ಕರ್ನಾಟಕ

ಈ ಅಂಧ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ ಪಡೆದದ್ದು ಬರೋಬರಿ 625ಕ್ಕೆ 603 ಅಂಕ !

Pinterest LinkedIn Tumblr

siddarama

ಬೆಳಗಾವಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಅಂಧ ವಿದ್ಯಾರ್ಥಿಯೊಬ್ಬ 625ಕ್ಕೆ 603 ಅಂಕ (ಶೇ 96.48ರಷ್ಟು) ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಬೆಳಗಾವಿ ಜಿಲ್ಲೆ, ಗೋಕಾಕ ತಾಲ್ಲೂಕಿನ ಒಡೆಯರ ಹಟ್ಟಿಯ ಕೃಷಿ ಕಾರ್ಮಿಕ ಮಲ್ಲಪ್ಪ ಅವರ ಪುತ್ರ ಸಿದ್ದರಾಮ ಜೀವನಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ. ಈತ ಶಾಲೆಯ ಮಕ್ಕಳ ಸಚಿವ ಸಂಪುಟದ ಮುಖ್ಯಮಂತ್ರಿ ಕೂಡ!

ಕಡು ಬಡತನದ ಕುಟುಂಬದಲ್ಲಿ ಜನಿಸಿದ ಈತ ಹುಟ್ಟಿನಿಂದಲೂ ಅಂಧ. 1ರಿಂದ 4ನೇ ತರಗತಿವರೆಗೆ ತಮ್ಮ ಊರಿನ ಮಾಮೂಲಿ ಶಾಲೆಯಲ್ಲೇ ಓದಿದ ಈತ ಬಳಿಕ ಬ್ರೈಲ್್ ಲಿಪಿ ಕಲಿಯಲು ಹುಬ್ಬಳ್ಳಿಗೆ ಬಂದ. ಎರಡು ವರ್ಷ ಬ್ರೈಲ್್ ಲಿಪಿ ಕಲಿತ ನಂತರ ವಿದ್ಯಾಭ್ಯಾಸ ಮುಂದುವರಿಸಿದ. 5ರಿಂದ 7ನೇ ತರಗತಿವರೆಗೆ ಸರ್ಕಾರಿ ಅಂಧರ ಶಾಲೆಯಲ್ಲಿ ವ್ಯಾಸಂಗ. ಬಳಿಕ ಹಳೆ ಹುಬ್ಬಳ್ಳಿಯ ಆರೂಢ ಅಂಗವಿಕಲರ ಶಿಕ್ಷಣ ಸಂಸ್ಥೆಯ ಅಂಧ ಮಕ್ಕಳ ವಸತಿ ಪ್ರೌಢಶಾಲೆಗೆ ಸೇರಿ, ಎಸ್ಸೆಸ್ಸೆಲ್ಸಿಯನ್ನು ಅಲ್ಲೇ ಪೂರೈಸಿದ್ದಾನೆ.

ಈ ಶಿಕ್ಷಣ ಸಂಸ್ಥೆ ಹುಟ್ಟಿ 15 ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ ಇದುವರೆಗೂ ವ್ಯಾಸಂಗ ಮಾಡಿದ ಅಂಧ ವಿದ್ಯಾರ್ಥಿಗಳ ಪೈಕಿ ಸಿದ್ದರಾಮ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ಹೇಗೆ ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಯಿತು ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ, ‘ಕಠಿಣ ಪರಿಶ್ರಮ ಮತ್ತು ಗುರುಗಳ ಮಾರ್ಗದರ್ಶನ ಈ ನನ್ನ ಸಾಧನೆಗೆ ಕಾರಣ’ ಎಂದು ಉತ್ತರಿಸಿದ.

‘ನಾನು ಕೇವಲ ಶಿಕ್ಷಕರು ಹೇಳಿದ್ದನ್ನು ಮಾತ್ರ ಓದಲಿಲ್ಲ. ಪಠ್ಯ ಪುಸ್ತಕವನ್ನು ಪ್ರತಿನಿತ್ಯ ಓದುತ್ತಿದ್ದೆ. ಪಾಠಕ್ಕೂ ಮುನ್ನ ಒಮ್ಮೆ, ಪಾಠದ ಬಳಿಕ ಒಮ್ಮೆ – ಹೀಗೆ ಎರಡು ಬಾರಿ ಪಠ್ಯ ಪುಸ್ತಕವನ್ನು ಓದುತ್ತಿದ್ದೆ. ಮೊದಲ ದಿನದಿಂದಲೇ ನಾನು ಪರೀಕ್ಷೆಗೆ ತಯಾರಿ ನಡೆಸಿದ್ದೆ. ಬೆಳಿಗಿನಜಾವ 3.30ಕ್ಕೆ ಎದ್ದು 7ಗಂಟೆವರೆಗೆ ಓದುತ್ತಿದ್ದೆ. ಬಳಿಕ ಸಂಜೆ 6 ರಿಂದ 8 ಗಂಟೆ ಸಹಪಾಠಿಗಳ ಜತೆ ಗುಂಪು ಚರ್ಚೆ ಮಾಡುತ್ತಿದ್ದೆ. ರಾತ್ರಿ 9 ರಿಂದ 11ರವರೆಗೆ ಪುನಃ ಓದು. ಹೀಗೆ ಪರಿಶ್ರಮ ಪಟ್ಟಿದ್ದರಿಂದ ನನಗೆ ಈ ಫಲಿತಾಂಶ ಸಿಕ್ಕಿದೆ. ನಿರೀಕ್ಷೆ ಪ್ರಕಾರವೇ ಅಂಕ ಬಂದಿದೆ’ ಎಂದು ಹೇಳಿಕೊಂಡ.

ಮುಂದೇನಾಗುತ್ತಿಯಾ ಎಂಬ ಪ್ರಶ್ನೆಗೆ ‘ಸ್ನಾತಕೋತ್ತರ ಪದವಿ ಬಳಿಕ ಪಿಎಚ್್.ಡಿ ಮಾಡಿ ಪ್ರಾಧ್ಯಾಪಕ ಆಗಬೇಕೆಂಬ ಆಸೆ ಇದೆ. ಆದರೆ ಎಲ್ಲವೂ ಭವಿಷ್ಯದ ಮೇಲೆ ನಿಂತಿದೆ’ ಎಂದು ಹೇಳುತ್ತಾನೆ.

‘ನನಗೆ ಅಂಧ ಎನ್ನುವ ಕೀಳರಿಮೆ ಇಲ್ಲ. ಆ ನೋವು ನನ್ನನ್ನು ಒಂದೇ ಒಂದು ದಿನವೂ ಕಾಡಲಿಲ್ಲ. ನನ್ನ ತಂದೆ–ತಾಯಿಗೂ ಅದರ ನೋವು ಕಾಡದಂತೆ ನೋಡಿಕೊಳ್ಳುತ್ತೇನೆ. ಪಿಯುಸಿ ಶಿಕ್ಷಣವನ್ನು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪಡೆಯುವ ಆಸಕ್ತಿ ಇದೆ. ಆದರೆ, ಎಲ್ಲವೂ ನನಗೆ ಯಾವ ಹಾಸ್ಟೆಲ್್ ನಲ್ಲಿ ಸೀಟು ಸಿಗುತ್ತದೆ ಎಂಬುದರ ಮೇಲೆ ನಿಂತಿದೆ’ ಎನ್ನುತ್ತಾನೆ ಸಿದ್ದರಾಮ.

ಮುಖ್ಯಮಂತ್ರಿ!: ಸಿದ್ದರಾಮ ತಮ್ಮ ಶಾಲೆಯ ಮುಖ್ಯಮಂತ್ರಿ ಕೂಡ. ಶಾಲೆಯಲ್ಲಿ ರಕ್ಷಣೆ, ಶಿಕ್ಷಣ, ಕ್ರೀಡೆ … ಎಲ್ಲ ಖಾತೆಗಳ ಸಚಿವರೂ ಇದ್ದಾರೆ. ಮಕ್ಕಳ ಸಚಿವ ಸಂಪುಟ ಇದ್ದು, ಅದರ ನೇತೃತ್ವವನ್ನು ಸಿದ್ದರಾಮ ವಹಿಸಿದ್ದಾನೆ.

ಮಗ ಭೂಮಿಗೂ ಭಾರ ಆಗಲ್ಲ!: ‘ನನಗೆ ಕಣ್ಣಿಲ್ಲದ ಮಗ ಹುಟ್ಟಿದಾಗ ದಿಕ್ಕು ತೋಚದಂತೆ ಆಗಿತ್ತು. ಏನಪ್ಪ ಮಾಡುವುದು ಎನ್ನುವ ಚಿಂತೆ ನನ್ನನ್ನು ಕಾಡಿತ್ತು. ಬಳಿಕ ಅವನ ಶೈಕ್ಷಣಿಕ ಪ್ರಗತಿ ನೋಡಿ ಸಂತಸವಾಗಿದೆ. ಅವನು ನನ್ನ ಕುಟುಂಬಕ್ಕಷ್ಟೇ ಅಲ್ಲ, ಈ ಭೂಮಿಗೂ ಭಾರ ಆಗಲ್ಲ ಎನ್ನುವ ವಿಶ್ವಾಸ ನನ್ನದು. ಅವನ ಶಿಕ್ಷಣಕ್ಕೆ ನಾನು ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಎಲ್ಲವೂ ಆರೂಢ ಅಂಗವಿಕಲರ ಶಿಕ್ಷಣ ಸಂಸ್ಥೆಯೇ ನೋಡಿಕೊಳ್ಳುತ್ತಿದೆ’ ಎಂದು ವಿದ್ಯಾರ್ಥಿಯ ತಂದೆ ಮಲ್ಲಪ್ಪ ಹೇಳುತ್ತಾರೆ.

Comments are closed.