ಕರ್ನಾಟಕ

ಬೆಳಗಾವಿ ಜಿಲ್ಲಾ ಪಂಚಾಯ್ತಿ ಕಾಂಗ್ರೆಸ್ ಮಡಿಲಿಗೆ

Pinterest LinkedIn Tumblr

belagavi-zp-photoಬೆಳಗಾವಿ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಜಯಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ಬೆಳಗಾವಿ ಜಿಲ್ಲಾ ಪಂಚಾಯ್ತಿಯ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಇಬ್ಬರು ಸದಸ್ಯರು ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರಿತು. ಒಟ್ಟು 90 ಸದಸ್ಯ ಬಲದ ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ 43 ಸ್ಥಾನ ಹೊಂದಿದೆ.

ಪರಿಶಿಷ್ಟ ಜಾತಿ(ಮಹಿಳೆಗೆ) ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಉಗಾರ ಕ್ಷೇತ್ರದ ಆಶಾ ಪ್ರಶಾಂತ ಐಹೊಳೆ ಆಯ್ಕೆಯಾದರು. ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಡೋಲಿ ಕ್ಷೇತ್ರದ ಅರುಣ ಅಣ್ಣು ಕಟಾಂಬಳೆ ಆಯ್ಕೆಯಾದರು.

ಉಭಯ ಸ್ಥಾನಗಳಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವ್ವ ಕೋಲಕಾರ ಹಾಗೂ ಅಜಿತ್‌ ಚೌಗಲೆ ಅವರು 39 ಮತ ಗಳಿಸುವ ಮೂಲಕ ಪರಾಭವಗೊಂಡರು.

ಎಂಇಎಸ್ ಬೆಂಬಲಿತ ಐವರು ಪಕ್ಷೇತರ ಸದಸ್ಯರ ಪೈಕಿ ಚುನಾವಣೆಗೆ ಸ್ಪರ್ಧಿಸಿದ್ದ ಮಾಧುರಿ ಹೆಗಡೆ ಹಾಗೂ ಜಯರಾಮ ದೇಸಾಯಿ ಕೇವಲ ಐದು ಮತ ಪಡೆದರು.

ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಎನ್‌. ಜಯರಾಮ್‌ ಆಯ್ಕೆ ಘೋಷಿಸಿದರು.

ಮತ್ತೆ ಕ್ಯಾತೆ?: ಚುನಾವಣೆಯ ವೇಳೆ, ಇಡೀ ಪ್ರಕ್ರಿಯೆಯನ್ನು ಮರಾಠಿ ಅಥವಾ ಹಿಂದಿಯಲ್ಲಿ ನಡೆಸುವಂತೆ ಕೋರಿ ಪ್ರತಿಭಟಿಸಿದ ಎಂಇಎಸ್‌ ಬೆಂಬಲಿತ ಸದಸ್ಯರು, ಮಹಾರಾಷ್ಟ್ರದ ಪರ ಘೋಷಣೆ ಕೂಗಿದರು. ಆದರೆ, ಕರ್ನಾಟಕದ ಆಡಳಿತ ಭಾಷೆಯಾಗಿರುವ ಕನ್ನಡದಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಿದ ಎನ್‌.ಜಯರಾಮ್‌, ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದು ತಿಳಿಸಿದರು.

Write A Comment