ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ಚಿಂತಕರ ಚಾವಡಿ

Pinterest LinkedIn Tumblr

gergeಬೆಂಗಳೂರು, ಮೇ ೧೦- ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಲು ಬೆಂಗಳೂರು ನೀಲನಕ್ಷಾ ಕ್ರಿಯಾ ತಂಡ (ಬೆಂಗಳೂರು ವಿಷನ್ ಗ್ರೂಪ್) ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಬೆಂಗಳೂರು ನಗರದ ಸಮಸ್ಯೆಗಳ ಪರಿಹಾರ ಹಾಗೂ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಇದರಿಂದ ಅನುಕೂಲವಾಗಲಿದೆ. ಈ ತಂಡದಲ್ಲಿ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನಗರಾಭಿವೃದ್ಧಿಯ ತಜ್ಞರು ಇದ್ದು, ಈ ಬೆಂಗಳೂರು ನೀಲನಕ್ಷಾ ಕ್ರಿಯಾ ತಂಡಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಉಪಾಧ್ಯಕ್ಷರಾಗಿರುವುದಾಗಿ ಸಚಿವ ಕೆ.ಜೆ. ಜಾರ್ಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಬೆಂಗಳೂರು ವಿಷನ್ ಗ್ರೂಪ್‌ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇತ್ತು. ಈಗ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರು ನೀಲನಕ್ಷಾ ಕ್ರಿಯಾ ತಂಡ ರಚಿಸಿ ಆದೇಶವನ್ನು ಹೊರಡಿಸಲಾಗಿದೆ ಎಂದರು.
ಏ. 28 ರಂದು ಬೆಂಗಳೂರು ವಿಷನ್ ಗ್ರೂಪ್ ಸಂಬಂಧ ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ ಬಿಬಿಎಂಪಿಯ ಮಹಾಪೌರರು ಹಾಗೂ ನಗರಾಭಿವೃದ್ಧಿ ತಜ್ಞ ವಿವೇಕ್ ಮೆನನ್ ಇವರನ್ನೊಳಗೊಂಡು ಒಟ್ಟು 25 ಸದಸ್ಯರಿರುವ ತಂಡವನ್ನು ರಚಿಸಿ ಮಾರ್ಪಾಡು ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಈ ತಂಡದಲ್ಲಿ ಇನ್‌ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ, ಅಜೀಂಪ್ರೇಮ್‌ಜಿ, ಕಿರಣ್ ಮಜುಂದಾರ್ ಷಾ, ಮೋಹನ್‌ದಾಸ್ ಪೈ ಸೇರಿದಂತೆ ಹಲವು ಮಂದಿ ಗಣ್ಯರು ಇದ್ದು, ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಲಿದ್ದಾರೆ ಎಂದರು.
ಈ ಕ್ರಿಯಾ ತಂಡ ನೀಡುವ ಸಲಹೆಯನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಮಹಾನಗರ ಯೋಜನಾ ಸಮಿತಿ ಸಭೆಯಲ್ಲಿ ಇಟ್ಟು ಅಂತಿಮ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.
ಬಿಬಿಎಂಪಿಗೆ ಪರ್ಯಾಯವಾಗಿ ಈ ಕ್ರಿಯಾ ತಂಡವನ್ನು ರಚಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿ, ಈ ಕ್ರಿಯಾ ತಂಡ ಕೇವಲ ಸಲಹೆ ನೀಡುವುದಕ್ಕಷ್ಟೆ ಸೀಮಿತ ಎಂದರು.

Write A Comment