ಕರ್ನಾಟಕ

3 ಸಾವಿರ ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯಲು ಮುಂದಾಗಿರುವ ಸರಕಾರ !

Pinterest LinkedIn Tumblr

school

ಬೆಂಗಳೂರು: ಈ ವರ್ಷದಲ್ಲಿ ರಾಜ್ಯದಲ್ಲಿರುವ ಮೂರು ಸಾವಿರ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ.

ಪ್ರಸ್ತುತ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ 10 ಮಕ್ಕಳಿಗಿಂತ ಕಡಿಮೆ ಮಕ್ಕಳು ದಾಖಲಾತಿಯಾದರೆ, ಅಂತಹ ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ 2015-16ನೇ ಸಾಲಿನ ಅಂಕಿ ಅಂಶಗಳ ವರದಿಯನ್ನು ತಯಾರಿಸಿದ್ದು, ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿದೆ. ಆದರೆ ಸರ್ಕಾರ ಈ ಕುರಿತು ಶಾಲೆಗಳನ್ನು ಮುಚ್ಚುತ್ತಿಲ್ಲ ವಿಲೀನಗೊಳಿಸಲಾಗುತ್ತಿದೆ ಎಂದು ಕುಂಟುನೆಪ ಹೇಳುತ್ತಿದೆ.

ಕಾರಣವೇನು:

ರಾಜ್ಯದಲ್ಲಿ ಒಟ್ಟು 44 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಕೇಂದ್ರ ಸರ್ಕಾರ ರೂಪಿಸಿರುವ ನೂತನ ಮಾರ್ಗದರ್ಶನದಂತೆ ಪ್ರತಿಯೊಂದು ಶಾಲೆಗಳಲ್ಲಿ ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಆಟದ ಮೈದಾನ, ತರಗತಿಗಳು, ಪ್ರಯೋಗಾಲಯ ಇರಬೇಕು. ಇದರ ಜೊತೆಗೆ ಯಾವುದೇ ಒಂದು ಸರ್ಕಾರಿ ಶಾಲೆಯಲ್ಲಿ ಕನಿಷ್ಟ 5ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಇರಬಾರದು. ಸರ್ವಶಿಕ್ಷ ಅಭಿಯಾನ ಯೋಜನೆಯಂತೆ ಐದು ವಿದ್ಯಾರ್ಥಿಗಳಿಗಿಂತ ಕಡಿಮೆ ಇದ್ದರೆ ಅಂತಹ ಶಾಲೆಗಳಿಗೆ ವಿಶೇಷ ಒತ್ತು ನೀಡಿ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿತ್ತು.

ಈ ಹಿಂದೆ ಸಾಹಿತಿ ಸಾಹಿತಿಯೊಬ್ಬರ ನೇತೃತ್ವದ ಸಮಿತಿಯು ರಾಜ್ಯದ ವಿವಿಧೆಡೆ ಸಮೀಕ್ಷೆ ನಡೆಸಿ ಕಡಿಮೆ ಹಾಜರಾತಿ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಶಾಲೆಗಳನ್ನು ಮುಚ್ಚುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಸಾರ್ವಜನಿಕರು ಮತ್ತು ಸಾಹಿತಿಗಳು, ಕನ್ನಡ ಸಂಘಟನೆಗಳಿಂದ ತೀರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ತೀರ್ಮಾನದಿಂದ ಹಿಂದೆ ಸರಿದಿತ್ತು. ಇದೀಗ 44 ಸಾವಿರ ಸರ್ಕಾರಿ ಶಾಲೆಗಳ ಪೈಕಿ ಮೂರು ಸಾವಿರ ಶಾಲೆಗಳು ಅತಿ ಕಡಿಮೆ ಹಾಜರಾತಿ ಹೊಂದಿರುವುದರಿಂದ ಈ ಶಾಲೆಗಳಿಗೆ ಬೀಗ ಹಾಕುವುದು ಅನಿವಾರ್ಯವಾಗಿದೆ.

ಮೂರು ಸಾವಿರ ಶಾಲೆಗಳ ಪೈಕಿ 0-5ರವರೆಗೆ 657, 6-10ರವರೆಗೆ 2310, 11-20ರವರೆಗೆ 6893, 20-31ರವರೆಗೆ 5460, 500ಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿರುವ ಶಾಲೆಗಳಿವೆ. ಇದರಲ್ಲಿ 0-10ರವರೆಗೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಶಿಕ್ಷಣ ಇಲಾಖೆ ಈ ಬಗ್ಗೆ ವರದಿಯನ್ನು ಸಿದ್ದಪಡಿಸಿದ್ದು , ಅನಿವಾರ್ಯವಾಗಿ ಜೂನ್ ತಿಂಗಳಿನಿಂದ ಇಂತಹ ಶಾಲೆಗಳನ್ನು ಬಂದ್ ಮಾಡಲಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ)ಗಳಿಗೆ ಸೂಚನೆ ಕೊಡಲಾಗಿದೆ.

ಆರ್‌ಟಿಇ ಹೊಡೆತ:

ಶಿಕ್ಷಣ ಹಕ್ಕು ಜಾರಿಯಾದ ಮೇಲೆ ಸರ್ಕಾರಿ ಶಾಲೆಗಳ ಹಾಜರಾತಿ ಮೇಲೆ ಭಾರೀ ಪರಿಣಾಮ ಬೀರಿದೆ. ಖಾಸಗಿ ಶಾಲೆಗಳು ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ಶೇ.25ರಷ್ಟು ಸೀಟ್‌ಗಳನ್ನು ಕಡ್ಡಾಯವಾಗಿ ನೀಡಬೇಕೆಂದು ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದೆ. ಇದರ ಪರಿಣಾಮ ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಶಾಲೆಗೆ ಬದಲಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಇದು ಕೂಡ ಸರ್ಕಾರಿ ಶಾಲೆ ಮುಚ್ಚಲು ಮತ್ತೊಂದು ಕಾರಣ.

ಖಾಸಗಿ ಲಾಬಿ:

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮೀನಾಮೇಷ ಎಣಿಸುವ ಸರ್ಕಾರ, ಖಾಸಗಿ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತಲು ಅವಕಾಶ ನೀಡಿದೆ. ಇಂದು ಹಳ್ಳಿಗಳಲ್ಲೇ ಖಾಸಗಿ ಶಾಲೆಗಳು ಪ್ರಾರಂಭವಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೆಮುಂದೆ ನೋಡುತ್ತಾರೆ. ಇದರ ಪರಿಣಾಮ ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

Comments are closed.