ಕರ್ನಾಟಕ

ಟಿವಿ ವಿರುದ್ಧ ಸಂತ್ರಸ್ತ ಶಾಸಕರ ಧರಣಿ

Pinterest LinkedIn Tumblr

tvಬೆಂಗಳೂರು, ಜೂ. ೩- ಕೆಲವು ರಾಷ್ಟ್ರೀಯ ಟಿವಿ ವಾಹಿನಿಗಳು ಚುಟುಕು ಕಾರ್ಯಾಚರಣೆ ನೆಪದಲ್ಲಿ ತಮ್ಮ ತೇಜೋವಧೆ ಮಾಡಿವೆ ಎಂದು ಆರೋಪಿಸಿ ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್. ಪಾಟೀಲ್ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಮೌನ ಧರಣಿ ನಡೆಸಿದರು.
ಕಪ್ಪುಪಟ್ಟಿ ಧರಿಸಿ ಇಂದು ಬೆಳಗ್ಗೆಯಿಂದಲೆ ಧರಣಿ ಕುಳಿತಿರುವವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬಯಸದೆ ಮೌನ ಧರಣಿ ಮುಂದುವರೆಸಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದ ಅವರು, ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳು ತಮ್ಮ ಚಾರಿತ್ರ್ಯ ವಧೆ ಮಾಡಿವೆ. ಚುಟುಕು ಕಾರ್ಯಾಚರಣೆ ನೆಪದಲ್ಲಿ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿಯೂ ಹೇಳಿದ್ದು ಇದರಿಂದ ತಮ್ಮ ಚಾರಿತ್ರ್ಯ ವಧೆ ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿದರು.
ಇದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದರು.
ವಾಹಿನಿಗಳ ಈ ಧೋರಣೆಯಿಂದಾಗಿ ನಮ್ಮ ಕುಟುಂಬ ಸದಸ್ಯರು ಏನಾದರೂ ಅನಾಹುತ ಮಾಡಿಕೊಂಡರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕೆಂದು ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದರು.
ಘಟನೆಯಿಂದ ತೀರಾ ನೊಂದಂತೆ ಕಂಡು ಬಂದ ಬಿ.ಆರ್. ಪಾಟೀಲ್, ಪತ್ರಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಸಮಾಧಾನಪಡಿಸಿದ ಸಿ.ಎಂ.
ಭಾವೋದ್ವೇಗಕ್ಕೆ ಒಳಗಾಗಿದ್ದ ಪಾಟೀಲ್ ಅವರನ್ನು ಸಮಾಧಾನಪಡಿಸಿದ ಸಿದ್ಧರಾಮಯ್ಯ, ನಿನ್ನ ಬಗ್ಗೆ ಯಾರೇ ಏನೇ ಆರೋಪ ಮಾಡಿದರೂ ಯಾರೂ ನಂಬಲ್ಲ. ಬೇಸರಪಟ್ಟುಕೊಳ್ಳಬೇಡ. ಭಾವೋದ್ವೇಗಕ್ಕೆ ಒಳಗಾಗುವುದು ಬೇಡ ಎಂದು ಧೈರ್ಯ ತುಂಬಿದರು.
ತನಿಖೆ ಮಾಡಿಸಬೇಕೆಂಬ ಪಾಟೀಲ್ ಒತ್ತಾಯಕ್ಕೆ ಸ್ಪಂದಿಸಿದ ಅವರು, ತನಿಖೆ ಮಾಡೋಣ ಎಂದು ಹೇಳಿದರು.

Comments are closed.