ಕರ್ನಾಟಕ

ಅಹಿಂದ ಹೆಸರಲ್ಲಿ ಒಂದು ಜಾತಿಗೆ ಮಾತ್ರ ಸಿದ್ದು ಮಣೆ

Pinterest LinkedIn Tumblr

13A6clrಬೆಂಗಳೂರು, ಮೇ ೧೩: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದ ಬಳಿಕ ದಲಿತರು, ಅಲ್ಪಸಂಖ್ಯಾತರನ್ನು ಮರೆತು ಕೇವಲ ಹಿಂದುಳಿದ ವರ್ಗದಲ್ಲಿ ಒಂದು ಸಣ್ಣ ವಿಭಾಗಕ್ಕೆ ಮಾತ್ರ ಆದ್ಯತೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿನ ಬದಲಾವಣೆ ಆಗಿಲ್ಲ ಎಂದು ಸಿಪಿಎಂ ಮುಖಂಡ ಜಿ.ಎನ್. ನಾಗರಾಜ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿಂದು ಏರ್ಪಡಿಸಿದ್ದ “ಸಹುಸಂಖ್ಯಾತ ಸಮುದಾಯಕ್ಕೆ-ಸಾಮಾಜಿಕ ಸಮಾನತೆಗಾಗಿ ಕಾಂಗ್ರೆಸ್ ಕೊಡುಗೆ ಏನು? ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತುಬುಡಕಟ್ಟು ಉಪಯೋಜನೆ ಕಾಯ್ದೆಯಡಿ ದಲಿತರಿಗೆ ಮೀಸಲಿಟ್ಟ ಹಣ ಅವರ ಅಭಿವೃದ್ಧಿಗಾಗಿ ಮಾತ್ರ ಬಳಸಬೇಕು ಎಂಬ ಹೊಸ ನಿಯಮ ತಂದಿರುವುದು ಮಾತ್ರ ಕಾಂಗ್ರೆಸ್ ಸರ್ಕಾರದ ಒಂದು ಸಾಧನೆ. ಆದರೆ ಇದರಿಂದ ದಲಿತರ ಅಭಿವೃದ್ಧಿಯಾಗಿಲ್ಲ ಎಂದು ಟೀಕಿಸಿದ ಅವರು, ಅಹಿಂದ ಚಳವಳಿ ನಡೆಸುವಾಗ ಇದ್ದ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಮೇಲೆ ಸಂಪೂರ್ಣ ಬದಲಾಗಿದ್ದಾರೆ. ದಲಿತರಿಗೆ ಬಾಡಿಗೆ ಮನೆ ಸಿಗುತ್ತಿಲ್ಲ. ಬಿಡಿಎ ಎಲ್ಲಾ ಬಡಾವಣೆಗಳನ್ನು ಖಾಸಗಿಯವರಿಗೆ ನೀಡಿದೆ. ಇದರಿಂದ ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಮನೆ ಸಿಗದಂತಾಗಿದೆ. ಆದ್ದರಿಂದ ಬಿಡಿಎ ನಿವೇಶನ ಹಂಚುವಾಗ ಮೀಸಲಾತಿ ನೀತಿಯನ್ನು ಅನುಸರಿಬೇಕು. ಆದರೆ ದಲಿತರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ದಲಿತರು ತಮ್ಮ ಜಾತಿ ಮರೆಮಾಚಿ ಬಾಡಿಗೆ ಮನೆ ಪಡೆಯಬೇಕಾದ ಪರಿಸ್ಥಿತಿ ಇದೆ. ಖಾಸಗಿ ಕಂಪನಿಗಳಲ್ಲಿ ದಲಿತರಿಗೆ ಉದ್ಯೋಗ ದೊರಕುತ್ತಿಲ್ಲ. ಈ ಸಂದರ್ಭದಲ್ಲಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಹೋರಾಟ ನಡೆಯಬೇಕಾಗಿದೆ. ಇದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ನಡೆಯಬೇಕು. ಬಿಜೆಪಿಯವರು ದಲಿತರಿಗೆ ನೀಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದಲಿತರ ಮೇಲೆ ದಾಳಿ ನಡೆಸುತ್ತಿದ್ದಾರೆ. ರೋಹಿತ್ ಮೇಮುಲನ ಸಾವಿಗೆ ಎಬಿವಿಪಿ, ಆರೆಸ್ಸೆಸ್ ಮತ್ತು ಬಿಜೆಪಿಯೇ ಕಾರಣ. ಇಂತಹ ಪಕ್ಷದಿಂದ ದಲಿತರ ಅಭಿವೃದ್ಧಿ ನಿರೀಕ್ಷಿಸುವುದು ತಪ್ಪು ಎಂದು ಹೇಳಿದರು.
ಗಾಂಧೀಜಿಯವರು ಒಮ್ಮೆಯೂ ಜೀತ ಪದ್ಧತಿ ಬಗ್ಗೆ ಮಾತನಾಡಿಲ್ಲ. ಅಂಬೇಡ್ಕರ್ ಅವರ ಪ್ರಸ್ತಾಪವನ್ನು ಕಾಂಗ್ರೆಸ್ ಎಂದೂ ಒಪ್ಪಿಲ್ಲ. ದಲಿತರಿಗೆ ಭೂಮಿ ದೊರೆಯಬಾರದು ಎಂಬ ಉದ್ದೇಶದಿಂದ ಅಸ್ಪಶ್ಯತೆ ನಿರ್ಮೂಲನೆ ಆಗದಂತೆ ನೋಡಿಕೊಳ್ಳಲಾಯಿತು ಎಂದು ಆರೋಪಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಆರ್. ಮೋಹನ್ ರಾಜ್ ಮಾತನಾಡಿ, ಸಿದ್ದರಾಮಯ್ಯ ಅವರು ಪ್ರಗತಿಪರ ಸಂಘಟನೆಗಳ ಹೋರಾಟದ ಫಲವಾಗಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಅವರು ಅದನ್ನು ಮರೆತಂತಿದೆ. ಹಸು ನೀಡುವ ಬದಲು ಹಾಲು ನೀಡುತ್ತಿದ್ದಾರೆ. ಭೂಮಿ ನೀಡುವ ಬದಲು ಅನ್ನ ನೀಡುತ್ತಿದ್ದಾರೆ. ಈ ಮೂಲಕ ಬಡವರನ್ನು ಮತ್ತಷ್ಟು ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎನ್.ವೆಂಕಟಗಿರಿಯಯ್ಯ, ಬಸವರಾಜ್ ಪೌತಾಳ್, ಪರಶುರಾಮ್ ನೀಲನಾಯಕ್, ಎಂ.ಸಿ. ನಾರಾಯಣ್ ಮತ್ತಿತರರು ಹಾಜರಿದ್ದರು.

Write A Comment