ಕರ್ನಾಟಕ

ಜೂನ್ 6ರಂದು ಪೆಟ್ರೋಲ್ ವಿತರಕರ ಮುಷ್ಕರ

Pinterest LinkedIn Tumblr

petrol-dieselಬೆಂಗಳೂರು, ಜೂ. ೨- ದೇವನಗುಂದಿಯಿಂದ ಇಂಧನ ಸಾಗಾಣಿಕಾ ಕೇಂದ್ರದಲ್ಲಿನ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (ಬಿಪಿಡಿಎ) ಜೂನ್ 6ರಂದು ಮುಷ್ಕರ ನಡೆಸಲು ನಿರ್ಧರಿಸಿದೆ.
ದೇವನಗುಂದಿ ಗ್ರಾಮೀಣ ಭಾಗವಾದ್ದರಿಂದ ಇಲ್ಲಿನ ರಸ್ತೆಗಳು ತೀರಾ ಕಿರಿದಾಗಿದ್ದು, ಪೆಟ್ರೋಲ್ ಟ್ಯಾಂಕರ್‌ಗಳು ಸಲೀಸಾಗಿ ಚಲಿಸುವಷ್ಟು ದೊಡ್ಡದಾಗಿಲ್ಲ. ಅಲ್ಲದೆ ಇಲ್ಲಿನ ರಸ್ತೆಗಳು ಮಳೆ ಮತ್ತು ಅತಿ ಭಾರದ ಲಾರಿಗಳ ಸಂಚಾರದಿಂದಾಗಿ ಸಂಪೂರ್ಣ ಹಾಳಾಗಿದೆ. ಇನ್ನು ಇಲ್ಲಿ ಲಾರಿ ಚಾಲಕರಿಗೆ ಉಳಿದುಕೊಳ್ಳಲು ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಎಂದು ಆರೋಪಿಸಿದೆ. ಅಲ್ಲದೆ ಈ ದೇವನಗುಂದಿಯಲ್ಲಿ ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು ಮತ್ತು ರಾಷ್ಟ್ರೀಯ ಹೆದ್ದಾರಿಗೆ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಪೆಟ್ರೋಲ್ ಡೀಲರ್ಸ್ ಅಸೋಷಿಯೇಷನ್ ಮುಷ್ಕರ ನಡೆಸಲು ಮುಂದಾಗಿದೆ.
ಹೊಸಕೋಟೆಯಿಂದ 12 ಕಿ.ಮೀ. ದೂರದಲ್ಲಿ ಎಚ್‌ಪಿಸಿಎಲ್, ಐಒಸಿ, ಬಿಪಿಸಿಎಲ್ ಕಂಪನಿಗಳಿದ್ದು, ಬೆಂಗಳೂರು ವಿಭಾಗಕ್ಕೆ ಪೆಟ್ರೋಲ್, ಡೀಸೆಲ್ ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ಬೆಂಗಳೂರು ನಗರಕ್ಕೆ ನಿತ್ಯ ಸುಮಾರು 600 ರಿಂದ 700 ಲೋಡ್ ಪೆಟ್ರೋಲ್ ಮತ್ತು ಡೀಸೆಲ್ ಅವಶ್ಯಕತೆ ಇದ್ದು, ಮುಷ್ಕರದಿಂದಾಗಿ ಪೆಟ್ರೋಲ್ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಳಾಗಿರುವ ರಸ್ತೆ ದುರಸ್ತಿ ಮಾಡಲು ಒತ್ತಾಯಿಸಿ ಬಿಪಿಡಿಎ ಬುಧವಾರ ಸಭೆ ನಡೆಸಿ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. 6ರೊಳಗೆ ಬೇಡಿಕೆಗೆ ಸ್ಪಂದಿಸಿದ್ದರೆ ಮುಷ್ಕರ ನಿರ್ಧಾರ ಕೈಬಿಡುವುದಾಗಿ ತಿಳಿಸಿದೆ ಬಿಪಿಡಿಎ ಹೇಳಿದೆ.
ಕಳೆದ ತಿಂಗಳು ಲಾರಿ ಮಾಲೀಕರು, ಚಾಲಕರ ಸಂಘಗಳು ಕಳೆದ ತಿಂಗಳು ದಿಢೀರ್ ಮುಷ್ಕರ ನಡೆಸಿದ್ದರು. ತಿಂಗಳೊಳಗೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಕಂಪನಿಗಳು ಭರವಸೆ ನೀಡಿದ್ದವು. ಆದರೆ, ಗಡುವು ಪೂರ್ಣಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮತ್ತೆ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಬಿಪಿಡಿಎ ತಿಳಿಸಿದೆ. ಬಿಪಿಡಿಎ ಮುಷ್ಕರದಿಂದ ರಾಜ್ಯದ ಇತರ ಭಾಗಗಳಿಗೆ ಇಂಧನ ಪೂರೈಕೆ ಸಮಸ್ಯೆಯಾಗದು. ಆದರೆ, ಬೆಂಗಳೂರು ವಿಭಾಗದ ಐದಾರು ಜಿಲ್ಲೆಗಳಲ್ಲಿ ಗ್ರಾಹಕರಿಗೆ ಸಮಸ್ಯೆಯಾಗಲಿದೆ.

Comments are closed.