ಕರ್ನಾಟಕ

ತಮ್ಮ ಕ್ಷೇತ್ರವನ್ನು ಬದಲಾಯಿಸಲಿದ್ದಾರೆಯೇ ಯಡಿಯೂರಪ್ಪ..? ಭದ್ರಾವತಿಯತ್ತ ಚಿತ್ತ

Pinterest LinkedIn Tumblr

yaddi

ಬೆಂಗಳೂರು, ಮೇ 7- ಸಾಕಷ್ಟು ಸರ್ಕಸ್ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ಸುತ್ತುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕ್ಷೇತ್ರವನ್ನು ಬದಲಾಯಿಸಲಿದ್ದಾರೆಯೇ..? ಯಡಿಯೂರಪ್ಪ ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಾದರೂ ರಾಜಕೀಯ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರವನ್ನು. ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿ ಮೂರು ಬಾರಿ ಮುಖ್ಯಮಂತ್ರಿಯೂ ಆಗಿರುವ ಬಿಎಸ್‌ವೈ ಇದೀಗ ತಮ್ಮ ಸ್ವ ಕ್ಷೇತ್ರ ಶಿಕಾರಿಪುರವನ್ನು ಬಿಟ್ಟು ಶಿವಮೊಗ್ಗ ಜಿಲ್ಲೆಯ ಉಕ್ಕಿನ ನಗರಿ ಎಂದೇ ಖ್ಯಾತಿ ಗಳಿಸಿರುವ ಭದ್ರಾವತಿಯತ್ತ ಚಿತ್ತ ನೆಟ್ಟಿದ್ದಾರೆ.

ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ವದಂತಿಯಂತೆ ಯಡಿಯೂರಪ್ಪ ಶಿಕಾರಿಪುರವನ್ನು ತಮ್ಮ ಪುತ್ರ ಬಿ.ವೈ.ರಾಘವೇಂದ್ರನಿಗಾಗಿ ತ್ಯಾಗ ಮಾಡಿ ಭದ್ರಾವತಿಯಿಂದ ಕಣಕ್ಕಿಳಿಯಲಿದ್ದಾರೆಂಬ ಸುದ್ದಿ ಬಲವಾಗಿಯೇ ಹಬ್ಬಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ತೀರ್ಮಾನಿಸಲಿದೆ. ಸದ್ಯಕ್ಕಂತೂ ಭದ್ರಾವತಿಯಿಂದ ಕಣಕ್ಕಿಳಿಯಲು ಯಡಿಯೂರಪ್ಪ ಈಗಾಗಲೇ ಭರ್ಜರಿ ಶಿಕಾರಿ ಆರಂಭಿಸಿದ್ದಾರೆ.

ಭದ್ರಾವತಿಯಿಂದ ಕಣಕ್ಕಿಳಿಯುವಂತೆ ಬಿಜೆಪಿ ಬೆಂಬಲಿಗರು ಬಿಎಸ್‌ವೈಗೆ ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಪದೇ ಪದೇ ಶಿವಮೊಗ್ಗಕ್ಕೆ ಭೇಟಿ ನೀಡುವ ವೇಳೆ ಯಡಿಯೂರಪ್ಪ ಭದ್ರಾವತಿಗೊಮ್ಮೆ ಹೋಗಿ ಕಾರ್ಯಕರ್ತರಿಗೆ ಮುಖ ತೋರಿಸಿ ಬರುವ ಸಂಪ್ರದಾಯ ಪ್ರಾರಂಭಿಸಿದ್ದಾರೆ.

ಕಾರಣವೇನು..?

ಈಗಾಗಲೇ ಪಕ್ಷದ ವಲಯದಲ್ಲಿ 2018ರ ಚುನಾವಣೆ ವೇಳೆ ಬಿಜೆಪಿಯಿಂದ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದೆ. ಪಕ್ಷದಲ್ಲಿ ಯಾರಿಗೆ ಒಲವಿದೆಯೋ, ಇಲ್ಲವೋ ಮುಖ್ಯವಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಬಿಎಸ್‌ವೈಗೆ ಮಣೆ ಹಾಕುವುದು ಪಕ್ಷಕ್ಕೂ ಅನಿವಾರ್ಯವಾಗಿದೆ. ಸ್ವತಃ ಯಡಿಯೂರಪ್ಪನವರೇ ಪಕ್ಷ ಅಧಿಕಾರಕ್ಕೆ ಬಂದರೆ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಘೋಷಣೆ ಮಾಡಿದ್ದಾರೆ.

ಭದ್ರಾವತಿಯಲ್ಲಿ ಜಾತಿ ಲೆಕ್ಕಾಚಾರ ಹಾಕಿದರೆ ಕ್ಷೇತ್ರದಲ್ಲಿ ಸರಿಸುಮಾರು 40 ಸಾವಿರ ಲಿಂಗಾಯತ ಮತಗಳಿವೆ. ಉಳಿದಂತೆ ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ, ಕುರುಬ ಮತ್ತಿತರ ಹಿಂದುಳಿದ ವರ್ಗಗಳ ಮತಗಳು ಗಣನೀಯ ಪ್ರಮಾಣದಲ್ಲಿವೆ. ರಾಜ್ಯದಲ್ಲಿ ತಮ್ಮ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗುತ್ತಾರೆಂದರೆ ಸಹಜವಾಗಿ ವೀರಶೈವ ಮತಗಳು ಸಾರಾಸಗಟಾಗಿ ತಮಗೆ ದಕ್ಕಲಿವೆ ಎಂಬುದು ಬಿಎಸ್‌ವೈ ಲೆಕ್ಕಾಚಾರ. ಉಳಿದಂತೆ ಜಿಲ್ಲೆಯಲ್ಲಿ ಪಕ್ಷದ ಬಗ್ಗೆ ಏನೇ ಟೀಕೆ-ಟಿಪ್ಪಣಿಗಳಿದ್ದರೂ ಯಡಿಯೂರಪ್ಪ ಈಗಲೂ ಕೂಡ ಪ್ರಶ್ನಾತೀತ ಹಾಗೂ ಜಾತ್ಯತೀತ ನಾಯಕ.

ಒಂದು ಬಾರಿ ಭದ್ರಾವತಿಯಿಂದ ಕಣಕ್ಕಿಳಿದರೆ ಸಾರಾಸಗಟಾಗಿ ಅವರನ್ನು ಲಿಂಗಾಯತ ಸಮುದಾಯ ಸೇರಿದಂತೆ ಒಕ್ಕಲಿಗ, ಅಲ್ಪ ಸಂಖ್ಯಾತ, ಎಸ್‌ಸಿ-ಎಸ್‌ಟಿ ಸೇರಿದಂತೆ ಎಲ್ಲ ಸಮುದಾಯಗಳು ಬೆನ್ನಿಗೆ ನಿಲ್ಲುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗಲೂ 2014ರ ಲೋಕಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದ್ದರು. ಅಷ್ಟೇ ಏಕೆ, ಇಡೀ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಹೆಚ್ಚು ಮತಗಳನ್ನು ಪಡೆದಿದ್ದರು. ಸ್ವತಃ ಭದ್ರಾವತಿಯಲ್ಲಿ ಜೆಡಿಎಸ್ ಶಾಸಕರಿದ್ದರೂ ಕೂಡ ಬಿಎಸ್‌ವೈಗೆ 40 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಬಂದಿತ್ತು.

ಇದರ ಬಗ್ಗೆ ಲೆಕ್ಕಾಚಾರಗಳನ್ನು ಹಾಕಿಕೊಂಡಿರುವ ಬಿಎಸ್‌ವೈ ಭದ್ರಾವತಿಯತ್ತ ಚಿತ್ತ ಹರಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ಬಿಜೆಪಿ ಸಾಕಷ್ಟು ಸಂಘಟನೆಯಲ್ಲಿ ಶಕ್ತಿಶಾಲಿಯಾಗಿದ್ದರೂ ಉಕ್ಕಿನ ನಗರಿಯಲ್ಲಿ ಮಾತ್ರ ಕಮಲ ಅಷ್ಟಕ್ಕಷ್ಟೇ ಎನ್ನುವಂತಿದೆ. ಹೇಳಿ ಕೇಳಿ ಭದ್ರಾವತಿ ಅಪ್ಪಾಜಿಗೌಡ ಮತ್ತು ಬಿ.ಕೆ.ಸಂಗಮೇಶ್ ನಡುವಿನ ಕುರುಕ್ಷೇತ್ರಕ್ಕೆ ಹೇಳಿ ಮಾಡಿಸಿದ ಅಖಾಡ. 2013ರಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವಾಜಿರಾವ್ ಸಿಂಧ್ಯ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು.

ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಕಮಲ ಅರಳಿಸಬೇಕೆಂದು ಪಣ ತೊಟ್ಟಿರುವ ಯಡಿಯೂರಪ್ಪ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಖೈರುಗೊಳಿಸಿದ್ದಾರೆ. ಶಿವಮೊಗ್ಗ ನಗರದಿಂದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ತೀರ್ಥಹಳ್ಳಿಯಿಂದ ಅರಗ ಜ್ಞಾನೇಂದ್ರ, ಸಾಗರದಿಂದ ಗೋಪಾಲಕೃಷ್ಣ ಬೇಳೂರು, ಸೊರಬದಿಂದ ಹರತಾಳ ಹಾಲಪ್ಪ, ಶಿವಮೊಗ್ಗ ಗ್ರಾಮಾಂತರದಿಂದ ಮಾಜಿ ಸಚಿವ ಬಸವಣ್ಣೆಪ್ಪ ಇಲ್ಲವೆ ಜೆಡಿಎಸ್‌ಗೆ ಕೈ ಕೊಟ್ಟರೆ ಶಾರದಾಪೂರ್ಯ ನಾಯಕ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಪ್ರತಿಷ್ಠಿತ ಶಿಕಾರಿಪುರದಿಂದ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದರೆ, ಭದ್ರಾವತಿಯಿಂದ ಯಡಿಯೂರಪ್ಪ ಅಖಾಡಕ್ಕಿಳಿಯಲಿದ್ದಾರೆ. ಈಗಾಗಲೇ ವೇದಿಕೆ ಸಿದ್ಧಗೊಂಡಿದ್ದು, ಬಹಿರಂಗ ಘೋಷಣೆ ಮಾತ್ರ ಬಾಕಿ ಉಳಿದಿದೆ.

-ರವೀಂದ್ರ ವೈ.ಎಸ್.

Write A Comment