ಕರ್ನಾಟಕ

ಮಂಡ್ಯ: ಡಿಎಆರ್‌ ಕಾನ್‌ಸ್ಟೆಬಲ್‌ ರಾಮಕೃಷ್ಣ ವಜಾ –ಎಸ್ಪಿ ಆದೇಶ

Pinterest LinkedIn Tumblr

WhatsAppಮಂಡ್ಯ: ನಗರದಲ್ಲಿ ಶನಿವಾರ ಮುಷ್ಕರ ಮಾಡಿದ್ದ ಸಶಸ್ತ್ರ ಮೀಸಲು ಪಡೆಯ ಕಾನ್ ಸ್ಟೆಬಲ್ ಎನ್‌. ರಾಮಕೃಷ್ಣ ಅವರನ್ನು ಸೇವೆಯಿಂದ ವಜಾ ಮಾಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಎಚ್‌. ಸುಧೀರಕುಮಾರ ರೆಡ್ಡಿ ಆದೆಶಿಸಿದ್ದಾರೆ.

ನಿಗೂಢ ಮತ್ತು ಪ್ರಕಟ ಕೃತ್ಯಗಳಿಂದ ನೀವು ನಿಮ್ಮ ಪೊಲೀಸ್‌ ಸಹೋಧ್ಯೋಗಿಗಳಲ್ಲಿ ಕ್ರಾಂತಿಕಾರಿ ಮನೋಭಾವವನ್ನು ಉಂಟು ಮಾಡಲು ಪ್ರೇರೇಪಿಸುತ್ತಿದ್ದು ಹಾಗೂ ಪೊಲೀಸರಿಗೆ ಮುಷ್ಕರಕ್ಕೆ ಪ್ರೇರಣೆ, ಇಲಾಖೆ ಶಿಸ್ತು ನಾಶ ಕಾರಣಕ್ಕೆ ಭಾರತ ಸಂವಿಧಾನ ಅನುಚ್ಚೇದ 311(2)ರ ಅಡಿ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಮಕೃಷ್ಣ ಅವರು 13 ವರ್ಷದಿಂದ ಡಿಎಅರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಆದೇಶ ಪ್ರತಿಯ ಸಾರ:

ಎನ್‌. ರಾಮಕೃಷ್ಣ ಬಿನ್‌ ನಿಂಗೇಗೌಡ ಎಪಿಸಿ 189 ಆದ ನೀವು ಮಂಡ್ಯ ಜಿಲ್ಲೆಯ ಸಶಸ್ತ್ರ ಮಿಸಲು ಪಡೆಯಲ್ಲಿ ಕಳೆದ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೀರಿ.

ಮೈಸೂರು ಜಿಲ್ಲೆ ಅಪರ ಪೊಲೀಸ್‌ ಅಧೀಕ್ಷಕರು ಹಾಗೂ ಮಂಡ್ಯ ಜಿಲ್ಲೆ ಗ್ರಾಮಾಂತರ ಇನ್‌ಸ್ಪೆಕ್ಟರ್‌ ಅವರು ನೀಡಿರುವ ವರದಿ ಆಧಾರದ ಮೇಲೆ ನೀವು ಮಂಡ್ಯ ಜಿಲ್ಲೆ ಪೊಲೀಸರನ್ನು ಮುಷ್ಕರ ಮಾಡುವುದಕ್ಕೆ ಪ್ರೇರೇಪಿಸುತ್ತಿರುವುದು ಕಂಡುಬಂದಿದೆ. ಈ ವರದಿಯಂತೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿರುತ್ತಾರೆ.

ನೀವು ಮಂಡ್ಯ ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯಲ್ಲಿ ಇಲಾಖೆಯ ಶಿಸ್ತನ್ನು ನಾಶಪಡಿಸುವಂತಹ ಹಾಗೂ ಇಲಾಖೆಯು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಲು ಅಸಾಧ್ಯವಾಗಿಸುವ ಕೃತ್ಯಗಳಲ್ಲಿ ತೊಡಗಿರುತ್ತೀರಿ.

ಮೈಸೂರು ಜಿಲ್ಲೆ ಅಪರ ಪೊಲೀಸ್‌ ಅಧೀಕ್ಷಕರು ಹಾಗೂ ಮಂಡ್ಯ ಜಿಲ್ಲೆ ಗ್ರಾಮಾಂತರ ಇನ್‌ಸ್ಪೆಕ್ಟರ್‌ ಅವರ ವರದಿಯಂತೆ ನೀವು ಇಲಾಖೆ ಶಿಸ್ತನ್ನೇ ಶೂನ್ಯೀಕರಿಸುವ ಮತ್ತು ಇಲಾಖೆಯ ಸಮರ್ಪಕ ಕಾರ್ಯ ನಿರ್ವಹಣೆಯನ್ನು ತಟಸ್ಥಗೊಳಿಸುವಂತಹ ಅತ್ಯಂತ ಗಂಭೀರವಾದಂತಹ ಕೆಲಸಗಳಲ್ಲಿ ತೊಡಗಿರುತ್ತೀರಿ ಎಂದು ನಾನು ಅಭಿಪ್ರಾಯಪಟ್ಟಿರುತ್ತೇನೆ.

ನಿಮ್ಮನ್ನು ಸೇವೆಯಲ್ಲೇ ಮುಂದುವರಿಸಿದಲ್ಲಿ ಅದು ಪೊಲೀಸ್ ಇಲಾಖೆಯ ಶಿಸ್ತಿಗೆ, ಸಾಮಾನ್ಯ ಜನರ ಸುರಕ್ಷತೆ ಮತ್ತು ಭದ್ರತೆಗೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ವಿನಾಶಕಾರಿಯಾಗುತ್ತದೆ. ಈಗ ಅಸ್ಥಿತ್ವದಲ್ಲಿರುವ ಸಂದರ್ಭದಲ್ಲಿ ನಿಮ್ಮ ನಿಗೂಢ ಮತ್ತು ಪ್ರಕಟ ಕೃತ್ಯಗಳಿಂದ ನೀವು ನಿಮ್ಮ ಪೊಲೀಸ್‌ ಸಹೋಧ್ಯೋಗಿಗಳಲ್ಲಿ ಕ್ರಾಂತಿಕಾರಿ ಮನೋಭಾವವನ್ನು ಉಂಟು ಮಾಡಲು ಪ್ರೇರೇಪಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಈ ಆದೇಶದ ಜೊತೆಗೆ ದಾಖಲಿಸಿದ ಕಾರಣಗಳಿಂದ ನಿಮ್ಮ ಮೇಲೆ ವಿಚಾರಣೆಯನ್ನು ನಡೆಸುವುದು ಯುಕ್ತವಾಗಿ ಕಾರ್ಯಸಾಧ್ಯವಲ್ಲವೆಂದು ಮನದಟ್ಟಾಗಿರುವುದರಿಂದ ಶ್ರೀ ಸುಧೀರ ಕುಮಾರ ರೆಡ್ಡಿ. ಐಪಿಎಸ್‌, ಪೊಲೀಸ್‌ ಅಧೀಕ್ಷಕರು ಮತ್ತು ಶಿಸ್ತು ಪ್ರಾಧಿಕಾರಿ, ಮಂಡ್ಯ ಜಿಲ್ಲೆ ಆದ ನಾನು ಶ್ರೀ ಎನ್‌. ರಾಮಕೃಷ್ಣ ಎಪಿಸಿ 189, ಡಿಎಆರ್‌ ಮಂಡ್ಯ ಆದ ನಿಮ್ಮ ವಿರುದ್ಧ ಭಾರತ ಸಂವಿಧಾನ ಅನುಚ್ಚೇದ 311(2)ರ ಪ್ರಕಾರ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತೇನೆ.

ಆದೇಶ ಸಂ: ಸಿಬ್ಬಂದಿ(2)/31/2016–17, ಓ.ಬಿ. ಸಂ: 130/16–17, ದಿನಾಂಕ: 04/06/2016
ಶ್ರೀ ಎನ್‌. ರಾಮಕೃಷ್ಣ ಎಪಿಸಿ 189, ಡಿಎಆರ್‌, ಮಂಡ್ಯ ಜಿಲ್ಲೆ ಆದ ನಿಮ್ಮನ್ನು ಮೇಲ್ಕಂಡ ಕಾರಣಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ(Dismisssed From Service).

(ಸಿ.ಎಚ್‌. ಸುಧೀರ ಕುಮಾರ ರೆಡ್ಡಿ)
ಶಿಸ್ತು ಪ್ರಾಧಿಕಾರ ಮತ್ತು ಪೊಲೀಸ್‌ ಅಧೀಕ್ಷಕರು,
ಮಂಡ್ಯ ಜಿಲ್ಲೆ

Comments are closed.