ಕರ್ನಾಟಕ

ಸರ್ಕಾರ–ಖಾಸಗಿ ಕಾಲೇಜು ನಡುವೆ ತಿಕ್ಕಾಟ ಆರಂಭ: ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಹಂಚಿಕೆ

Pinterest LinkedIn Tumblr

8787866ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆ ಕುರಿತಂತೆ ಈ ಬಾರಿಯೂ ಸರ್ಕಾರ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ನಡುವೆ ತಿಕ್ಕಾಟ ಆರಂಭವಾಗಿದೆ.

‘ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಮೂಲಕ ಮೆರಿಟ್‌ ಪಡೆದವರಿಗೆ ನೀಡಲಾಗುವುದು. ಖಾಸಗಿ ಕಾಲೇಜು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ’ ಎಂದು ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸಂಘದ ಕಾರ್ಯದರ್ಶಿ ಡಾ.ಎಂ.ಆರ್‌. ಜಯರಾಮ್ ಹೇಳಿದರು.

ಆದರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ‘ಎನ್‌ಇಇಟಿ ಪರೀಕ್ಷೆಯನ್ನು ಒಂದು ವರ್ಷ ಮುಂದೂಡಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ರಾಜ್ಯ ಸರ್ಕಾರಗಳು ಸರ್ಕಾರಿ ಕಾಲೇಜುಗಳ ಸೀಟುಗಳು ಮತ್ತು ಖಾಸಗಿ ಕಾಲೇಜುಗಳಲ್ಲಿ ಒಪ್ಪಂದದ ಪ್ರಕಾರ ಇರುವ ಸರ್ಕಾರಿ ಸೀಟುಗಳನ್ನು ಹಂಚಿಕೆ ಮಾಡಬಹುದು ಎಂದು ಹೇಳಿದೆ’ ಎಂದು ಹೇಳಿದ್ದಾರೆ. ಆ ಮೂಲಕ ಖಾಸಗಿ ಕಾಲೇಜುಗಳಲ್ಲಿಯೂ ಸರ್ಕಾರಿ ಸೀಟು ನೀಡಬೇಕು ಎಂಬ ವಾದವನ್ನು ಮಂಡಿಸಿದ್ದಾರೆ.

ಈ ಮಧ್ಯೆ ಸಿಇಟಿ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.

‘ವೈದ್ಯಕೀಯ ಕೋರ್ಸ್‌ಗಳ ಸೀಟುಗಳನ್ನು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಮೂಲಕವೇ ಭರ್ತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಪ್ರಕಾರವೇ ಸೀಟು ಹಂಚಿಕೆ ಮಾಡುತ್ತೇವೆ. ಈ ಪ್ರಕಾರ ಶೇ 85ರಷ್ಟು ಸೀಟುಗಳು ಎನ್‌ಇಇಟಿ ರ್ಯಾಂಕಿಂಗ್‌ ಮೂಲಕ ಮತ್ತು ಉಳಿದ ಶೇ 15ರಷ್ಟು ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ ಕೋಟಾ) ಹಂಚಿಕೆ ಮಾಡಲಾಗುವುದು’ ಎಂದು ಡಾ.ಜಯರಾಂ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಿಇಟಿಯಲ್ಲಿ ರ್ಯಾಂಕ್ ಪಡೆದವರಿಗೆ ಸರ್ಕಾರಿ ಕಾಲೇಜುಗಳಲ್ಲಿರುವ ಸೀಟುಗಳನ್ನು ಮಾತ್ರ ಸರ್ಕಾರ ಭರ್ತಿ ಮಾಡಿಕೊಳ್ಳಬಹುದು. ಸೀಟು ಹಂಚಿಕೆ ಸಂಬಂಧ ರಾಜ್ಯ ಸರ್ಕಾರ ಮತ್ತು ಖಾಸಗಿ ಕಾಲೇಜುಗಳು ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಈಗ ಮಾನ್ಯತೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಈ ಮೊದಲು ಒಂದು ಕಾಲೇಜಿನಲ್ಲಿ 100 ಸೀಟುಗಳು ಇದ್ದರೆ, ಅದರಲ್ಲಿ 40 ರಾಜ್ಯ ಸರ್ಕಾರಕ್ಕೆ (ಸಿಇಟಿ ಮೂಲಕ ಭರ್ತಿ ಮಾಡಲು), 45 ಸೀಟುಗಳು ಕಾಮೆಡ್‌–ಕೆ ರ್ಯಾಂಕಿಂಗ್‌ ಮೂಲಕ ಮತ್ತು ಉಳಿದ 15 ಸೀಟುಗಳನ್ನು ಅನಿವಾಸಿ ಭಾರತೀಯರ ಕೋಟಾದಡಿ ತುಂಬಲು ಅವಕಾಶ ಇತ್ತು. ಆದರೆ ಈ ಬಾರಿ ಎನ್ಇಇಟಿ ಪರೀಕ್ಷೆಯ ಮೆರಿಟ್‌ ಮೂಲಕವೇ ಹಂಚಿಕೆ ಮಾಡಲಾಗುತ್ತದೆ (ಎನ್‌ಆರ್‌ಐ ಕೋಟಾದವರಿಗೆ ಎನ್‌ಇಇಟಿ ಅನ್ವಯ ಆಗುವುದಿಲ್ಲ) ಎಂದರು.

ಶುಲ್ಕ ನಿಗದಿಯಾಗಿಲ್ಲ: ಎನ್‌ಇಇಟಿ ಮೂಲಕ ವೈದ್ಯಕೀಯ ಸೀಟುಗಳ ಹಂಚಿಕೆ ಮಾಡಿದರೆ ಶುಲ್ಕದಲ್ಲಿ ವ್ಯತ್ಯಾಸ ಅಗುತ್ತದೆಯೇ? ಎಂಬ ಪ್ರಶ್ನೆಗೆ, ‘ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಶುಲ್ಕ ನಿಗದಿ ಸಮಿತಿ ಇದೆ. ಕಾಲೇಜುಗಳಿಂದ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅಂತಿಮವಾಗಿ ಆ ಸಮಿತಿ ಎಷ್ಟು ಶುಲ್ಕ ನಿಗದಿ ಮಾಡುತ್ತದೋ ಅದೇ ಅನ್ವಯ ಆಗುತ್ತದೆ. ಸರ್ಕಾರವೇ ನೇಮಿಸಿದ ಪ್ರವೇಶ ಮೇಲ್ವಿಚಾರಣ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಕೌನ್ಸೆಲಿಂಗ್‌ ಸಂದರ್ಭದಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿ ಶುಲ್ಕ ಪಡೆದಲ್ಲಿ ದೂರು ಸಲ್ಲಿಸಬಹುದು’ ಎಂದು ಹೇಳಿದರು.

ಎಂಜಿನಿಯರಿಂಗ್‌ನಲ್ಲಿ ವ್ಯತ್ಯಾಸ ಇಲ್ಲ: ‘ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸೀಟುಗಳನ್ನು ರಾಜ್ಯ ಸರ್ಕಾರದೊಂದಿಗೆ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಹಂಚಿಕೆ ಮಾಡಲಾಗುವುದು’ ಎಂದು ಎ.ಎಸ್‌. ಶ್ರೀಕಾಂತ್‌ ಹೇಳಿದರು.

ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಎಂಜಿನಿಯರಿಂಗ್‌ ಸೀಟುಗಳಿವೆ. ಒಂದು ಕಾಲೇಜಿನಲ್ಲಿ ಎಷ್ಟು ಪ್ರವೇಶ ಮಿತಿ ಇದೆಯೋ ಅದರ ಶೇ 45ರಷ್ಟು ಸೀಟು ಸರ್ಕಾರಕ್ಕೆ (ಸಿಇಟಿ ರ್ಯಾಂಕ್ ಮೂಲಕ ಭರ್ತಿ ಮಾಡಲು), ಶೇ 30ರಷ್ಟು ಕಾಮೆಡ್‌–ಕೆ ಮೆರಿಟ್‌ ಮೂಲಕ ಹಂಚಿಕೆ ಮಾಡಲಾಗುವುದು. ಉಳಿದ ಶೇ 25ರಷ್ಟು ಸೀಟುಗಳು ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಎಂಜಿನಿಯರಿಂಗ್‌ ಶುಲ್ಕ ನಿಗದಿ: ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
‘ಕಾನೂನು ತಜ್ಞರ ಸಲಹೆ ಕೇಳಿದ್ದೇವೆ’ : ‘ವೈದ್ಯಕೀಯ ಸೀಟುಗಳ ಹಂಚಿಕೆಗೆ ಇನ್ನೂ ಸಮಯ ಇದೆ. ಈ ಕುರಿತು ಕಾನೂನು ಇಲಾಖೆಯ ಸಲಹೆ ಕೇಳಲಾಗಿದ್ದು, ಶೀಘ್ರದಲ್ಲಿಯೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಎನ್‌ಇಇಟಿ ಮಾತ್ರ ನಡೆಸಬೇಕು ಎಂದಷ್ಟೇ ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಸೀಟು ಹಂಚಿಕೆ ಬಗ್ಗೆ ತೀರ್ಪಿನಲ್ಲಿ ಯಾವುದೇ ಉಲ್ಲೇಖ ಇಲ್ಲ ಎಂದರು.

ನೀಟ್‌: ಸುಗ್ರೀವಾಜ್ಞೆಗೆ ತಡೆ ನೀಡಲು ‘ಸುಪ್ರೀಂ’ ನಕಾರ
ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರಗಳು ನಡೆಸುವ ಪರೀಕ್ಷೆಗಳ ಮೂಲಕವೇ ಸರ್ಕಾರಿ ಕಾಲೇಜುಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡಲು ಅನುವಾಗುವಂತೆ ಈಚೆಗೆ ಹೊರಡಿಸಿರುವ ಸುಗ್ರೀವಾಜ್ಞೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಕಾಮೆಡ್‌–ಕೆ ಫಲಿತಾಂಶ ಪ್ರಕಟ
ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಸಂಘ ಎಂಜಿನಿಯರಿಂಗ್‌ ಕೋರ್ಸ್‌ ಪ್ರವೇಶಕ್ಕೆ ನಡೆಸಿದ ಕಾಮೆಡ್‌–ಕೆ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.

ವಿದ್ಯಾರ್ಥಿಗಳು ಫಲಿತಾಂಶವನ್ನು ಶನಿವಾರ (ಇದೇ 28) ಬೆಳಿಗ್ಗೆ 12ರಿಂದ ವೆಬ್‌ಸೈಟ್‌ನಲ್ಲಿ (www.comedk.org) ನೋಡಬಹುದು.
ಎಂಜಿನಿಯರಿಂಗ್‌ನ 180 ಅಂಕಗಳ ಪ್ರವೇಶ ಪರೀಕ್ಷೆಯಲ್ಲಿ ಬೆಂಗಳೂರಿನ ರಾಮಮೂರ್ತಿನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಅಧೋಕ್ಷಜ ವಿ.ಮಧ್ವರಾಜ್ 170 ಅಂಕಗಳನ್ನು ಪಡೆದು ಮೊದಲ ರ್ಯಾಂಕ್ ಪಡೆದಿದ್ದಾನೆ. ಅಧೋಕ್ಷಜ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ 98ರಷ್ಟು ಅಂಕ ಗಳಿಸಿ ನಗರಕ್ಕೆ ಪ್ರಥಮ ಸ್ಥಾನ ಗಳಿಸಿದ್ದ.

ಮೊದಲ ಹತ್ತು ರ್ಯಾಂಕ್ ಗಳಲ್ಲಿ 7 ವಿದ್ಯಾರ್ಥಿಗಳು ಬೆಂಗಳೂರಿನವರು ಎಂಬುದು ವಿಶೇಷ.

ರಾಜ್ಯದವರ ಮೇಲುಗೈ
‘ಕಾಮೆಡ್‌ ಕೆ ಪರೀಕ್ಷೆಗೆ ಒಟ್ಟು 55,680 ವಿದ್ಯಾರ್ಥಿಗಳು ಹಾಜರಾಗಿದ್ದರು. ಮೊದಲ 1,000 ರ್‌್ಯಾಂಕ್‌ ಪಡೆದವರೆಲ್ಲರೂ ಶೇ 70ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ. ನಂತರದ 1,361 ವಿದ್ಯಾರ್ಥಿಗಳು ಶೇ 66ರಿಂದ 70ರಷ್ಟು ಅಂಕ ಪಡೆದಿದ್ದಾರೆ. 2,373 ವಿದ್ಯಾರ್ಥಿಗಳು ಶೇ 60ರಿಂದ 65ರಷ್ಟು ಅಂಕ ಗಳಿಸಿದ್ದಾರೆ. ಅಂತಿಮವಾಗಿ 6,854 ವಿದ್ಯಾರ್ಥಿಗಳು ಶೇ 60ಕ್ಕಿಂತ ಕಡಿಮೆ ಮತ್ತು ಶೇ 50ಕ್ಕಿಂತ ಹೆಚ್ಚಿನ ಅಂಕ ಪಡೆದವರಾಗಿದ್ದಾರೆ’ ಎಂದು ಕಾಮೆಡ್–ಕೆ ಮುಖ್ಯ ಕಾಯರ್ನಿವಾರ್ಹಕಾಧಿಕಾರಿ ಎ.ಎಸ್‌. ಶ್ರೀಕಾಂತ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ: ಮೊದಲ 100 ರ್ಯಾಂಕ್ ಪಡೆದವರ ಪೈಕಿ 56 ಮತ್ತು ಮೊದಲ 1000 ರ್ಯಾಂಕ್ ಪಡೆದವರಲ್ಲಿ 417 ವಿದ್ಯಾರ್ಥಿಗಳು ಕರ್ನಾಟಕದವರು’ ಎಂದರು.

ಮೊದಲ ಹತ್ತು ರ್ಯಾಂಕ್ ಪಡೆದವರು
* ಅಧೋಕ್ಷಜ ವಿ. ಮಧ್ವರಾಜ್‌– ಬೆಂಗಳೂರು

* ಆರ್‌. ರಾಹುಲ್‌– ಬೆಂಗಳೂರು
* ಸಾಯಿ ಹಿಮಲ್‌ ಅಲ್ಲು– ರಂಗಾರೆಡ್ಡಿ ಜಿಲ್ಲೆ (ತೆಲಂಗಾಣ)
* ಅರ್ವೇಟಿ ಶಿವ ಉಮಾ ಮಧುರ್– ಕರ್ನೂಲ್
* ಯಶವಂತ ಕುಮಾರ್‌ ತಿರುಪತಿ– ಬೇಗೂರು (ಬೆಂಗಳೂರು ನಗರ ಜಿಲ್ಲೆ)
* ಚೌಧರಿ ನಿತ್ಯಾ– ಅನಂತಪುರ ಜಿಲ್ಲೆ (ಆಂಧ್ರಪ್ರದೇಶ)
* ಎಚ್‌. ಆದಿತ್ಯ ಫಣೀಂದ್ರ– ಬೆಂಗಳೂರು
* ಎನ್‌. ದೀಕ್ಷಾ– ಬೆಂಗಳೂರು
* ಸಂತೋಷ್‌ ಸಾತ್ವಿಕ್‌ ಲಾಡೆ– ಬೆಂಗಳೂರು
* ಸುಂಕಂ ರಾಮಪ್ರಸಾದ್‌ ಸಾತ್ವಿಕ್– ಬೆಂಗಳೂರು

Comments are closed.