ಕರ್ನಾಟಕ

ಸೀಮೆಎಣ್ಣೆ ವಿತರಣೆಗೆ ಕೂಪನ್

Pinterest LinkedIn Tumblr

Dinesh-Gunduraoಬೆಂಗಳೂರ, ಮೇ ೩೧- ಪಡಿತರ ಅಂಗಡಿಗಳ ಮೂಲಕ ವಿತರಿಸಲಾಗುತ್ತಿರುವ ಸೀಮೆಎಣ್ಣೆಯ ಅವ್ಯವಹಾರಗಳಿಗೆ ತಡೆ ಹಾಕಲು ಆಹಾರ ಇಲಾಖೆ ಸೀಮೆಎಣ್ಣೆ ವಿತರಣೆಗೆ ಆಧಾರ್ ಆಧಾರಿತ ಬಯೋಕೂಪನ್ ವ್ಯವಸ್ಥೆಯನ್ನು ಜಾರಿ ಮಾಡುತ್ತಿದೆ. ಇನ್ನು ಮುಂದೆ ಸೀಮೆಎಣ್ಣೆ ಪಡೆಯಲು ಈ ಕೂಪನ್‌ಗಳು ಕಡ್ಡಾಯವಾಗಲಿವೆ.
ಪ್ರಾಯೋಗಿಕವಾಗಿ ಈ ವ್ಯವಸ್ಥೆ 50 ಅಂಗಡಿಗಳಲ್ಲಿ ಜಾರಿಯಾಗಿದ್ದು, ಅದರ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದ ಎಲ್ಲ ಪಡಿತರ ಅಂಗಡಿಗಳಲ್ಲಿ ಜೂ. 1 ರಿಂದ ಸೀಮೆಎಣ್ಣೆ ವಿತರಣೆಗೆ ಈ ಬಯೋಕೂಪನ್ ವ್ಯವಸ್ಥೆ ಜಾರಿಯಾಗಲಿದೆ ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ಹೊಸ ವ್ಯವಸ್ಥೆಯ ಪ್ರಕಾರ ಪ‌ಡಿತರ ಚೀಟಿಯೊಂದಿಗೆ ಆಧಾರ್ ಹೊಂದಾಣಿಕೆ ಮಾಡಿಕೊಂಡಿರುವ ಕುಟುಂಬ ಒಬ್ಬ ಸದಸ್ಯರು ತಾಲ್ಲೂಕು ಆಹಾರ ಕಚೇರಿಗೆ ಅಥವಾ ಫೊಟೋ ಬಯೋಕೇಂದ್ರ ಬೆಂಗಳೂರು-1, ಜನಸ್ನೇಹಿ ಕೇಂದ್ರ ಇವುಗಳಿಗೆ ಹೋಗಿ ಬೆರಳಚ್ಚು ಅಥವಾ ಕಣ್ಣಿನ ಹೊಂದಾಣಿಕೆಯೊಂದಿಗೆ ಈ ಬಯೋಕೂಪನ್‌ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಂದಿನ ದಿನಗಳಲ್ಲಿ ಪಡಿತರಕ್ಕೂ ಕೂಪನ್ ಸದ್ಯಕ್ಕೆ ಸೀಮೆಎಣ್ಣೆಗೆ ಈ ಕೂಪನ್ ವ್ಯವಸ್ಥೆ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಪಡಿತರ ಧಾನ್ಯಗಳ ವಿತರಣೆಗೆ ಈ ವ್ಯವಸ್ಥೆಯನ್ನು ಜಾರಿ ಮಾಡುವುದಾಗಿ ಅವರು ಹೇಳಿದರು.
ಬೆಂಗಳೂರು ನಗರದ ಜತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ 10 ಅಂಗಡಿಗಳಲ್ಲಿ ಈ ಕೂಪನ್ ವ್ಯವಸ್ಥೆಯನ್ನು ಬರುವ ಜೂನ್ 1 ರಿಂದ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಜೂ. 15 ಕಡೆ ದಿನ
ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದಕ್ಕೆ ಜೂನ್ 15 ಕಡೆಯ ದಿನವಾಗಿದೆ. ಜೂ. 15ರ ಒಳಗೆ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಸೇರಿಸದಿದ್ದರೆ ಅಂತಹವರಿಗೆ ಪಡಿತರ ಸಿಗುವುದಿಲ್ಲ ಎಂದು ಸಚಿವ ದಿನೇಶ್‌ಗುಂಡೂರಾವ್ ಸ್ಪಷ್ಟಪಡಿಸಿದರು.
ಆಧಾರ್ ಸಂಖ್ಯೆ ಪಡಿತರ ಚೀಟಿಯ ಸದಸ್ಯರಿಗೆ ಪಡಿತರ ವಿತರಣೆ ಮಾಡುವ ಬಗ್ಗೆ 15 ರ ನಂತರ ಸರ್ಕಾರ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಉಪಸ್ಥಿತರಿದ್ದರು.

Comments are closed.