ಕರ್ನಾಟಕ

ಸುಪಾರಿ ಕೊಟ್ಟು ಗಂಡನ ಕೊಲೆ!: ಆಸ್ತಿಗಾಗಿ ಪ್ರಿಯಕರನ ಜತೆ ಸೇರಿ ಕೃತ್ಯ, ಐವರ ಬಂಧನ

Pinterest LinkedIn Tumblr

killಬೆಂಗಳೂರು: ಚಾಮರಾಜಪೇಟೆ ಸಮೀಪದ ಪಾರ್ವತಿಪುರದ ಫೈನಾನ್ಶಿ ಯರ್ ವಾಸು (43) ಅವರ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ.
ಮೂರು ವರ್ಷಗಳಿಂದ ‘ಸಹಜ ಸಾವು’ ಎಂದೇ ಭಾವಿಸಿದ್ದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆಸ್ತಿ ಆಸೆಗೆ ಪತ್ನಿಯೇ ಸುಪಾರಿ ಕೊಟ್ಟು ಅವರನ್ನು ಕೊಲ್ಲಿಸಿದ್ದಳು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಈ ಸಂಬಂಧ ವಾಸು ಅವರ ಎರಡನೇ ಪತ್ನಿ ವೀಣಾ (29), ಆಕೆಯ ಪ್ರಿಯಕರ ರಾಘವೇಂದ್ರ (24), ಶೇಖರ್ (34), ಗಣೇಶ್ (30) ಹಾಗೂ ಸಂಜಯ್ (27) ಎಂಬುವರನ್ನು ಸೆಂಟ್ರಲ್ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ: ‘ಫೈನಾನ್ಸ್‌ ವ್ಯವಹಾರ ಮಾಡುತ್ತಿದ್ದ ವಾಸು, ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟ ನಂತರ 2001ರಲ್ಲಿ ವೀಣಾಳನ್ನು ಎರಡನೇ ಮದುವೆ ಆದರು. ಆಗ ಆಕೆಗೆ ಕೇವಲ 14 ವರ್ಷ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
‘ಆರಂಭದಲ್ಲಿ ಅನ್ಯೋನ್ಯವಾಗಿಯೇ ಇದ್ದ ದಂಪತಿ ನಡುವೆ, ದಿನ ಕಳೆದಂತೆ ಹಣಕಾಸಿನ ವಿಚಾರವಾಗಿ ಜಗಳ ಆರಂಭವಾಯಿತು. ಈ ಮಧ್ಯೆ ವೀಣಾಳಿಗೆ ಕೆಂಗೇರಿ ಉಪನಗರದ ರಾಘವೇಂದ್ರನ ಪರಿಚಯವಾಯಿತು. ಕ್ರಮೇಣ ಅವರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು.’
‘ಈ ಸಂಗತಿ ತಿಳಿದ ವಾಸು, ಪತ್ನಿಯಿಂದ ದೂರ ಇರುವಂತೆ ರಾಘವೇಂದ್ರನಿಗೆ ತಾಕೀತು ಮಾಡಿದ್ದರು. ಪತ್ನಿಗೂ ಬಡಿದು ಬುದ್ಧಿ ಹೇಳಿದ್ದರು. ಅಲ್ಲದೆ, ತನ್ನ ಎಲ್ಲ ಆಸ್ತಿಯನ್ನು ಮೊದಲ ಪತ್ನಿಯ ಮಗ ದಿವಾಕರ್‌ಗೇ ನೀಡುವುದಾಗಿ ಹೇಳಿದ್ದರು.’
ಕೆರಳಿದ ವೀಣಾ: ‘ಆಸ್ತಿ ಕೊಡುವುದಿಲ್ಲ ಎಂದು ಹೇಳಿದ್ದರಿಂದ ಕೆರಳಿದ ವೀಣಾ, ಪತಿಯನ್ನು ಕೊಲೆ ಮಾಡುವಂತೆ ಪ್ರಿಯಕರನಿಗೆ ₹ 5 ಲಕ್ಷ ಸುಪಾರಿ ಕೊಟ್ಟಿದ್ದಳು. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ವಾಸು ಅವರನ್ನು ಮುಗಿಸಿದರೆ, ದಾರಿ ಸುಲಭವಾಗುತ್ತದೆ ಎಂದು ರಾಘವೇಂದ್ರ ಸಹ ಕೃತ್ಯಕ್ಕೆ ಒಪ್ಪಿಕೊಂಡಿದ್ದ.’
‘2013ರ ಏಪ್ರಿಲ್‌ 9ರಂದು ತನ್ನ ಇಬ್ಬರು ಮಕ್ಕಳನ್ನು ತಾಯಿ ಮನೆಗೆ ಕಳುಹಿಸಿದ್ದ ವೀಣಾ, ಪತಿಗೆ ನಿದ್ರೆ ಮಾತ್ರೆ ಬೆರೆಸಿದ ಊಟ ಬಡಿಸಿದ್ದಳು. ಊಟ ಮಾಡಿದ ಬಳಿಕ ವಾಸು ನಿದ್ರೆಗೆ ಜಾರಿದ್ದರು. ಕೂಡಲೇ ಆಕೆ ರಾಘವೇಂದ್ರನಿಗೆ ಕರೆ ಮಾಡಿದ್ದಳು.’
‘ಸ್ವಲ್ಪ ಸಮಯದಲ್ಲೇ ಮನೆಗೆ ಬಂದಿದ್ದ ರಾಘವೇಂದ್ರ, ಶೇಖರ್, ಸಂಜಯ್ ಹಾಗೂ ಗಣೇಶ್, ದಿಂಬಿನಿಂದ ಉಸಿರುಗಟ್ಟಿಸಿ ವಾಸು ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು. ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ವೀಣಾ, ಬೆಳಿಗ್ಗೆ ಎದ್ದು ಪತಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ನಾಟಕವಾಡಿದ್ದಳು.’
‘ಆಗ, ತಂದೆಯ ಸಾವಿನ ಹಿಂದೆ ಮಲತಾಯಿ ಕೈವಾಡವಿರುವ ಬಗ್ಗೆ ದಿವಾಕರ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಕೂಡ ವಾಸು ಕೊಲೆಯಾಗಿರುವ ಸಾಧ್ಯತೆ ಕಡಿಮೆ ಎಂದು ವರದಿ ಕೊಟ್ಟಿದ್ದರು. ಹೀಗಾಗಿ ಸಹಜ ಸಾವು ಎಂದು ಪ್ರಕರಣ ಕೈಬಿಡಲಾಗಿತ್ತು.’
ಕುಡಿದು ಬಾಯ್ಬಿಟ್ಟರು: ‘ಇತ್ತೀಚೆಗೆ ರಾಘವೇಂದ್ರನಿಂದಲೂ ದೂರ ಸರಿದ ವೀಣಾ, ಮತ್ತೊಬ್ಬ ಆರೋಪಿ ಶೇಖರ್‌ ಜತೆ ಸುತ್ತಾಡಲು ಆರಂಭಿಸಿದ್ದಳು.
ಇದರಿಂದ ಕುಪಿತಗೊಂಡ ರಾಘವೇಂದ್ರ, ಇದೇ ಮೇ 5ರಂದು ಶೇಖರ್‌ನನ್ನು ಕೆಂಗೇರಿ ಉಪನಗರ ಸಮೀಪದ ಬಾರ್‌ಗೆ ಕರೆಸಿಕೊಂಡಿದ್ದ.’
‘ಅಲ್ಲಿ ಪಾನಮತ್ತರಾಗಿ ಹೊರ ಬಂದ ಇಬ್ಬರೂ, ವೀಣಾಳ ವಿಷಯಕ್ಕೆ ಕಿತ್ತಾಡಿಕೊಂಡಿದ್ದಾರೆ. ಆಗ ರಾಘವೇಂದ್ರ, ಆಕೆಗಾಗಿಯೇ ತಾನು ವಾಸುವನ್ನು ಕೊಂದಿದ್ದಾಗಿ ಹೇಳಿದ್ದಾನೆ. ಕುಡುಕರ ಈ ಸಂಭಾಷಣೆ ಕೇಳಿಸಿಕೊಂಡ ಗಸ್ತು ಪೊಲೀಸರು, ಇಬ್ಬರನ್ನೂ ಠಾಣೆಗೆ ಎಳೆದೊಯ್ದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
₹ 2.5 ಲಕ್ಷ ಕೊಟ್ಟಿದ್ದಳು
‘ಕೊಲೆ ಮಾಡಿದ ದಿನವೇ ಸಹಚರರಿಗೆ ₹ 50 ಸಾವಿರ ಕೊಟ್ಟಿದ್ದ ವೀಣಾ, ನಂತರ ಹಂತ ಹಂತವಾಗಿ ₹ 2 ಲಕ್ಷ ಕೊಟ್ಟಿದ್ದಳು. ಸುಪಾರಿ ಮಾತುಕತೆಯಂತೆ ಇನ್ನುಳಿದ ₹ 2.5 ಲಕ್ಷ ನೀಡುವಂತೆ ಆರೋಪಿಗಳು ನಿತ್ಯ ಗಲಾಟೆ ಮಾಡುತ್ತಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
* ರಾಘವೇಂದ್ರ ಹಾಗೂ ಆತನ ಸಹಚರರು ಪ್ಲಂಬರ್ ಆಗಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಆರು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ
-ಬಿ.ಎಸ್.ಲೋಕೇಶ್ ಕುಮಾರ್
ಡಿಸಿಪಿ, ದಕ್ಷಿಣ ವಿಭಾಗ
ಮುಖ್ಯಾಂಶಗಳು
* 3 ವರ್ಷದ ಹಿಂದಿನ ಪ್ರಕರಣ
* ಅದು ಸಹಜ ಸಾವಲ್ಲ, ಕೊಲೆ
* ಸಾವಿನ ರಹಸ್ಯ ಬಯಲು

Write A Comment