ಕರ್ನಾಟಕ

ಮುಖ್ಯಮಂತ್ರಿಯಿಂದ ಬಾಲಾಪರಾಧಿಗಳಿಗೆ ಪಾಠ

Pinterest LinkedIn Tumblr

sidduಬೆಂಗಳೂರು, ಮೇ ೨೪- ಗುಂಡಿಬಿದ್ದ ರಸ್ತೆಗಳು, ಕುಂಟುತ್ತಾ ಸಾಗಿರುವ ಕಾಮಗಾರಿಗಳು, ಸಂಚಾರ ದಟ್ಟಣೆ, ರಾಜಕಾಲುವೆಗಳಲ್ಲಿ ಹರಿಯದ ನೀರು, ಮಾರುಕಟ್ಟೆಗಳಲ್ಲಿ ಅವ್ಯವಸ್ಥೆ ಸೇರಿದಂತೆ, ಸಮಸ್ಯೆಗಳ ಸರಮಾಲೆ ಮುಖ್ಯಮಂತ್ರಿಯವರಿಗೆ ದರ್ಶನವಾಯಿತು.
ಮಳೆಗಾಲ ಆರಂಭಗೊಳ್ಳುವ ಮೊದಲು ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳ ದಂಡಿನೊಂದಿಗೆ ಇಂದು ನಗರ ಪ್ರದಕ್ಷಿಣೆ ನಡೆಸಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾದಿಂದ 10.50ಕ್ಕೆ ಪ್ರದಕ್ಷಿಣೆ ಆರಂಭಗೊಂಡಿತು. ಮುಖ್ಯಮಂತ್ರಿಯವರೊಂದಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಆಹಾರ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಉಗ್ರಪ್ಪ, ಹೆಚ್.ಎಂ. ರೇವಣ್ಣ, ಮೇಯರ್ ಮತ್ತು ಉಪಮೇಯರ್ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಈ ತಂಡದಲ್ಲಿದ್ದರು.
ಮೊದಲಿಗೆ ಶೇಷಾದ್ರಿ ರಸ್ತೆಯ ಕಿನೋ ಥಿಯೇಟರ್ ಬಳಿಯ ಕೆಳಸೇತುವೆಯನ್ನು ವೀಕ್ಷಿಸಿದರು. ಈ ಸೇತುವೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ತಪ್ಪಿಸುವಂತೆ ಇದೇ ವೇಳೆ ಮುಖ್ಯಮಂತ್ರಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲಿಂದ ನೇರವಾಗಿ ಕಂಠೀರವ ಕ್ರೀಡಾಂಗಣದ ರಾಜಕಾಲುವೆಯನ್ನು ವೀಕ್ಷಿಸಿ ಮಳೆ ನೀರು ರಾಜಕಾಲುವೆಯಲ್ಲಿ ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತಿದ್ದು, ಅದನ್ನು ರಾಜಕಾಲುವೆ ಮೂಲಕ ಹರಿಸುವ ಕಾಮಗಾರಿ ಆರಂಭಿಸಲಾಗಿದೆ. ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ವಿವರಿಸಿದರು.
ಅಲ್ಲಿಂದ ನೇರವಾಗಿ ಮಡಿವಾಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಮಡಿವಾಳ ಮಾರುಕಟ್ಟೆಯನ್ನು ವೀಕ್ಷಿಸಿದರು.
ತೆಂಗಿನ ವ್ಯಾಪಾರಿ ಷಣ್ಮುಗಪ್ಪ ಎಂಬುವವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ತಿಂಗಳಿಗೆ ಎಷ್ಟು ವ್ಯಾಪಾರ ನಡೆಯುತ್ತಿದೆ, ಎಷ್ಟು ಲಾಭ ದೊರೆಯುತ್ತಿದೆ, ಎಲ್ಲಿ ವಾಸವಾಗಿದ್ದೀರಿ, ಮುಂತಾದ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಷಣ್ಮುಗಪ್ಪ ಅವರು, ತಮಗೆ ಹೊಸ ಅಂಗಡಿ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿ, ಅಲ್ಲಿಂದ ಮುಂದೆ ಸಾಗಿದರು.
ಮಡಿವಾಳ ಮಾರುಕಟ್ಟೆ ಬಳಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ವೀಕ್ಷಿಸಿ ವಿವರ ಪಡೆದರು.
ಬಳಿಕ ಮಡಿವಾಳದ ಸರ್ಕಾರಿ ಪರಿವೀಕ್ಷಣಾಲಯಕ್ಕೆ ತೆರಳಿ ಅಲ್ಲಿರುವ ಬಾಲಾಪರಾಧಿಗಳೊಂದಿಗೆ ಮಾತನಾಡಿದರು.
ಕೊಲೆ, ಅತ್ಯಾಚಾರ, ಕಳ್ಳತನ, ಮುಂತಾದ ಅಪರಾಧಗಳಲ್ಲಿ ಪಾಲ್ಗೊಂಡು ನ್ಯಾಯಾಲಯದ ಆದೇಶದಂತೆ ಬಾಲನ್ಯಾಯ ಮಂಡಲಿಯಲ್ಲಿ ತಂಗಿರುವ 42 ಅಪರಾಧಿಗಳ ವಿವರ ಪಡೆದ ಮುಖ್ಯಮಂತ್ರಿಗಳು, ಉತ್ತಮ ಪ್ರಜೆಗಳಾಗಬೇಕು. ಇಲ್ಲಿಂದ ಹೊರಬಂದ ಬಳಿಕ ಒಳ್ಳೆಯ ಜೀವನ ನಡೆಸಬೇಕು ಎಂದು ಬುದ್ಧಿವಾದ ಹೇಳಿದರು.
ಮುಖ್ಯಇಂಜಿನಿಯರ್ ರುದ್ರಮೂರ್ತಿ ಅಮಾನತು
ಮಡಿವಾಳದ ಮಾರತಹಳ್ಳಿ ರಿಂಗ್ ರಸ್ತೆಯ ಸಮೀಪ ನಿರ್ಮಿಸುತ್ತಿರುವ ಸರ್ವೀಸ್ ರಸ್ತೆ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲದ ಬಗ್ಗೆ ಅರಿತ ಮುಖ್ಯಮಂತ್ರಿ, ಇದರ ಜವಾಬ್ದಾರಿ ಹೊತ್ತಿರುವ ಮುಖ್ಯ ಇಂಜಿನಿಯರ್ ರುದ್ರಮೂರ್ತಿಯವರನ್ನು ತಕ್ಷಣ ಅಮಾನತು ಮಾಡುವಂತೆ ಆದೇಶ ನೀಡಿದರು.
ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅಧಿಕಾರಿಗಳೇ ಹೊಣೆ ಎಂದು ಮೇಯರ್ ಅವರೂ ಕೂಡ ಸಾಥ್ ನೀಡಿದರು. ಮಾತ್ರವಲ್ಲ, ಮುಖ್ಯ ಇಂಜಿನಿಯರಿಂಗ್ ರುದ್ರಮೂರ್ತಿ ಸ್ಥಳದಲ್ಲಿ ಇರಲಿಲ್ಲ. ಇದರಿಂದ ಕೋಪಗೊಂಡ ಮುಖ್ಯಮಂತ್ರಿ, ಎಲ್ರೀ ಅವರು, ಅವರನ್ನು ಅಮಾನತು ಮಾಡಿ ಎಂದು ಆದೇಶ ನೀಡಿದರು.
ಡಿಸೆಂಬರ್ ಒಳಗೆ ಈ ಕಾಮಗಾರಿಯನ್ನು ಪೂರ್ಣಿಗೊಳಿಸುವಂತೆ ಅಲ್ಲಿದ್ದ ಇಂಜಿನಿಯರ್ ಕೆಂಪರಾಮಯ್ಯ ಅವರಿಗೆ ಸೂಚನೆ ನೀಡಿದರು.
ಮಡಿವಾಳದಲ್ಲಿ 440 ಅಂಗಡಿಗಳ ಮಾರುಕಟ್ಟೆ ನಿರ್ಮಾಣ
ಮಡಿವಾಳದಲ್ಲಿ ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ 440 ಮಳಿಗೆಗಳನ್ನು ಒಳಗೊಂಡ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ 151 ಮಳಿಗೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಒಟ್ಟು 6 ಬ್ಲಾಕ್‌‌ಗಳ ಮಾರುಕಟ್ಟೆ ನಿರ್ಮಾಣವಾಗಲಿದ್ದು, ಎ ಮತ್ತು ಬಿ ಬ್ಲಾಕ್‌ಗಳು ಮಳಿಗೆಗಳಿಗೆ ಹಾಗೂ ಸಿ ಮತ್ತು ಡಿ ಗೋದಾಮುಗಳಿಗೆ ಮೀಸಲಾಗಿರಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಳಿಕ ಹೆಚ್.ಎಸ್.ಆರ್. ಬಡಾವಣೆಯಲ್ಲಿ ಒತ್ತುವರಿ ತೆರವು ಮಾಡಿರುವ ಪ್ರದೇಶದಲ್ಲಿ ಉದ್ಯಾನವನವನ್ನು ವೀಕ್ಷಿಸಿ, ಆದಷ್ಟು ಬೇಗ ಈ ಉದ್ಯಾನವನ ಅಭಿವೃದ್ಧಿಪಡಿಸುವಂತೆ ಸೂಚಿಸಿದರು.
ಬಿಡಿಎಗೆ ವಹಿಸಿ ಮೂರು ಬೋರ್‌ವೆಲ್‌ಗಳನ್ನು ಕೊರೆಸುವಂತೆಯೂ ಸಿದ್ದರಾಮಯ್ಯ ಸೂಚನೆ ನೀಡಿದರು. ಬಳಿಕ ಇಬ್ಬಲೂರು ಕೆರೆಗೆ ಭೇಟಿ ನೀಡಿ ಅವುಗಳ ಬಗ್ಗೆ ಮಾಹಿತಿ ಪಡೆದರು. ಇಬ್ಬಲೂರು ಕೆರೆ ಒತ್ತುವರಿಯಾಗಿದ್ದು, ಕೆಲವು ಬಿಲ್ಡರ್‌ಗಳಿಗೆ ಈ ಸಂಬಂಧ ನೋಟೀಸ್ ಜಾರಿ ಮಾಡಲಾಗಿದೆ ಎಂದು ಬಿಡಿಎ ಆಯುಕ್ತ ಶ್ಯಾಂ ಭಟ್, ಮುಖ್ಯಮಂತ್ರಿಗಳಿಗೆ ಮಾಹಿತಿ ಒದಗಿಸಿದರು.
ಕಗ್ಗದಾಸಪುರದಲ್ಲಿ ಹೂ ಹಾರಗಳ ಸ್ವಾಗತ
ಮುಖ್ಯಮಂತ್ರಿ ಹಾಗೂ ತಂಡ ಕಗ್ಗದಾಸಪುರಕ್ಕೆ ಆಗಮಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಹೂ ಹಾರಗಳೊಂದಿಗೆ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.
ರೈಲ್ವೆ ಹಳಿ ಮೇಲೆ ಮೇಲುಸೇತುವೆ ನಿರ್ಮಿಸುವಂತೆ ಸೂಚನೆ ನೀಡಿದರು. ಈ ಪ್ರದೇಶದಲ್ಲಿ ಮೇಲುಸೇತುವೆ ಇಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಮೇಲುಸೇತುವೆಯನ್ನು ನಿರ್ಮಿಸುವಂತೆ ಸೂಚಿಸಿದರು.
ಮೇಲುಸೇತುವೆಯನ್ನು 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಸಂಬಂಧ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Comments are closed.