ಕರ್ನಾಟಕ

‘ತಿಥಿ’ ನೋಡಲೇಬೇಕಾದ್ದಕ್ಕೆ ಹತ್ತೇ ಹತ್ತು ಕಾರಣಗಳು ಇಲ್ಲಿವೆ…

Pinterest LinkedIn Tumblr

thithi

ಬೆಂಗಳೂರು: ಯುವ ಕಥೆಗಾರ ಈರೇಗೌಡ ಕಥೆ ರಚಿಸಿ ಅದನ್ನು ನಿರ್ದೇಶಿಸಿರುವ ಮತ್ತೊಬ್ಬ ಯುವಕ ರಾಮ್ ರೆಡ್ಡಿ ಅವರ ‘ತಿಥಿ’ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನೆಮಾವನ್ನು ನೀವು ತಪ್ಪಿಸಿಕೊಳ್ಳಬಾರದೇಕೆ ಎಂಬುದಕ್ಕೆ ಇಲ್ಲಿವೆ ಹತ್ತು ಅಂಶಗಳು!

೧. ‘ಗಾಡ್ ಫಾದರ್’ ಸಿನೆಮಾ ಬಲ್ಲದ ಸಿನಿರಸಿಕರಾರು? ಈ ಸಿನೆಮಾದ ಮತ್ತು ಜಗತ್ತಿನ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಅಮೇರಿಕಾದ ಫ್ರಾನ್ಸಿಸ್ ಕೊಪೋಲಾ ‘ತಿಥಿ’ ಬಗ್ಗೆ ಹೇಳಿದ ಮಾತುಗಳಿವು “ಮರೆಯಲಾಗದ ಪಾತ್ರಗಳೊಂದಿಗೆ ಭಾರತದ ಹಳ್ಳಿಯೊಂದರ ಆನಂದಮಯ ಜೀವನದ ನೋಟ ‘ತಿಥಿ'”.

೨. ಪ್ರಖ್ಯಾತ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾದ ಸ್ವಿಟ್ಸರ್ ಲ್ಯಾಂಡಿನ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಟಿತ ಎರಡು ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ‘ತಿಥಿ’ಯದ್ದು. ಈ ಚಲನಚಿತ್ರೋತ್ಸವದಲ್ಲಿ ಈ ಹಿಂದೆ ಕನ್ನಡ ಚಲನಚಿತ್ರವೊಂದು ಪ್ರಶಸ್ತಿ ಪಡೆದಿದ್ದು ಸುಮಾರು ೪೦ ವರ್ಷಗಳ ಹಿಂದೆ. ಯು ಆರ್ ಅನಂತಮೂರ್ತಿ ಕಾದಂಬರಿ ಆಧಾರಿತ ಅದೇ ಹೆಸರಿನ ಪಟ್ಟಾಭಿ ರಾಮ್ ರೆಡ್ಡಿ ನಿರ್ದೇಶನದ ‘ಸಂಸ್ಕಾರ’ ಇಲ್ಲಿ ಪ್ರಶಸ್ತಿ ಗೆದ್ದಿತ್ತು.

೩. ಭಾಗವಹಿಸಿದ ಸುಮಾರು ೧೦ ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆ.

೪. ೬೩ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ತಿಥಿ’ಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ.

೫. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಾಗ, ನಿಗದಿಯಾಗಿದ್ದ ಎರಡು ಪ್ರದರ್ಶನಗಳಿಗೆ ಅವಧಿಗೆ ಮುಂಚೆಯೇ ಉದ್ದದ ಸಾಲುಗಳಲ್ಲಿ ಕಾಯುತ್ತಿದ್ದ ಪ್ರೇಕ್ಷಕರು ಮತ್ತು ತುಂಬಿದ ಪ್ರದರ್ಶನ – ನೋಡಲು ಸಿಗದಿದ್ದಕ್ಕೆ ನೂರಾರು ಪ್ರೇಕ್ಷಕರಿಗೆ ನಿರಾಸೆ.

೬. ಹಿರೋಯಿಸಂ- ಅನಗತ್ಯ ಹಾಡುಗಳು/ಸಂಗೀತ – ಅತಿರೇಕದ ನಟನೆ ಇವುಗಳಿಂದ ಪ್ರೇಕ್ಷಕನಿಗೆ ಮುಕ್ತಿ ನೀಡುವ ಸಿನೆಮಾ ‘ತಿಥಿ’

೭. ಮಂಡ್ಯದ ನದೆಕೊಪ್ಪಲು ಗ್ರಾಮದ ಗ್ರಾಮಸ್ಥರನ್ನೇ ನಟರನ್ನಾಗಿಸಿ, ಅದೇ ಪ್ರದೇಶದಲ್ಲಿ ಮೂರು ವರ್ಷಕ್ಕಿಂತಲೂ ಹೆಚ್ಚು ಸಮಯ ಶ್ರಮವಹಿಸಿ ನೈಜ ರೀತಿಯ ಅತ್ಯುತ್ತಮ ದೃಶ್ಯ ಕಾವ್ಯ ಕಟ್ಟಿಕೊಟ್ಟಿರುವ ನಿರ್ದೇಶಕ-ಕಥೆಗಾರ ಜೋಡಿ.

೮. ಹಲವು ಪದರುಗಳಲ್ಲಿ ತೆರೆದುಕೊಳ್ಳುವ ಸಿನೆಮಾ. ಮನರಂಜನೆಗೂ ಸೈ, ನೈಜ್ಯ ಸಿನೆಮಾ ಅನುಭವಕ್ಕೂ ಮತ್ತೆ ಕೆಲವು ಆಧ್ಯಾತ್ಮಿಕ-ತಾತ್ವಿಕ ಪ್ರಶ್ನೆಗಳನ್ನು ಚರ್ಚಿಸುವುದಕ್ಕೂ. ಒಂದಕ್ಕಿಂತಲೂ ಹೆಚ್ಚು ಬಾರಿ ನೋಡಿದಾಗ ವಿಶಿಷ್ಟ ಒಳನೋಟಗಳನ್ನು ನೀಡಬಲ್ಲ ಸಿನೆಮಾ.

೯. ಭಾರತದ ಚಿತ್ರರಂಗದ ದಿಗ್ಗಜರಿಂದಲು ಪ್ರಶಂಸೆಯ ಸುರಿಮಳೆ. “ನಾನು ಈ ಅದ್ಭುತ ಸಿನೆಮಾವನ್ನು ಮೂರೂ ಬಾರಿ ನೋಡಿದ್ದೇನೆ, ಮತ್ತೆ ನೋಡಬಲ್ಲೆ ನೀವು ಕೂಡ ತಪ್ಪಿಸಿಕೊಳ್ಳಲೇಬೇಡಿ” ಎಂದು ಟ್ವೀಟ್ ಖ್ಯಾತ ಬಾಲಿವುಡ್ ನಿರ್ದೇಶಕ ‘ಗ್ಯಾಂಗ್ಸ್ ಆಫ್ ವಸೀಪುರ್’ ಖ್ಯಾತಿಯ ಅನುರಾಗ್ ಕಶ್ಯಪ್.

೧೦. ಸಿನೆಮಾ ಅಷ್ಟೇ ಅಲ್ಲದೆ ಕವನ-ಕಾದಂಬರಿಗಳನ್ನು ಬರೆದಿರುವ ಯುವಕ ರಾಮ್ ರೆಡ್ಡಿ, ಮತ್ತು ಕಥೆಗಾರ ಈರೇಗೌಡ ಸ್ವತಂತ್ರ ನಿರ್ದೇಶಕರಿಗೆ ಮಾದರಿಯಾಗಬಲ್ಲರು. ಕನ್ನಡ ಚಿತ್ರೋದ್ಯಮಕ್ಕೆ, ಯುವ ನಿರ್ದೇಶಕರಿಗೆ ಸಮಾನಾಂತರ ಚಲನಚಿತ್ರಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಸ್ಫೂರ್ತಿಯಾಗಬಲ್ಲರು!

Write A Comment