ಕರ್ನಾಟಕ

ಆಸ್ತಿ ತೆರಿಗೆ ಪಾವತಿ ಮುಗಿಯದ ಗೊಂದಲ

Pinterest LinkedIn Tumblr

astiಬೆಂಗಳೂರು, ಮೇ ೧೩- ನಗರದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ ಆನ್ ಲೈನ್ ವ್ಯವಸ್ಥೆಯಲ್ಲಿ ಗೊಂದಲಗಳು ಇನ್ನೂ ಮುಂದುವರೆದಿದ್ದು, ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿರವರು ಇಂದು ಮಧ್ಯಾಹ್ನ ಈ ವ್ಯವಸ್ಥೆಯಲ್ಲಿನ ಹದಿನೈದಕ್ಕೂ ಹೆಚ್ಚು ಲೋಪದೋಷಗಳನ್ನು ಬಯಲಿಗೆಳೆದಿದ್ದಾರೆ.
ತಮ್ಮದೇ ಆಸ್ತಿಗೆ ಸಂಬಂಧಿಸಿದಂತೆ ಖಾಲಿ ನಿವೇಶನ ಎಂದು ತೋರಿಸಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರ ಹೇಳಿಕೆ ಹಾಗೂ ಪಾಲಿಕೆ ಸಭೆಯಲ್ಲಿ ಸದಸ್ಯರು ಹಾಕಿದ ಸವಾಲಿಗೆ ಪ್ರತಿಯಾಗಿ ಸಹಾಯಕ ಕೇಂದ್ರಗಳಿಗೆ ಮಾಧ್ಯಮದವರನ್ನು ಕರೆದೊಯ್ದು ಆನ್ ಲೈನ್ ವ್ಯವಸ್ಥೆಯ ಗೊಂದಲವನ್ನು ಬೆಳಕಿಗೆ ತಂದಿದ್ದಾರೆ.
ತಾವು ಪ್ರತಿನಿಧಿಸುವ ಕಾಚರಕನಹಳ್ಳಿ ವಾರ್ಡ್‌‌ನಲ್ಲಿನ ಸಹಾಯಕ ಕೇಂದ್ರಕ್ಕೆ ಕರೆದೊಯ್ದಾಗ ಆನ್ ಲೈನ್ ಗೊಂದಲದ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ದೀಪಕ್ ಪ್ರದೀಪ್ ಸೇರಿದಂತೆ, ಹಲವು ನಾಗರಿಕರು ತಮ್ಮ ಆಸ್ತಿಗಳಿಗೆ ತೆರಿಗೆ ಕಟ್ಟಲು ಬಂದಾಗ ಚಲನ್ ಜನರೇಟ್ ಆಗದೆ ಖಾಲಿ ನಿವೇಶನ ಎಂದು ತೋರಿಸುತ್ತಿದ್ದುದ್ದನ್ನು ಕಂಡ ಆಸ್ತಿ ಮಾಲೀಕರು ದಿಗ್ಭ್ರಮೆಗೊಂಡರು.
ಕಳೆದ ವರ್ಷ ತಮ್ಮ ಆಸ್ತಿಗೆ 3,993 ರೂ. ತೆರಿಗೆ ಕಟ್ಟಿದ್ದೇನೆ. ಆದರೆ ಈ ಬಾರಿ ಖಾಲಿ ನಿವೇಶನ ಎಂದು ತೋರಿಸುತ್ತಿರುವುದು ನನಗೆ ಅಚ್ಚರಿಯಾಗಿದೆ ಎಂದು ಅವರು ಆಪಾದಿಸಿದರು.
ಹೆಣ್ಣೂರು ನಿವಾಸಿ ಪ್ರದೀಪ್ ಎನ್ನುವವರು ತಮ್ಮ ಫ್ಲ್ಯಾಟ್‌ಗೆ ನಾಲ್ಕು ಸಾವಿರ ರೂ. ಕಟ್ಟಿದ್ದೆ. ಈ ಬಾರಿ ತೆರಿಗೆ ಕಟ್ಟಲು ಬಂದರೆ, ಖಾಲಿ ನಿವೇಶನ ಎಂದು ತೋರಿಸುತ್ತಿದೆ. ಇದು ತಮಗೆ ಗೊಂದಲವನ್ನುಂಟು ಮಾಡಿದೆ ಎಂದು ಮಾಧ್ಯಮದೆದುರು ತರಾಟೆಗೆ ತೆಗೆದುಕೊಂಡರು.
ಕಳೆದ ವರ್ಷದ ಆಸ್ತಿ ತೆರಿಗೆ ಕಟ್ಟಿಲ್ಲ. ಈ ಬಾರಿ ಕಟ್ಟೋಣವೆಂದರೆ, ಆನ್ ಲೈನ್‌ನಲ್ಲಿ ಮಾಹಿತಿಯೇ ಸಿಕ್ಕುತ್ತಿಲ್ಲ ಎಂದು ಸೈಯದ್ ಮಹಮದ್ ಎನ್ನುವವರು ದೂರಿದರು.
ಪದ್ಮನಾಭ ರೆಡ್ಡಿ ಟೀಕೆ
ನನ್ನ ಆಸ್ತಿಗೆ ಸಂಬಂಧಪಟ್ಟಂತೆ ನಾನು ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ. ಆದರೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ಅವರು ನಾನು ಸುಳ್ಳು ಮಾಹಿತಿ ನೀಡಿದ್ದೇನೆ ಎಂದು ಆರೋಪಿಸಿದ್ದಾರೆ.
ಅವರೇ ಖುದ್ದು ಇಲ್ಲಿಗೆ ಬಂದಿದ್ದರೆ, ವಾಸ್ತವ ಸಂಗತಿ ಗೊತ್ತಾಗುತ್ತಿತ್ತು ಎಂದು ಪದ್ಮನಾಭ ರೆಡ್ಡಿ ತಿರುಗೇಟು ನೀಡಿದ್ದಾರೆ.
ನಾನು ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸುವ ಅಗತ್ಯವಿಲ್ಲ. ಆದರೆ ಆನ್ ಲೈನ್‌ನಲ್ಲಿ ಗೊಂದಲ ಉಂಟಾಗಿದೆ. ಅದರ ಬಗ್ಗೆ ಸರಿಯಾದ ಮಾಹಿತಿ ಪಡೆಯದೆ, ನನ್ನ ವಿರುದ್ಧ ಗೂಬೆ ಕೂರಿಸುವುದು ತಪ್ಪು ಎಂದವರು ಹೇಳಿದರು.

Write A Comment