತ್ತಾಯಿಸಿದ್ದಾರೆ. ನಾಗರಿಕ ಸಂಘಟನೆಗಳು ಕೂಡ ಅವರ ಜೊತೆ ಕೈಜೋಡಿಸುವ ಭರವಸೆ ನೀಡಿದೆ.

Comments are closed.