ಕರ್ನಾಟಕ

ಬಜ್ಪೆ ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ನಾಮಕರಣ: ಕೇಂದ್ರ ಸರಕಾರಕ್ಕೆ ಶಿಫಾರಸು – ಖಾದರ್

Pinterest LinkedIn Tumblr

bajpe

ಬೆಂಗಳೂರು, ಮೇ ೨೨: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಅಬ್ಬಕ್ಕ ಅವರ ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿಂದು ಏರ್ಪಡಿಸಿದ್ದ ತೌಳವ ವೀರರಾಣಿಯ ಸಾಹಸಕಥನ “ಅಬ್ಬಕ್ಕ ಚರಿತೆ” ರಾಜಧಾನಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಣಿ ಅಬ್ಬಕ್ಕ ಅವರಿಗೆ ರಾಜ್ಯದಲ್ಲಿ ಹೆಚ್ಚಿನ ಮಾನ್ಯತೆ ಸಿಕ್ಕಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಮಂಗಳೂರು ಈ ಹಿಂದೆ ಮದ್ರಾಸ್ ಪ್ರಾಂತ್ಯದಲ್ಲಿತ್ತು. ಆದ್ದರಿಂದ ಅಬ್ಬಕ್ಕ ಅವರಿಗೆ ಸಾಕಷ್ಟು ಮಾನ್ಯತೆ ಸಿಕ್ಕಿಲ್ಲ. ಅಬ್ಬಕ್ಕ ಅವರು ವಿದೇಶಿಯರ ಆಕ್ರಮಣದ ವಿರುದ್ಧ ಸೆಟೆದು ನಿಂತು ಹೋರಾಡಿದ ಪ್ರಥಮ ಮಹಿಳೆ. ಇವರ ಸಾಧನೆ ದೇಶದ ಮೂಲೆ ಮೂಲೆಗೂ ತಲುಪಬೇಕು ಎಂದು ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಗೆ ಅಬ್ಬಕ್ಕ ರಾಣಿ ರಸ್ತೆ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಈಗಾಗಲೇ ಇರುವ ರಸ್ತೆಯ ಹೆಸರು ಬದಲಾಯಿಸಿದರೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತದೆ. ಆದ್ದರಿಂದ ಹೊಸ ರಸ್ತೆ ಅಥವಾ ಯಾವುದಾದರೊಂದು ರೈಲ್ವೆ ನಿಲ್ದಾಣಕ್ಕೆ ಅಬ್ಬಕ್ಕ ಹೆಸರು ಇಡುವುದು ಸೂಕ್ತ ಎಂದು ಹೇಳಿದರು.
ಅಬ್ಬಕ್ಕ ರಾಣಿ ಹೆಸರಿನಲ್ಲಿ ಸಾಹಸ ಕ್ರೀಡಾ ಸಂಸ್ಥೆಯೊಂದನ್ನು ಸ್ಥಾಪಿಸುವಂತೆ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರಲ್ಲಿ ಮನವಿ ಮಾಡಿದ ಯು.ಟಿ.ಖಾದರ್, ಅಬ್ಬಕ್ಕ ಅವರು ಸಾಹಸಕ್ಕೆ ಹೆಸರುವಾಸಿಯಾದವರು. ಆದ್ದರಿಂದ ಅವರ ಹೆಸರಿನಲ್ಲಿ ಸಾಹಸ ಕ್ರೀಡಾ ಸಂಸ್ಥೆ ಸ್ಥಾಪಿಸುವುದು ಸೂಕ್ತ ಎಂದರು. ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರಾಣಿ ಅಬ್ಬಕ್ಕ ಸಾಹಸ ಕ್ರೀಡಾ ಸಂಸ್ಥೆ ಸ್ಥಾಪನೆಗೆ ೧ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಶೀಘ್ರವೇ ಇದರ ಕಾರ್ಯ ಆರಂಭಗೊಳ್ಳಲಿದೆ. ಯಶವಂತಪುರದಲ್ಲಿರುವ ಅಬ್ಬಕ್ಕ ರಾಣಿ ಪ್ರತಿಮೆ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಕೆ. ಜಯರಾಮಶೆಟ್ಟಿ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕು. ಇದಕ್ಕಾಗಿ ಅಬ್ಬಕ್ಕ ರಾಣಿಯವರ ಆದರ್ಶ ಇನ್ನಷ್ಟು ಪ್ರಚಾರ ಆಗಬೆಕು. ಅಬ್ಬಕ್ಕ ಅವರ ಬಗ್ಗೆ ಅಧ್ಯಯನ ನಡೆಸಲು ಅಧ್ಯಯನ ಪೀಠವೊಂದನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ದಿನಕರ ಉಳ್ಳಾಲ್, ಬೇಳೂರು ರಾಘವೇಂದ್ರ ಶೆಟ್ಟಿ, ಅನಿತಾ ಸುರೇಂದ್ರ ಕುಮಾರ್ ಮತ್ತಿತರರು ಹಾಜರಿದ್ದರು.

ಮೇಯರ್ ಮಂಜುನಾಥ ರೆಡ್ಡಿ ಮಾತನಾಡಲು ಮುಂದಾಗುತ್ತಿದ್ದಂತೆ ಅವರಿಂದ ಮೈಕ್ ಕಸಿದುಕೊಂಡ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಉದಯ್ ಧರ್ಮಸ್ಥಳ, ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿಲ್ಲ. ಈ ಮೂಲಕ ತಮಗೆ ಅವಮಾನ ಮಾಡಲಾಗಿದೆ. ಅಬ್ಬಕ್ಕ ರಾಣಿಯವರನ್ನು ತುಳು ಜನರೇ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

Comments are closed.