ಕರ್ನಾಟಕ

ಮಳೆ ಅವಾಂತರ ಗೋಡೆ ಕುಸಿದು ೧೫ ವಾಹನಗಳಿಗೆ ಹಾನಿ

Pinterest LinkedIn Tumblr

rainಬೆಂಗಳೂರು, ಜೂ ೨: ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಜೆಪಿ ನಗರ ೨ನೇ ಹಂತದ ರಾಗಿಗುಡ್ಡ ವಿವೇಕಾನಂದ ವಸತಿ ಗೃಹವೊಂದರ ಗೋಡೆ ಕುಸಿದು ಆಟೋ ಸೇರಿ ೧೫ಕ್ಕೂ ಅಧಿಕ ದ್ವಿಚಕ್ರ ಜಖಂಗೊಂಡಿವೆ.
ಆಟೋ ತೊಳೆಯುತ್ತಿದ್ದ ಚಾಲಕ ಘಟನೆಯಿಂದ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಪೌಂಡ್ ೧೫೦ ಅಡಿ ಉದ್ದವಿದ್ದು, ಮಳೆಯಿಂದ ಅದರ ಕೆಳಭಾಗ ಕುಸಿದು ಈ ದುರ್ಘಟನೆ ನಡೆದಿದೆ. ಸಿಮೆಂಟ್ ಇಟ್ಟಿಗೆಗಳಿಂದ ಈ ಕಾಂಪೌಂಡ್ ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿ ನಡೆದಿರುವುದರಿಂದ ಇದು ಕುಸಿದಿದೆ ಎಂದು ಸ್ಥಳೀಯರು ಅರೋಪಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಆರು ನಿಮಿಷ ಕಾಲ ಮೆಟ್ರೊ ಸ್ಥಗಿತ
ಭಯ್ಯಪ್ಪನಹಳ್ಳಿ ಟರ್ಮಿನಲ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಪರಿಣಾಮ ಆರು ನಿಮಿಷಗಳ ಕಾಲ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಇಂದು ಬೆಳಗ್ಗೆ ೯.೨೬ರಿಂದ ೯.೩೩ರವರೆಗೆ ರೈಲು ಸಂಚಾರ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಗಾಬರಿಗೊಂಡರು. ತಕ್ಷಣ ಮೆಟ್ರೊ ಸಿಬ್ಬಂದಿ ಸಮಸ್ಯೆ ಬಗೆಹರಿಸಿದ್ದರಿಂದ ರೈಲು ಸಂಚಾರ ಆರಂಭಗೊಂಡಿತು.

ತಗ್ಗು ಪ್ರದೇಶ ಜಲಾವೃತ
ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಭಾರಿ ಮಳೆಯಿಂದ ನಗರದ ತಗ್ಗುಪ್ರದೇಶ ಜಲಾವೃತವಾಗಿದ್ದು, ಇಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಿದ್ದರಿಂದ ಅವರು ರಾತ್ರಿ ಪೂರ್ತಿ ಜಾಗರಣೆ ಮಾಡುವಂತಾಯಿತು. ಕೆಳಸೇತುವೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಕೆಲವೆಡೆ ಮರಗಳು ಉರುಳಿದ್ದರಿಂದ ಸಂಚಾರ ಅಡಚಣೆಯುಂತಾದ ಬಗ್ಗೆ ವರದಿಯಾಗಿದೆ.
ಶಿವಾಜಿನಗರದ ಸಾಕಷ್ಟು ರಸ್ತೆಗಳು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಮಳೆ ಬರುತ್ತಿದ್ದಂತೆ ಇಲ್ಲಿನ ರಸ್ತೆಗಳಲ್ಲಿ ನೀರು ತುಂಬಿಕೊಳ್ಳಲು ಆರಂಭವಾಗುತ್ತದೆ. ಇದರಿಂದಾಗಿ ಇಲ್ಲಿನ ವ್ಯಾಪಾರಿಗಳು ಮಳೆ ಬಂದರೆ ನಿದ್ದೆಗೆಡುವಂತಾಗಿದೆ.
ಒಂದೇ ವಾರದಲ್ಲಿ ನಾಲ್ಕು ಬಾರಿ ರಸ್ತೆಯಲ್ಲಿ ನೀರು ತುಂಬಿ ಸಮಸ್ಯೆ ಎದುರಾಗುತ್ತಿದೆ. ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿರುವುದರಿಂದ ನಮ್ಮ ವ್ಯಾಪಾರಕ್ಕೆ ನಷ್ಟವನ್ನುಂಟು ಮಾಡುತ್ತಿದೆ ಎಂದು ವ್ಯಾಪಾರಿಯೊಬ್ಬರು ಹೇಳಿಕೊಂಡಿದ್ದಾರೆ.
ಮಳೆ ಬಂದಾಗ ಎರಡು ಅಡಿಗಳಷ್ಟು ನೀರು ರಸ್ತೆಯಲ್ಲಿ ತುಂಬುತ್ತದೆ. ಇದರಿಂದಾಗಿ ರಸ್ತೆಗಳು ಚಿಕ್ಕದ್ದಾದ್ದರಿಂದ ಟ್ರಾಫಿಕ್ ಸಮಸ್ಯೆಗಳು ಎದುರಾಗುತ್ತದೆ. ಇನ್ನು ರಸ್ತೆಗಳಲ್ಲಿ ಈ ರೀತಿಯ ಸಮಸ್ಯೆಗಳು ಎದುರಾದರೆ ಗ್ರಾಹಕರು ಹಣ್ಣನ್ನು ಕೊಳ್ಳಲು ಬರುವುದಿಲ್ಲ. ಹೀಗಾಗಿ ಯಾವುದೇ ದಾರಿಯಿಲ್ಲದೆ, ವ್ಯಾಪಾರವನ್ನು ನಿಲ್ಲಿಸಿ ಮನೆಗೆ ತೆರಳುತ್ತೇನೆಂದು ಮಾವಿನ ಹಣ್ಣಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರದ ಸಮಯದಲ್ಲಿ ರಜೆಯಲ್ಲಿರುತ್ತಾರೆ. ಒಂದು ವೇಳೆ ಭಾನುವಾರದ ದಿನದ ಮಳೆ ಬಂದರೆ ಸಮಸ್ಯೆ ಆಲಿಸುವವರು ಯಾರೂ ಇರುವುದಿಲ್ಲ. ಒಳಚರಂಡಿಗಳ ನೀರು ಹೋಟೆಲ್ ಒಳಗೆ ನುಗ್ಗುತ್ತಿರುತ್ತದೆ. ಮಳೆ ವೇಳೆ ಅಪಘಾತಗಳು ಆಗುವುದಿಲ್ಲ. ಒಳಚರಂಡಿಗಳ ನೀರು ಹರಿಯುತ್ತಿದ್ದರೂ ಜನರು ವಾಹನಗಳಲ್ಲಿ ಓಡಾಡುತ್ತಿರುತ್ತಾರೆ. ಒಳಚರಂಡಿ ನೀರು ಹೋಟೆಲ್ ನುಗ್ಗುವುದರಿಂದ ಗ್ರಾಹಕರು ಹೋಟೆಲ್ ಗೆ ಬರುವುದಿಲ್ಲ. ಇದರಿಂದಾಗಿ ಹೋಟೆಲ್ ಗೆ ನಷ್ಟವುಂಟಾಗುತ್ತದೆ ಎಂದು ಎಂದು ಹೋಟೆಲ್ ನ ಮಾಲೀಕರೊಬ್ಬರು ಹೇಳಿದ್ದಾರೆ.
ಮಳೆ ಬಂದಾಗ ನಾವು ಅಸಹಾಯಕರಾಗುತ್ತೇವೆ. ನಮ್ಮ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ನಮ್ಮ ಸಮಸ್ಯೆಗಳ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಶಿವಾಜಿನಗರದಲ್ಲಿ ವ್ಯಾಪಾರ ಹೆಚ್ಚಾಗಿ ಆಗುವುದರಿಂದ ನಮಗೆ ಬೇರೆ ಪ್ರದೇಶಕ್ಕೆ ಹೋಗಿ ವ್ಯಾಪಾರ ಮಾಡಲು ಇಷ್ಟವಿಲ್ಲ ಎಂದು ಚಪ್ಪಲಿ ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ.
ಶಿವಾಜಿನಗರ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ ೪೦ ವರ್ಷಗಳಿಂದಲೂ ಹೂವಿನ ವ್ಯಾಪರ ಮಾಡುತ್ತಿದ್ದೇನೆ. ಮಳೆ ಬಂದರೆ ರಸ್ತೆಗಳಲ್ಲಿ ನೀರು ತುಂಬುತ್ತದೆ. ಈ ವೇಳೆ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ವ್ಯಾಪಾರವನ್ನು ನಿಲ್ಲಿಸಿಬಿಡುತ್ತೇನೆ. ವ್ಯಾಪಾರವಾಗದೆ ಹೂವು ಒಣಗಿ ನಷ್ಟವನ್ನುಂಟು ಮಾಡುತ್ತದೆ ಎಂದು ರಚಿಮಿ ಹೂವಿನ ವ್ಯಾಪಾರಿ ಹೇಳಿಕೊಂಡಿದ್ದಾರೆ.

Comments are closed.