ಕರ್ನಾಟಕ

ಫುಟ್ಬಾಲ್ ಆಟಗಾರನ ಮೇಲೆ ಹಲ್ಲೆ ಮಾಡಿದ ನಟ ಸೂರ್ಯ

Pinterest LinkedIn Tumblr

surya

ಚೆನ್ನೈ: ಸಿಂಗಂ ಖ್ಯಾತಿಯ ನಟ ಸೂರ್ಯ ಫುಟ್ಬಾಲ್ ಆಟಗಾರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಮವಾರ ಸಂಜೆ ಚೆನ್ನೈನ ತಿರುವಿಕ ಸೇತುವೆ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಸಂಬಂಧ ಇಬ್ಬರು ಬೈಕ್ ಸವಾರರು ಕಾರು ಚಲಾಯಿಸುತ್ತಿದ್ದ ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ನಟ ಸೂರ್ಯ ಓರ್ವ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬೈಕ್ ಸವಾರರಲ್ಲಿ ಓರ್ವ ಪುಟ್ಬಾಲ್ ಆಟಗಾರನಾಗಿದ್ದು, ಆತನ ಮೇಲೆ ಸೂರ್ಯ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಫುಟ್ಬಾಲ್ ಆಟಗಾರ ಲೆನಿನ್ ಮ್ಯಾನ್ಯುಯೆಲ್ ಹಾಗೂ ಪ್ರೇಮ್ ಕುಮಾರ್ ಎಂಬ ಇಬ್ಬರು ಯುವಕರು ಫುಟ್ಬಾಲ್ ತರಬೇತಿಗಾಗಿ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಕಾರು ಇದ್ದಕ್ಕಿದಂತೆ ಬ್ರೇಕ್ ಹಾಕಿದೆ.

ಈ ವೇಳೆ ಬೈಕ್ ಕಾರಿಗೆ ಗುದ್ದಿದೆ. ಇದ್ದಕಿದ್ದಂತೆ ಬ್ರೈಕ್ ಹಾಕಿದ ಹಿನ್ನಲೆಯಲ್ಲಿ ಅಪಘಾತವಾಗಿದೆ ಎಂದು ಆರೋಪಿಸಿ ಕಾರು ಚಲಾಯಿಸುತ್ತಿದ್ದ ಮಹಿಳೆಯ ಬಳಿ ಬೈಕ್ ರೀಪೇರಿ ಹಣ ನೀಡುವಂತೆ ಯುವಕರು ವಾಗ್ವಾದಕ್ಕಿಳಿದಿದ್ದಾರೆ. ವಾಗ್ವಾದ ನಡೆಯುತ್ತಿದ್ದ ಹಿನ್ನಲೆಯಲ್ಲಿ ಆ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅದೇ ಮಾರ್ಗದಲ್ಲಿ ಸೂರ್ಯ ಅವರ ಕಾರು ಬಂದಿದೆ. ಸಮಸ್ಯೆ ಏನು ಎಂದು ಕಾರಿನಿಂದ ಇಳಿದ ನಟ ಅಪಘಾತ ಸ್ಥಳಕ್ಕೆ ಬಂದಿದ್ದಾರೆ.

ವಾಗ್ವಾದದ ನಡುವೆ ಪ್ರವೇಶಿಸಿದ ಸೂರ್ಯ ಅವರು ಮಹಿಳೆಯ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಕಿಡಿಕಾರಿ ಲೆನಿನ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮತ್ತೊಬ್ಬ ಬೈಕ್ ಸವಾರ ಪ್ರೇಮ್ ಕುಮಾರ್ ಆರೋಪಿಸಿದ್ದಾನೆ.

ಆದರೆ ಆರೋಪವನ್ನು ತಳ್ಳಿ ಹಾಕಿರುವ ಸೂರ್ಯ ಮ್ಯಾನೇಜರ್, ಕಾರು ಚಲಾಯಿಸಿದ ಮಹಿಳೆ ಹಿರಿಯರಾಗಿದ್ದು, ಅವರೊಂದಿಗೆ ಸಭ್ಯವಾಗಿ ವರ್ತಿಸಿ ಎಂದು ಯುವಕರಿಗೆ ಸೂರ್ಯ ಬುದ್ಧಿ ಹೇಳಿದ್ದಾರೆ. ಅಲ್ಲದೇ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ವಾಹನ ತೆಗೆಯುವಂತೆ ಸೂಚಿಸಿ ಅಲ್ಲಿಂದ ತೆರಳಿದ್ದಾರೆ. ಅವರು ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Comments are closed.