ಕರ್ನಾಟಕ

ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡಲು ರಾಜ್ಯ ಸರ್ಕಾರ ಸನ್ನದ್ದ

Pinterest LinkedIn Tumblr

siddddಬೆಂಗಳೂರು, ಮೇ 18-ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೂಢನಂಬಿಕೆಗಳು, ಮಾಟ-ಮಂತ್ರ ಹಾಗೂ ಕಪಟ ಜ್ಯೋತಿಷಿಗಳ ಹಾವಳಿ ನಿಯಂತ್ರಿಸಲು ಸರ್ಕಾರ, ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡಲು ಮುಂದಾಗಿದೆ. ಈ ಹಿಂದೆ ಮೌಢ್ಯನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ, ವಿವಿಧ ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಾಯ್ದೆ ನೆನೆಗುದಿಗೆ ಬಿದ್ದಿತ್ತು.

ಇದೀಗ ಸಮಾಜ ಕಲ್ಯಾಣ ಇಲಾಖೆ ನೂತನ ತಿದ್ದುಪಡಿ ಮಾಡಿದ ಕರಡು ಕಾಯ್ದೆಯನ್ನು ಸಿದ್ಧಪಡಿಸಿದೆ. ಕಾನೂನು ಇಲಾಖೆ ಇದರ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಈ ಕಾಯ್ದೆ ಮಂಡನೆಯಾಗಲಿದೆ. ವಿಧಾನ ಮಂಡಲದಲ್ಲಿ ಮಂಡನೆಯಾದ ಬಳಿಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ನಂತರ ಅಧಿಕೃತವಾಗಿ ಇದು ಜಾರಿಯಾಗಲಿದೆ.

ಮಡೆಸ್ನಾನಕ್ಕೆ ಅವಕಾಶ:
ನರಬಲಿ ಮತ್ತು ಇತರೆ ಅಮಾನವೀಯ, ಕ್ಷುದ್ರ ಅಘೋರಿ ಅನುಸರಣೆಗಳು ಹಾಗೂ ಮಾಟ-ಮಂತ್ರಗಳ ನಿಷೇಧಕ್ಕೆ ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸುತ್ತಿರುವ ಕರ್ನಾಟಕ ನಿಷೇಧ ಕಾಯ್ದೆ-2016ರಲ್ಲಿ ಮಡೆ ಮಡೆ ಸ್ನಾನವನ್ನು ಸದ್ಯಕ್ಕೆ ನಿಷೇಧ ಮಾಡದಿರಲು ಸರ್ಕಾರ ತೀರ್ಮಾನಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಡೆ ಮಡೆ ಸ್ನಾನ ಅತ್ಯಂತ ಜನಪ್ರಿಯವಾಗಿದೆ. ಮೇಲ್ಜಾತಿಯವರು ಊಟ ಮಾಡಿ ಬಿಟ್ಟ ಎಂಜಲೆಲೆಯ ಮೇಲೆ ಉರುಳುಸೇವೆ ಮಾಡಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬ ಪ್ರತೀತಿ ಇದೆ.

ವಿಧಾನಸಭೆ ಚುನಾವಣೆ ಎರಡು ವರ್ಷ ಇರುವಾಗ ಕರಾವಳಿ ಜಿಲ್ಲೆಯಲ್ಲಿ ಮಡೆ ಮಡೆ ಸ್ನಾನ ನಿಷೇಧ ಮಾಡಿದರೆ ಪಕ್ಷಕ್ಕೆ ಹಾನಿ ಉಂಟಾಗಬಹುದೆಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಇದನ್ನು ನಿಷೇಧದಿಂದ ಹೊರಗಿಡಲಾಗಿದೆ. ಅಲ್ಲದೆ, ಮಡೆ ಮಡೆ ಸ್ನಾನವನ್ನು ನಿಷೇಧ ಮಾಡಬೇಕೆಂದು ಕೆಲ ಸಂಘಟನೆಗಳು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಇದೀಗ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಿಷೇಧ ಮಾಡುವ ಸಂಬಂಧ ನ್ಯಾಯಾಲಯ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ.

ಚಳಿಗಾಲದಲ್ಲಿ ಮಂಡನೆ:

ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಿದ್ಧಪಡಿಸಿರುವ ಕರಡು ಮಸೂದೆಯನ್ನು ಕಾನೂನು ಇಲಾಖೆ ಅಂತಿಮಗೊಳಿಸಲು ಸಜ್ಜಾಗಿದೆ. ಜೂನ್ ಅಥವಾ ಜುಲೈನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ಶಿವಮೊಗ್ಗ ಜಿಲ್ಲೆಯಲ್ಲಿ ಲೋಕ ಕಲ್ಯಾಣದ ಹೆಸರಿನಲ್ಲಿ ಸೋಮಯಾಗ ಮಾಡಿ ಮೇಕೆಗಳನ್ನು ಬಲಿ ಕೊಟ್ಟಿದ್ದಾರೆಂಬ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬ್ರಾಹ್ಮಣರೇ ಪೂಜೆ ಸಲ್ಲಿಸಿ ಮೇಕೆಗಳನ್ನು ಬಲಿ ಕೊಟ್ಟಿದ್ದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ದೊಡ್ಡ ರಾದ್ಧಾಂತವೇ ಸೃಷ್ಟಿಯಾಗಿತ್ತು. ಇಂತಹ ಪ್ರಕರಣಗಳು ಸಮಾಜದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುವುದರಿಂದ ಶಾಶ್ವತವಾಗಿ ನಿಷೇಧ ಹೇರಲು ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸುತ್ತಿದೆ.

ಗೊಂದಲದಿಂದ ವಿಳಂಬ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂಢನಂಬಿಕೆಗಳನ್ನು ನಿಷೇಧ ಮಾಡಬೇಕೆಂದು ಕೆಲ ಪ್ರಗತಿಪರರು ಒತ್ತಡ ಹಾಕಿದ್ದರು. ಪ್ರಾರಂಭದಲ್ಲಿ ಇದಕ್ಕೆ ಕರಡು ಮಸೂದೆ ಸಿದ್ಧಪಡಿಸುವಂತೆ ಸರ್ಕಾರ ಬೆಂಗಳೂರು ಮತ್ತು ಧಾರವಾಡದಲ್ಲಿರುವ ಕಾನೂನು ವಿಶ್ವವಿದ್ಯಾನಿಲಯಕ್ಕೆ ಸಲಹೆ ಮಾಡಿತ್ತು. ಆದರೆ, ಎರಡೂ ವಿಶ್ವವಿದ್ಯಾನಿಲಯಗಳೂ ವಿಭಿನ್ನವಾದ ಮಸೂದೆಯನ್ನು ಸಿದ್ಧಪಡಿಸಿದ್ದರಿಂದ ಸರ್ಕಾರ ಗೊಂದಲಕ್ಕೆ ಸಿಲುಕಿತ್ತು. ಮೂಢನಂಬಿಕೆಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಬೆಂಗಳೂರು ರಾಷ್ಟ್ರೀಯ ಕಾನೂನು ವಿವಿ ಸರ್ಕಾರಕ್ಕೆ ಸಲಹೆ ಮಾಡಿತ್ತು.

ಇದಕ್ಕೆ ವ್ಯತಿರಿಕ್ತ ಎಂಬಂತೆ ಧಾರವಾಡದ ರಾಷ್ಟ್ರೀಯ ಕಾನೂನು ವಿವಿ ಕೆಲವು ಮೌಢ್ಯಗಳನ್ನು ಮಸೂದೆಯಿಂದ ಹೊರಗಿಟ್ಟು ಮಂಡನೆ ಮಾಡುವಂತೆ ವರದಿ ನೀಡಿತ್ತು. ಹೀಗೆ ವಿವಿಯಲ್ಲೇ ಪ್ರತ್ಯೇಕ ವರದಿಗಳು ಬಂದ ಕಾರಣ ಯಾವ ಮಸೂದೆಯನ್ನು ಮಂಡಿಸಬೇಕೆಂಬ ಗೊಂದಲಕ್ಕೆ ಸರ್ಕಾರ ಸಿಲುಕಿತ್ತು. ಇದೇ ವೇಳೆ ಈ ಮಸೂದೆಗೆ ಪ್ರತಿಪಕ್ಷಗಳು, ಸಾರ್ವಜನಿಕರು ಮತ್ತು ಧಾರ್ಮಿಕ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ನೆನೆಗುದಿಗೆ ಬಿದ್ದಿತ್ತು.

ಅಮಾನವೀಯ ಘಟನೆಗಳು:

ರಾಜ್ಯದಲ್ಲಿ ಇತ್ತೀಚೆಗೆ ದೇವರು, ನಂಬಿಕೆ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಕೆಲವು ಅಮಾನವೀಯ ಘಟನೆಗಳು ಮರುಕಳಿಸುತ್ತಲೇ ಇವೆ. ನಿಧಿ ಹೆಸರಿನಲ್ಲಿ ಮಕ್ಕಳನ್ನು ಬಲಿ ಕೊಡುವುದು, ದೆವ್ವ ಬಿಡಿಸುವ ಹೆಸರಿನಲ್ಲಿ ಮಹಿಳೆಯರ ಶೋಷಣೆ, ಜ್ಯೋತಿಷಿಗಳ ಸಲಹೆಯಂತೆ ನಡೆದುಕೊಳ್ಳುವುದು, ಬೂದಿಬಾಬಾಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಈ ಮಸೂದೆ ಮಂಡನೆ ಮಾಡಲು ಸರ್ಕಾರ ಮುಂದಾಗಿದೆ.

Comments are closed.