ಎನ್. ನವೀನ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಿಂದಾಗಿ ತರಕಾರಿಗಳ ಉತ್ಪಾದನೆ ಕುಂಠಿತಗೊಂಡಿದ್ದು, ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.
ಬೀನ್ಸ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವಾರ ಕೆ.ಜಿ.ಗೆ ₹ 60 ಇದ್ದ ಬೀನ್ಸ್ ಬೆಲೆ ಈಗ ₹ 150–175 ಏರಿಕೆಯಾಗಿದೆ. ಬೆಂಡೆಕಾಯಿ ₹ 20ರಿಂದ ₹70ಗೆ, ಬಿಳಿ ಬದನೆ ₹12ರಿಂದ ₹40ಗೆ, ಗೋರಿಕಾಯಿ ₹ 20ರಿಂದ ₹40ಗೆ ಏರಿಕೆಯಾಗಿದೆ. ಆದರೆ, ಈರುಳ್ಳಿ, ಬೆಳ್ಳುಳ್ಳಿ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈರುಳ್ಳಿ ಕೆ.ಜಿ.ಗೆ ₹ 15ರಿಂದ 20 ಇದೆ. ಬೆಳ್ಳುಳ್ಳಿ ಕೆ.ಜಿ.ಗೆ ₹ 80 ಇದೆ.
‘ತರಕಾರಿ ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ರೈತರು ತರಕಾರಿಗಳನ್ನು ಬೆಳೆಯುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ಕೆ.ಆರ್.ಮಾರುಕಟ್ಟೆಯ ವ್ಯಾಪಾರಿ ರಶೀದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆ.ಆರ್.ಮಾರುಕಟ್ಟೆಗೆ ಪ್ರತಿದಿನ 400ರಿಂದ 500 ಬೀನ್ಸ್ ಮೂಟೆಗಳು ಬರುತ್ತಿದ್ದವು. ಈಗ 50 ಮೂಟೆಗಳು ಬರುವುದೇ ಹೆಚ್ಚು. ಅಲ್ಲದೆ, ಈಗ ಮದುವೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೇರಳದಲ್ಲಿ ತರಕಾರಿಗಳಿಗೆ ವಿಪರೀತ ಬೇಡಿಕೆ ಇದೆ. ಇಲ್ಲಿನ ತರಕಾರಿಗಳನ್ನು ಕೇರಳಕ್ಕೆ ಸರಬರಾಜು ಮಾಡಲಾಗುತ್ತಿದೆ. ಇದೂ ಬೆಲೆ ಏರಿಕೆಗೆ ಕಾರಣ’ ಎಂದರು.
‘ಅಡುಗೆ ಮಾಡಲು ತರಕಾರಿಗಳು ಬೇಕೇಬೇಕು. ಬೆಲೆ ಏರಿಕೆ ಆದರೂ ತೆಗೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಬೀನ್ಸ್ ಬೆಲೆ ಕೇಳಿ ದಂಗಾದೆ’ ಎಂದು ಸುಂಕದಕಟ್ಟೆಯ ನಿವಾಸಿ ಲತಾ ಅವರು ಹೇಳಿದರು.