ಕರ್ನಾಟಕ

ಕಾಂಗ್ರೆಸ್ ಸೋಲು ಸಿದ್ದುಗೆ ವರ

Pinterest LinkedIn Tumblr

siddaramaiahclr-318x400ಬೆಂಗಳೂರು, ಮೇ ೨೦ – ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ನೆಪವೊಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸಚಿವ ಸಂಪುಟ ಪುನಾರಚನೆಯನ್ನು ಇನ್ನೂ ಒಂದು ತಿಂಗಳು ಮುಂದೂಡಿದ್ದಾರೆ ಎಂಬ ಪುಕಾರು ಹುಟ್ಟಿಕೊಂಡಿದೆ.
ಸಚಿವರಾಗುವ ಕನಸು ಕಾಣುತ್ತಿದ್ದ ಸಚಿವಾಕಾಂಕ್ಷಿಗಳಿಗೆ ಇದು ತೀವ್ರ ನಿರಾಸೆ ಉಂಟುಮಾಡಿದ್ದು, ಸಚಿವ ಸ್ಥಾನ ಕೈತಪ್ಪುವ ಆತಂಕ ಎದುರಿಸುತ್ತಿದ್ದ ಸಚಿವರಿಗೆ ಮತ್ತೊಂದು ತಿಂಗಳ ನಿರಾಳತೆ ಸಿಕ್ಕಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ನೆಪ ಮುಂದಿಟ್ಟು ಮತ್ತೆ ಸಚಿವ ಸಂಪುಟ ಪುನಾರಚನೆ ಮುಂದೂಡಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಜೂ.೧೫ ರ ನಂತರ ಸಂಪುಟದ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇರಳ, ಅಸ್ಸಾಂ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಅಷ್ಟೇನೂ ಉತ್ತಮ ಸ್ಥಿತಿ ತೋರಿಲ್ಲ. ಶತಾಯಗತಾಯ ಪುದುಚೇರಿಯನ್ನು ಉಳಿಸಿಕೊಂಡಿದ್ದು ದೊಡ್ಡ ಸಾಧನೆ. ಕಾಂಗ್ರೆಸ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಆದ ಈ ಹಿನ್ನಡೆ ಸಿದ್ದರಾಮಯ್ಯಗೆ ವರದಾನವಾಗಿ ಲಭಿಸಿದೆ. ಸಚಿವ ಸಂಪುಟ ಪುನಾರಚನೆ ಮಾಡುವ ಯಾವುದೇ ಆಸಕ್ತಿ ಹೊಂದಿರದ ಸಿದ್ದರಾಮಯ್ಯಗೆ ಸದ್ಯ ಹೈಕಮಾಂಡ್ ಒತ್ತಡವೂ ಇಲ್ಲದಂತಾಗಿದೆ.
ಮೊದಲೇ ಸೋತು ಸುಣ್ಣವಾಗಿರುವ ಕಾಂಗ್ರೆಸ್, ಸದ್ಯಕ್ಕೆ ಯಾವುದೇ ಬದಲಾವಣೆ ಮನಸ್ಸು ಮಾಡಲಾರದು ಎಂಬುದು ಎಲ್ಲರ ಲೆಕ್ಕಾಚಾರ.ರಾಷ್ಟ್ರೀಯ ನಾಯಕರಿಗೆ ಸತತ ಎದುರಾಗುತ್ತಿರುವ ಸೋಲು ಸಿದ್ದರಾಮಯ್ಯ ಖುರ್ಚಿಯನ್ನು ಕೂಡಾ ಪರೋಕ್ಷವಾಗಿ ಭದ್ರಪಡಿಸುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಕೂಡಾ ಸಿಎಂ ಪರವಾಗಿಯೇ ಇದ್ದಾರೆ. ಎಲ್ಲಾ ಧನಾತ್ಮಕ ಅಂಶಗಳು ಸಿದ್ದರಾಮಯ್ಯರನ್ನು ರಕ್ಷಿಸುತ್ತಿದ್ದು, ಜೂ. ೧೫ರ ನಂತರವೂ ಸಂಪುಟ ಪುನಾರಚನೆಗೆ ಮುಂದಾಗದಿದ್ದರೂ, ಪ್ರಶ್ನಿಸುವಂತಿಲ್ಲ.
ಒಂದೊಮ್ಮೆ ಪ್ರಶ್ನಿಸಿದರೂ, ಅದಕ್ಕೆ ಹೈಕಮಾಂಡ್‌ನಿಂದ ಸೂಕ್ತ ಪ್ರತಿಕ್ರಿಯೆ ಸಿಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಒಟ್ಟಾರೆ ಸಚಿವ ಸಂಪುಟ ಪುನಾರಚನೆ ಮುಂದೂಡುತ್ತಲೇ ಸಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಿಎಂ ಗಾದಿ ಸದಾ ಸುಭದ್ರವಾಗಿದೆ ಎನ್ನಬಹುದು.

Comments are closed.