ಕರ್ನಾಟಕ

ಮತ್ತೆ ಭುಗಿಲೆದ್ದ ಮಹಾದಾಯಿ ಕೂಗು

Pinterest LinkedIn Tumblr

10hub4ನರಗುಂದ, ಮೇ 10- ವಿದ್ಯಾರ್ಥಿಗಳ ಪರೀಕ್ಷೆ, ಜಿ.ಪಂ. ತಾ.ಪಂ. ಚುನಾವಣೆ ಹಿನ್ನೆಲೆ ಕೊಂಚ ತಣ್ಣಗಾಗಿದ್ದ ಮಹಾದಾಯಿ ಜೀವಜಲ ಪಡೆಯುವ ರೈತರ ಹೋರಾಟ ಇಂದು ಮತ್ತೆ ಮರುಕಾವಿನೊಂದಿಗೆ ತೀವ್ರಗೊಂಡಿದ್ದು, ನರಗುಂದ ಪಟ್ಟಣ ಅಕ್ಷರಶಃ ಸ್ತಬ್ದವಾಗಿದೆ.
ಪಟ್ಟಣದಲ್ಲಿ ಮಹಾದಾಯಿ ಯೋಜನೆ ಅನುಷ್ಠಾನಕ್ಕಾಗಿ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 300 ದಿನಕ್ಕೆ ಕಾಲಿರಿಸಿದೆ.
ಕಳೆದ 300 ದಿನಗಳ ಹಿಂದೆ ಆರಂಭವಾದ ರೈತರ ಹೋರಾಟ ಸಾಕಷ್ಟು ಮಜಲುಗಳನ್ನು ಕಂಡಿತ್ತು.
ಆರಂಭದಲ್ಲಿ ತೀವ್ರತೆ ಹೊಂದಿ ನರಗುಂದ, ನವಲಗುಂದ, ಹುಬ್ಬಳ್ಳಿ ಸೇರಿದಂತೆ ಇಡೀ ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದ ಮಹಾದಾಯಿ ಹೋರಾಟ ನಿತ್ಯ ಬಂದ್, ಬಸ್ ಸಂಚಾರ ಸ್ಥಗಿತ, ಬಸ್‌ಗಳಿಗೆ ಕಲ್ಲು, ಬೆಂಕಿ, ಕಣಕುಂಬಿಗೆ ತೆರಳಿದ ರೈತರಿಂದ ತಡೆಗೋಡೆ ಒಡೆಯುವ ಯತ್ನ, ಹುಬ್ಬಳ್ಳಿಯಲ್ಲಿ ಚಲನಚಿತ್ರ ತಾರೆಯರ ಬೃಹತ್ ಪ್ರದರ್ಶನ, ರೈತರಿಗೆ ಬೆಂಬಲ, ರೈತರ ಬಂಧನ, ಬಿಡುಗಡೆ, ರಾಜಧಾನಿ ಬೆಂಗಳೂರಿಗೂ ವಿಸ್ತರಿಸಿದ ಮಹದಾಯಿ ಹೋರಾಟ ಇನ್ನೇನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸಿ ತಾರ್ಕಿಕ ಅಂತ್ಯ ಕಾಣಲಿದೆಯೇನೋ ಎಂಬ ಮಟ್ಟ ಮುಟ್ಟಿತ್ತು.
ಆದರೆ ರೈತರೊಳಗೆ ವಿವಿಧ ತಂಡಗಳಾಗಿ ಹೋರಾಟಕ್ಕೆ ರಾಜಕೀಯ ಬೆರೆತು ಬಿಜೆಪಿ ಕಾಂಗ್ರೆಸ್ ಆರೋಪ- ಪ್ರತ್ಯಾರೋಪಗಳ ಬೇಗುದಿಯಲ್ಲಿ ಬೆಂದ ಹೋರಾಟಕ್ಕೆ ವಿದ್ಯಾರ್ಥಿಗಳ ಪರೀಕ್ಷೆ, ಜಿ.ಪಂ. ತಾ.ಪಂ. ಚುನಾವಣೆಗಳು ಕೊಂಚ ಹಿನ್ನೆಡೆ ಒದಗಿಸಿ ಸೂರ್ಯನ ಶಾಖದಲ್ಲಿ ಮುದುಡಿದ ತಾವರೆಯಂತಹ ಪರಿಸ್ಥಿತಿಯನ್ನು ಮಹಾದಾಯಿ ಹೋರಾಟ ತಲುಪಿತ್ತು.
ಇಷ್ಟರಲ್ಲಿಯೇ ಮಹಾದಾಯಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಕರಣಕ್ಕೆ ರಾಜ್ಯ ಸರ್ಕಾರ ಪ್ರಕರಣವನ್ನು ಶೀಘ್ರ ಇತ್ಯರ್ಥ ಮಾಡುವಂತೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ಈಚೆಗಷ್ಟೆ ನಡೆಸಿದ ನ್ಯಾಯಾಧೀಕರಣದ ನ್ಯಾಯಮೂರ್ತಿ ಎನ್.ಜೆ. ಪಾಂಚಾಲ ಅವರ ನೇತೃತ್ವದ ಪೀಠ ಶೀಘ್ರ ಇತ್ಯರ್ಥದ ಭರವಸೆ ನೀಡಿತ್ತು.
ಇದರಿಂದ ಉತ್ತೇಜನಗೊಂಡ ಹೋರಾಟಗಾರರು ಮತ್ತೆ ಮಹಾದಾಯಿ ಹೋರಾಟಕ್ಕೆ ಕಿಚ್ಚು ಹಚ್ಚುವ ನಿಟ್ಟಿನಲ್ಲಿ ಕಳೆದ ವಾರ ಧಾರವಾಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಕಚೇರಿಗಳಿಗೆ ಬೀಗ ಜಡಿದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ್ದರು. ಅದರ ಬೆನ್ನಲ್ಲೆ ಇಂದು ರೈತ ಹೋರಾಟ ಸಮಿತಿ ಕರೆ ನೀಡಿದ್ದ ನರಗುಂದ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಇಂದು ಬೆಳಿಗ್ಗೆಯೇ ನರಗುಂದ ಪಟ್ಟಣದಲ್ಲಿ ಜಮಾವಣೆಗೊಂಡ ಉತ್ತರ ಕರ್ನಾಟಕದ ರಾಮದುರ್ಗ, ಸವದತ್ತಿ, ಬೆಳಗಾವಿ, ಗದಗ, ನರಗುಂದ, ನವಲಗುಂದ, ಹುಬ್ಬಳ್ಳಿ ಸೇರಿದಂತೆ 9 ತಾಲೂಕಿನ ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಕಲ್ಲು ಮುಳ್ಳುಗಳನ್ನಿಟ್ಟು ಮೊದಲು ಸಂಚಾರ ಸ್ಥಗಿತಗೊಳಿಸಿದರು. ಇದರಿಂದ ಸರಕಾರಿ ಸೇರಿದಂತೆ ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಂಡು ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡು ಪ್ರಯಾಣಿಕರು ತೀವ್ರ ಪರದಾಡಬೇಕಾಯಿತು.
ಪಟ್ಟಣ ಪ್ರವೇಶಿಸುವ ಒಳ ಮಾರ್ಗಗಳನ್ನು ಪ್ರತಿಭಟನಾ ನಿರತರು ಬಂದ್ ಗೊಳಿಸಿದ ಹಿನ್ನೆಲೆ ನಿತ್ಯ ಸಂಚರಿಸುವ ಟಂಟಂ,ಮ್ಯಾಕ್ಸಿಕ್ಯಾಬ್ ಇಲ್ಲದೇ ಸಾರ್ವಜನಿಕರಿಗೆ ತೀವ್ರ ತೊಂದರೆಯಾಯಿತು.
ಅಲ್ಲಲ್ಲಿ ಸಂಚರಿಸುವ ಬೈಕ್‌ಗಳನ್ನೂ ಕೂಡ ಪ್ರತಿಭಟನಾ ನಿರತರು ತಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ಇಡೀ ಪಟ್ಟಣಕ್ಕೆ ಪ್ರವೇಶ ಮಾರ್ಗವಿಲ್ಲದ ಪರಿಸ್ಥಿತಿ ಉಂಟಾಯಿತು.
ಪ್ರತಿಭಟನಾ ನಿರತರು ಪಟ್ಟಣದ ಮುನ್ಸಿಪಲ್ ಕಾರ್ಪೋರೇಶನ್‌ನಿಂದ ಮೆರವಣಿಗೆ ಹೊರಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅಂಗಡಿ ಮುಗ್ಗಟ್ಟು, ಸರ್ಕಾರಿ ಕಚೇರಿ, ಬ್ಯಾಂಕ್‌ಗಳನ್ನು ಬಂದ್ ಗೊಳಿಸುತ್ತು ಹುತಾತ್ಮ ರೈತನ ವೀರಗಲ್ಲಿನ ಬಳಿ ಸ್ಥಾಪಿಸಲಾಗಿರುವ ವೇದಿಕೆಗೆ ಆಗಮಿಸಿದರು. ಈ ಹಂತದಲ್ಲಿ ಹೋರಾಟಗಾರರು, ಪೊಲೀಸರನ್ನು ಹೊರತುಪಡಿಸಿದರೆ ಜನಸಾಮಾನ್ಯರಿಲ್ಲದೆ ಪಟ್ಟಣ ಅಕ್ಷರಶಃ ಬಿಕೋ ಎನ್ನುತ್ತಿತ್ತು.
ಸಂಜೆ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸಲಾಗುವುದೆಂದು ಹೋರಾಟದ ನೇತೃತ್ವ ವಹಿಸಿರುವ ವೀರೇಶ ಸೊಬರದಮಠ ಈ ಸಂದರ್ಭದಲ್ಲಿ ತಿಳಿಸಿ ಮುಂದೆ ಉಗ್ರ ಸ್ವರೂಪದ ಹೋರಾಟ ನಡೆಸುವ ಮುನ್ನೆಚ್ಚರಿಕೆ ನೀಡಿದರು.
300ನೇ ದಿನದಲ್ಲಿ ಮತ್ತೆ ಕಾವು ಪಡೆದಿರುವ ಮಹಾದಾಯಿ ಹೋರಾಟ ಮುಂದಿನ ದಿನಗಳಲ್ಲಿ ಮೊದಲಿಂತೆ ಭುಗಿಲೇಳುವ ಲಕ್ಷಣಗಳು ಗೋಚರವಾಗುತ್ತಿವೆ.
ಶಂಕರ ಅಂಬಲಿ, ವೀರಣ್ಣ ಹೂಗಾರ, ಪರಶುರಾಮ ಜಂಬಗಿ, ಶ್ರೀಶೈಲ ಮೇಟಿ, ಪ್ರಕಾಶ ಜೋಗಣ್ಣವರ, ರುದ್ರಯ್ಯ ಕುಶವರ್ತಿಮಠ, ಸೋಮಲಿಂಗಪ್ಪ ಆಯಟ್ಟಿ, ವೀರಣ್ಣ ಗಡಗಿ, ಅರ್ಜುನ ಮಾನೆ, ಶಿವಪ್ಪ ಕುರಹಟ್ಟಿ, ಸೇರಿದಂತೆ ನೂರಾರು ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Write A Comment