ಕರ್ನಾಟಕ

ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ಸಮೀಪದ ಡೊಂಬರಕೊಪ್ಪ ಬಳಿ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

Pinterest LinkedIn Tumblr

accident

ಚನ್ನಮ್ಮನ ಕಿತ್ತೂರು: ಇಲ್ಲಿಗೆ ಸಮೀಪದ ಡೊಂಬರಕೊಪ್ಪ ಗ್ರಾಮದ ಪ್ರವಾಸಿ ಮಂದಿರದ ಎದುರು ಭಾನುವಾರ ಬೆಳಿಗ್ಗೆ ಕಾರೊಂದು (ಮಹಿಂದ್ರಾ ಝೈಲೊ) ತಮಿಳುನಾಡಿಗೆ ಸೇರಿದ ಲಾರಿಗೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಆರು ಜನರಿಗೆ ಗಾಯಗಳಾಗಿವೆ.

ಮೃತರನ್ನು ಹುಕ್ಕೇರಿ ತಾಲ್ಲೂಕಿನ ಕಬ್ಬೂರು ಗ್ರಾಮದ ರಾಜು ಒಡೆಯರ(32) ಮತ್ತು ಬಾಲಕಿ ಪೂರ್ವಿ ನಾಯಕ (10) ಎಂದು ಗುರುತಿಸಲಾಗಿದೆ.

ಭಾಗ್ಯಶ್ರೀ ಒಡೆಯರ, ನವೀನ ನಾಯಕ, ಜ್ಯೋತಿ ನಾಯಕ, ರಾಘು ಸಾಹುಕಾರ, ಜಯಶ್ರೀ ಸಾಹುಕಾರ, ಚಾಲಕ ಸುಧಾಕರ ಭಜಂತ್ರಿ ಗಾಯಗೊಂಡಿದ್ದು, ಇವರಲ್ಲಿ ನವೀನ ನಾಯಕ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಡೆಯರ, ನಾಯಕ ಮತ್ತು ಸಾಹುಕಾರ ಕುಟುಂಬಗಳು ಮೈಸೂರು ಮತ್ತಿತರ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ ವಾಪಸಾಗುವಾಗ ಈ ಅಪಘಾತ ಸಂಭವಿಸಿದೆ.

ಸಕಿತ್ತೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವಪರೀಕ್ಷೆ ನಡೆಸಲಾಯಿತು. ‘ನಿದ್ದೆ ಮಂಪರಿನಲ್ಲಿ ಕಾರಿನ ಚಾಲಕ ಲಾರಿಗೆ ಹಿಂದಿನಿಂದ ಡಿಕ್ಕಿ ಮಾಡಿದ್ದರಿಂದ ಈ ಅವಘಡ ಸಂಭವಿಸಿರಬಹುದು’ ಎಂದು ಪೊಲೀಸರು ತಿಳಿಸಿದರು. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment