ಕರ್ನಾಟಕ

ಸ್ತ್ರೀಯರಿಗೆ ಹೆಚ್ಚು ಸ್ಥಾನ ನೀಡಲು ಎಪಿಎಂಸಿ ಕಾಯ್ದೆ ತಿದ್ದುಪಡಿ

Pinterest LinkedIn Tumblr

Shamanur-10-5ದಾವಣಗೆರೆ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಹಿಳಾ ನಿರ್ದೇಶಕ ಸ್ಥಾನ ಹೆಚ್ಚಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎಪಿಎಂಸಿಯಲ್ಲಿ ಮಹಿಳಾ ನಿರ್ದೇಶಕ ಸ್ಥಾನಗಳು ಹೆಚ್ಚಾಗಲಿವೆ. ಒಬ್ಬರು ಇರುವ ಕಡೆ ಇಬ್ಬರು, ಅದೇ ರೀತಿ ಇಬ್ಬರು ಇರುವ ಕಡೆ ಮೂವರು ನಿರ್ದೇಶಕರಿಗೆ ಪ್ರಾತಿನಿಧ್ಯ ನೀಡಲಾಗುವುದು. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.

ರಾಜ್ಯದಲ್ಲಿನ ಭೀಕರ ಬರ ಹಾಗೂ ಕಾಯ್ದೆಗೆ ತಿದ್ದುಪಡಿ ತರಬೇಕಾದ ಹಿನ್ನೆಲೆಯಲ್ಲಿ ಎಪಿಎಂಸಿ ಚುನಾವಣೆಗಳನ್ನು ನವೆಂಬರ್‌ನಲ್ಲಿ ನಡೆಸಲಾಗುವುದು. ಹಾಲಿ ಅಧಿಕಾರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಮಂಗಳವಾರ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಮಾವು ರಫ್ತು ಮಾಡುವ ಕುರಿತಂತೆ ಮಲೇಷಿಯಾ ನಿಯೋಗದ ಜೊತೆಗೆ ಮಾತುಕತೆ ನಡೆಯುತ್ತಿದೆ. ಇದರಿಂದ ಮಾವು ಬೆಳೆಗಾರರಿಗೆ ಉತ್ತಮ ಧಾರಣೆ ದೊರೆಯಲಿದೆ. ಮಳೆಯ ಕೊರತೆ, ಬಿಸಿಲಿನ ತಾಪಕ್ಕೆ ಕೆಲವಾರು ಕಡೆ ಮಾವು ಇಳುವರಿ ಚೆನ್ನಾಗಿಲ್ಲ. ಕೋಲಾರ, ಧಾರವಾಡ ಇತರೆಡೆ ಬೆಳೆ ಚೆನ್ನಾಗಿದೆ ಎಂದು ಹೇಳಿದರು.

ಭಾರೀ ಬದಲಾವಣೆ ಆಗಲ್ಲ: ಶಾಮನೂರು
ಮಂತ್ರಿ ಮಂಡಲ ಪುನಾರಚನೆ ಆಗುತ್ತದೆ. ಆದರೆಎಲ್ಲರೂ ಅಂದುಕೊಂಡಿರುವಂತೆ ಭಾರೀ ಬದಲಾವಣೆ ಏನೂ ಆಗುವುದಿಲ್ಲ. ಅಲ್ಪಸ್ವಲ್ಪ ಬದಲಾವಣೆ ಆಗಬಹುದು ಎಂದು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕೇವಲ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ ಅಷ್ಟೇ ಎಂದರು.

ಮಂತ್ರಿಮಂಡಲದಲ್ಲಿ ಹಿರಿಯರ ಬದಲಿಗೆ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು ಎಂಬ ಮಾತು ಕೇಳಿ ಬರುತ್ತಿದೆಯೆಲ್ಲಾ ಎಂಬ ಪ್ರಶ್ನೆಗೆ, ಊರಿಗೆ ಬಂದವರು ನೀರಿಗೆ ಬರಲೇಬೇಕಲ್ಲ. ಕಾಯ್ದು ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವನ್ನು ಹೈಕಮಾಂಡ್‌ ಬಿಟ್ಟ ವಿಚಾರ. ಆಯ್ಕೆಗೂ ಮುನ್ನ ರಾಜ್ಯದ ಮುಖಂಡರೊಂದಿಗೆ ಚರ್ಚಿಸಲಿದೆ ಎಂದರು.
-ಉದಯವಾಣಿ

Write A Comment