ಕರ್ನಾಟಕ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹುಟ್ಟಿದ್ದು ಚೆಲುವಾಂಬ ಆಸ್ಪತ್ರೆ

Pinterest LinkedIn Tumblr

jaya

ಈಚನೂರು ಕುಮಾರ್‌
ತಮಿಳುನಾಡು – ಸತತ ಎರಡನೇ ಬಾರಿಗೆ ಜಯಲಲಿತಾ ಅವರನ್ನು ಅವರ ಆಡಳಿತವನ್ನೂ ಆಯ್ಕೆ ಮಾಡಿದೆ. ಈಕೆಗೆ ಮೈಸೂರಿನ, ಅರಮನೆ, ಕನ್ನಡ ಚಿತ್ರರಂಗದ ಸಂಬಂಧವೂ ಇದೆ. ಈ ಹಿನ್ನೆಲೆಯನ್ನು ಈಗ ಗಮನಿಸುವುದು ಸಕಾಲಿಕ ಸಾಮಯಿಕವೂ ಆಗಿದೆ.

ಈಗ ತಮಿಳುನಾಡಿನ ಕಣ್ಮಣಿಯಾದ ‘ಅಮ್ಮಾ ’ಎನ್ನುವ ಜೆ.ಜಯಲಲಿತಾ ಅವರು 68 ವರ್ಷದ ಹಿಂದೆ ಕೃಷ್ಣರಾಜೇಂದ್ರ ಆಸ್ಪತ್ರೆಯ ಸಮುಚ್ಚಯದಲ್ಲಿರುವ ಚೆಲುವಾಂಬ ಆಸ್ಪತ್ರೆಯಲ್ಲಿ ಜನಿಸಿದರು. ಇವರ ತಂದೆ ಜಯರಾಂ. ತಾಯಿ ಸಂಧ್ಯಾ. ಜಯರಾಂ ಅವರ ಮೊದಲ ಪತ್ನಿ ಎಲ್.ಕೆ.ಜಯಮ್ಮಾಳ್. ಇವರ ಏಕೈಕ ಪುತ್ರರೇ ತಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರದಲ್ಲಿರುವ ಎನ್.ಜೆ. ವಾಸುದೇವನ್ ಅವರು. ಈ ಕುಟುಂಬದ ಹಿನ್ನೆಲೆ ಎಂದರೆ ವಂಶವೃಕ್ಷವನ್ನು ನನಗೆ 25 ವರ್ಷದ ಹಿಂದೆ ಜಯಲಲಿತಾ ಅವರ ಸೋದರ ವಾಸುದೇವನ್ ಅವರು ರಚಿಸಿಕೊಟ್ಟಿದ್ದನ್ನು ಮರೆತಿಲ್ಲ.

ಜಯಲಲಿತಾ ತಂದೆ ಜಯರಾಂ 1952ರಲ್ಲಿ ನಿಧನ ಹೊಂದಿದರು. ಆಗ ಜಯಲಲಿತಾಗೆ ಕೇವಲ 4 ವರ್ಷ. ಅನಂತರವೇ ಜಯಲಲಿತಾ ಕುಟುಂಬ ಮೈಸೂರಿನಿಂದ ಬೆಂಗಳೂರಿಗೆ ಹೋಗಿ ನೆಲೆಸುತ್ತದೆ. ಅಲ್ಲಿಯೇ ಇವರ ಅಜ್ಜಿ-ತಾತ ವಾಸವಾಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಪಡೆದರು. ಆ ಸಮಯದಲ್ಲಿ ಇವರ ತಾಯಿ ಸಂಧ್ಯಾ ಅವರ ಸೋದರಿ ವಿದ್ಯಾ ಅಥವಾ ಅಂಬುಜಾ ಅವರು ಗಗನಸಖಿಯಾಗಿದ್ದರು. ಜೊತೆಗೆ, ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನೃತ್ಯತಾರೆಯರಾದ ಲಲಿತಾ, ಪದ್ಮಿನಿ, ರಾಗಿನಿ ಅವರ ನಿಕಟಸ್ನೇಹ ಗಳಿಸಿದ್ದರು.

ಸಿನಿಮಾ ವೃತ್ತಿ ಜೀವನ ಪ್ರಾರಂಭಿಸಿದ ವಿದ್ಯಾ ಅವರು ಸೋದರಿ ಸಂಧ್ಯಾ ಅವರನ್ನು ಮದರಾಸಿನಲ್ಲಿ ನೆಲಸಲು ಆಹ್ವಾನಿಸಿದರು. ಅಂತೆಯೇ, ಇವರೊಂದಿಗೆ ತಾಯಿ ಮದರಾಸಿಗೆ ಮಕ್ಕಳೊಂದಿಗೆ ಬೆಂಗಳೂರಿನಿಂದ ಹೋದರು. ಸಿನಿಮಾ ಜಗತ್ತಿನ ಹೆಸರುವಾಸಿ ನಿರ್ದೇಶಕ ಸುಬ್ರಹ್ಮಣ್ಯಂ ಮತ್ತಿತರರು ಇವರ ಸಿನಿಮಾ ವೃತ್ತಿಗೆ ಸಹಾಯ, ಸಹಕಾರ ನೀಡಿದರು.

ಈ ಸಮಯದಲ್ಲಿ ಮೈಸೂರಿನಲ್ಲಿದ್ದ ಆಸ್ತಿಪಾಸ್ತಿಯನ್ನು ಮಾರಾಟ ಮಾಡಿದರು. ಮೈಸೂರಿನ ಲಕ್ಷ್ಮಿಪುರಂನ ಎರಡನೇ ಮೇನ್‌ನಲ್ಲಿದ್ದ ಲಲಿತಾ ವಿಲಾಸ, ರಾಮವಿಲಾಸ ಮನೆಗಳು ಹಾಗೂ ಸರಸ್ವತಿಪುರಂನ ಮೊದಲನೇ ಮೇನ್‌ನ 3ನೇ ಕ್ರಾಸ್‌ನಲ್ಲಿರುವ ಮನೆಯನ್ನು ಜಯವಿಲಾಸ್ ಎಂದು ಕರೆಯುತ್ತಿದ್ದರು. ಇದನ್ನು ಜಯಲಲಿತಾರಿಗೆಂದೇ ಖರೀದಿಸಿದ್ದರು. ಇದನ್ನು ಮಾರಾಟ ಮಾಡಿದ್ದರು. ಹೀಗಾಗಿ, ಜಯಲಲಿತಾ ವಿದ್ಯಾಭ್ಯಾಸ ಮದರಾಸಿನಲ್ಲಿ ಮುಂದುವರೆಯಿತು.

ಆಗಲೇ ಡಾನ್ಸ್ ತರಗತಿಗೆ ಜಯಲಲಿತಾರನ್ನು ಸೇರಿಸಿದ್ದರು. ತನ್ನ 14ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. ಈ ಕಾರ್ಯಕ್ರಮವನ್ನು ಪ್ರಸಿದ್ಧ ಸಿನಿಮಾನಟ ಶಿವಾಜಿಗಣೇಶನ್ ಅವರು ಉದ್ಘಾಟಿಸಿದ್ದರು. ಮುಖ್ಯ ಅತಿಥಿಯಾಗಿ ಬಿ.ಡಿ.ಜತ್ತಿ ಅವರು ಇದ್ದರು. ಈ ಕಾರ್ಯಕ್ರಮ ನಡೆಯಲು ಕುಟುಂಬದ ಹಿತೈಷಿಯಾಗಿದ್ದ ಬಿ.ಆರ್.ಪಂತಲು ಅವರು ಕಾರಣಕರ್ತರಾದರು. ಭಾರತದ ಮಹಿಳಾ ಕ್ರಿಕೆಟ್ ಆಟಗಾರರಾದ ಶಾಂತಾ ರಂಗಸ್ವಾಮಿಯವರೂ ಜಯಲಲಿತಾರ ಕಸಿನ್ ಸಿಸ್ಟರ್. ಇವರೂ ಕೂಡ ಭಾಗವಹಿಸಿ ಶುಭ ಹಾರೈಸಿದರು.

ಹೀಗೆಯೇ ಮುಂದುವರಿದ ನೃತ್ಯ ಅವರ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಯಿತು. ಮೈಸೂರಿನವರೇ ಆದ ಜಯಲಲಿತಾ ಮದರಾಸಿಗೆ ಹೋದರೂ ತಮ್ಮೂರನ್ನು ಮರೆಯಲಿಲ್ಲ. ತಮ್ಮ ಗೌರವವನ್ನು ಈ ಮೂಲಕ ಹೆಚ್ಚಿಸಿಕೊಂಡರು. ಇದಕ್ಕೆ ಸಾಕ್ಷಿಯೆಂಬಂತೆ ಒಂದು ಕಾರ್ಯಕ್ರಮ ನಡೆಯಿತು. ಶ್ರೀರಂಗಪಟ್ಟಣ ತಾಲ್ಲೂಕಿನ ಮೈಸೂರಿನ ಹಳೆ ಕೆಸರೆ ಬಳಿ ಇರುವ ಗಡಿ ಗ್ರಾಮ. ಅದೇ ನಗುವನಹಳ್ಳಿ. ಇಲ್ಲೊಂದು ಸರಕಾರಿ ಶಾಲೆ ಬೇಕೆಂದು ಗ್ರಾಮಸ್ಥರಿಗೆ ಮನಸ್ಸಾಯಿತು. ಆಗ ಊರಿನ ಪ್ರಮುಖರಾದ ದೊಡ್ಡಹಟ್ಟಿ ರಾಮಚಂದ್ರಯ್ಯನವರು ಸುಮಾರು ಎಂಟು ಎಕರೆ ಪ್ರದೇಶವನ್ನು ದಾನವಾಗಿ ನೀಡಿದರು. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿದ್ದ ಟಿಎಲ್ಎಸ್ ಉಪಾಧ್ಯಾಯ ಅವರು ಸುಗಂಧದ್ರವ್ಯ ವರ್ತಕರು ಹಾಗೂ ತಯಾರಕರು. ಇವರಿಂದ 300 ರೂ.ಗೆ ತೆಗೆದುಕೊಂಡ ಜಮೀನನ್ನು ಪಡೆದವರು ನಮ್ಮ ದೊಡ್ಡಹಳ್ಳಿ ರಾಮಚಂದ್ರಯ್ಯನವರು. ಇವರೇ ಜಮೀನನ್ನು ದಾನಮಾಡಿದ ಪ್ರಾಮಾಣಿಕರು.

ಈ ಭೂಮಿಯನ್ನು ಪಡೆದ ಸರಕಾರ ಶಾಲೆ ಕಟ್ಟಿಸಲು ತೀರ್ಮಾನಿಸಿ ಅನುದಾನವನ್ನೂ ನೀಡಿತು. ಆದರೆ, ಹಣದ ಕೊರತೆ ಎದುರಾಯಿತು. ಹೊಂದಾಣಿಕೆ ಹಣ ಜೋಡಿಸಲು ಯಾರಿಗೊ ಹೊಳೆಯಿತು. ಅದು ಜಯಲಲಿತಾರನ್ನು ಕರೆಸಿ ಸಹಾಯಾರ್ಥ ಡ್ಯಾನ್ಸ್ ಮಾಡಿಸುವುದು. ಅಂತೆಯೇ, ಜಯಲಲಿತಾರವರು 1964ರಲ್ಲಿ ಮೈಸೂರಿಗೆ ಬಂದು ಕ್ರಾಫರ್ಡ್‌ ಹಾಲ್‌ನಲ್ಲಿ ನೃತ್ಯ ಪ್ರದರ್ಶನ ನೀಡಿದರು.

ಟಿಎಲ್ಎಸ್ ಉಪಾಧ್ಯಾಯರು ಸೇರಿಕೊಂಡು ತಾಲ್ಲೂಕು ಅಭಿವೃದ್ಧಿ ಮಂಡಳಿಗೆ (ಶ್ರೀರಂಗಪಟ್ಟಣ ತಾಲ್ಲೂಕು ಟಿಡಿಬಿ) ನೆರವಿತ್ತವರು. ಇದೇ ಹೈಸ್ಕೂಲು ಕಟ್ಟಡ ಸಹಾಯರ್ಥ ಪ್ರದರ್ಶನ ಏರ್ಪಡಿಸಿ ನಿಧಿ ಸಂಗ್ರಹಿಸಿದ ಮಹನೀಯರು. ಅವತ್ತಿನ ಟಿಕೆಟ್ ದರ ರೂ. 50, ರೂ. 25, ರೂ. 10 ಎಂದು ನಮೂದಿಸಲಾಗಿತ್ತು. 49 ವರ್ಷದ ಹಿಂದೆ ಆ ದಿನ ಅಂದರೆ 19-03-1967ನೇ ಭಾನುವಾರ ಸಂಜೆ 6.30ಕ್ಕೆ ಕ್ರಾಫರ್ಡ್‌ ಹಾಲ್‌ನಲ್ಲಿ ಜಯಲಲಿತಾ ಅವರ ಅಮೋಘ ನೃತ್ಯ ಪ್ರದರ್ಶನ ನಡೆಯಿತು.

ಅವತ್ತಿನ ನೃತ್ಯ ಪ್ರದರ್ಶನದ ಕರಪತ್ರ ಹೀಗಿತ್ತು
ಜಯಲಲಿತಾ ಸುಪ್ರಸಿದ್ಧ ಅಮೋಘ ನೃತ್ಯ ಪ್ರದರ್ಶನ ಮೈಸೂರಿನಲ್ಲಿಯೇ ಪ್ರಥಮ ಬಾರಿ ಪ್ರದರ್ಶನದಿಂದ ಬಂದ ಹಣವನ್ನು ಈ ಶಾಲೆಗಾಗಿಯೇ ಧಾರೆ ಎರೆದರು. ಇಂದಿಗೂ ಜಮೀನು ಕೊಟ್ಟ, ಆ ಕಾರ್ಯಕ್ರಮವನ್ನು ಸಂಯೋಜಿಸಿದ್ದ ರಾಮಚಂದ್ರಯ್ಯನವರು ನೆನಪಿಸಿಕೊಂಡು ಹೆಮ್ಮೆಪಡುತ್ತಾರೆ. ಆಗಾಗ ಈ ಶಾಲೆ ಬಳಿ ಬಂದು ನೋಡಿಕೊಂಡು ಹೋಗುವ ಪರಿಪಾಠವಿದ್ದು, ನಗುವನಹಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅಂದು ನಡೆದ ನೃತ್ಯ ಕಾರ್ಯಕ್ರಮಕ್ಕೆ ಮಂಡಿಮೊಹಲ್ಲಾದ ಕಬೀರ್‌ ರಸ್ತೆಯ ಶಂಕರ್‌ ಅವರು. ಕೃಷ್ಣಾ ಸ್ಟುಡಿಯೋದ ಕೃಷ್ಣಪ್ಪನವರು ಅಂದು ನಡೆದ ನೃತ್ಯದ ಛಾಯಾಚಿತ್ರ ತೆಗೆದಿದ್ದನ್ನು ಅವರಿರುವವರೆಗೂ ಸ್ಟುಡಿಯೋದ ಹೊರಗೆ ಹಾಕಿದ್ದುದು ಈಗಲೂ ನೆನಪಿದೆ.

ಹೀಗೆ ನಂತರದ ದಿನಗಳಲ್ಲಿ ಜಯಲಲಿತಾರ ಚಿತ್ರರಂಗ ಹಾಗೂ ರಾಜಕೀಯ ಹಾದಿ ಮುಂದುವರೆಯಿತು. ಎಂ.ಜಿ.ರಾಮಚಂದ್ರನ್ (ಎಂಜಿಆರ್) ಮತ್ತು ಆರ್.ಎಂ. ವೀರಪ್ಪನ್‌ ಅವರ ಸಹಕಾರದಿಂದ ರಾಜಕೀಯ ಪ್ರವೇಶ ಹಾಗೂ ಮುಖ್ಯಮಂತ್ರಿ ಗಾದಿಗೂ ಏರಿದರು. ಆಗಲೇ ಎಂಜಿಆರ್ ನೆರಳಿನಲ್ಲಿ ರಾಜಕೀಯ ಹಾದಿ ತುಳಿದ ಜಯಲಲಿತಾ ಅವರ ನಿಜವಾದ ನಿಕಟವರ್ತಿಯೂ ಆದರು. ಪಕ್ಷದ ಮುಖಂಡರು ಇವರನ್ನು ಅಮ್ಮಾ ಎಂದೇ ಸಂಬೋಧಿಸತೊಡಗಿದರು. ಎಂಜಿಆರ್‌ ಅವರು ಪಕ್ಷದಲ್ಲಿ ಪ್ರಚಾರ ಕಾರ್ಯದರ್ಶಿಯನ್ನಾಗಿ ನೇಮಿಸಿದರು. ನಂತರ ತಮಿಳುನಾಡಿನ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರ ನಡೆಸುವಾಗಲೇ ಕೊಳಗೇರಿಯಲ್ಲಿ ಮಕ್ಕಳೊಂದಿಗೆ ಮಾತನಾಡುತ್ತಾ, ಜನರ ಕಷ್ಟಸುಖವನ್ನು ವಿಚಾರಿಸುವ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದರು

Comments are closed.