ಕರ್ನಾಟಕ

ನಟಿ ತಾರಾ ವಿರುದ್ದ ಕಿರುಕುಳದ ಆರೋಪ

Pinterest LinkedIn Tumblr

taara

ತುಮಕೂರು: ಮನೆ ಕೆಲಸಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕೆ ನಟಿ ತಾರಾ ಅವರು ತಮ್ಮ ಪ್ರಭಾವ ಬಳಸಿ ನನ್ನ ಅಣ್ಣನನ್ನು ಕೆಲಸದಿಂದ ತೆಗೆಸಿದ್ದಾರೆ ಎಂದು ಲತಾ ಎಂಬಾಕೆ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ನಟಿ ತಾರಾ ಅವರು ತಮ್ಮ ಮಗುವನ್ನು ನೋಡಿಕೊಳ್ಳಲು ನನ್ನನ್ನು ಕೆಲಸಕ್ಕೆ ತೆಗೆದುಕೊಂಡಿದ್ದರು ಎಂದು ಹೇಳಿದರು. ನಾನು ಗುಬ್ಬಿ ತಾಲ್ಲೂಕು ಚೇಳೂರು ಗ್ರಾಮದ ಮಹದೇಶ್ವರ ಬಡಾವಣೆ ನಿವಾಸಿ. ನನ್ನ ಅಣ್ಣ ಲೋಕೇಶ್, ತಾರಾ ಅವರು ಕೋರಿದ್ದರಿಂದ ನನ್ನನ್ನು ಅಲ್ಲಿಗೆ ಕೆಲಸಕ್ಕೆ ಸೇರಿಸಿದ್ದರು.

ಹೀಗೆ ಮೂರು ತಿಂಗಳ ಹಿಂದೆ ನ್ಯಾಯಾಲಯದಲ್ಲಿ ಕೇಸು ಇದ್ದುದ್ದರಿಂದ ನಾನು ತಾರಾ ಅವರಿಂದ ಅನುಮತಿ ಪಡೆದು ಊರಿಗೆ ಹಿಂತಿರುಗಿದ್ದೆ. ಆರೋಗ್ಯ ಹದಗೆಟ್ಟ ಕಾರಣ ನಾನು ಮತ್ತೆ ಕೆಲಸಕ್ಕೆ ಹೋಗಲಾಗಲಿಲ್ಲ ಎಂದು ತಿಳಿಸಿದರು. ತಾರಾ ಅವರ ಪಿಎ ನನ್ನ ಅಣ್ಣನಿಗೆ ಪದೇ ಪದೇ ಕರೆ ಮಾಡಿ ನನ್ನನ್ನು ಕೆಲಸಕ್ಕೆ ಕಳುಹಿಸುವಂತೆ ಒತ್ತಡ ಹೇರಿದ್ದರು. ಆದರೂ ನಾನು ಹೋಗಿರಲಿಲ್ಲ. ನಂತರ ನನಗೆ ದೂರವಾಣಿ ಕರೆ ಮಾಡಿ ನೀನು ಕೆಲಸಕ್ಕೆ ಬರದೇ ಇದ್ದರೆ ನಿನ್ನ ಅಣ್ಣನಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದರು.

ತಾರಾ ಅವರ ತಾಯಿ ಸುಮ್ಮಸುಮ್ಮನೆ ಕಿರುಕುಳ ನೀಡುತ್ತಿದ್ದರು. ಆದ್ದರಿಂದ ನನಗೆ ಅಲ್ಲಿ ಕೆಲಸಕ್ಕೆ ಹೋಗಲು ಇಷ್ಟವಿರಲಿಲ್ಲ ಎಂದು ಆಕೆ ಸ್ಪಷ್ಟಪಡಿಸಿದರು. ನಾನು ಕೆಲಸಕ್ಕೆ ಹೋಗದೆ ಇರುವುದರಿಂದ ತಾರಾ ಅವರು ತುಮಕೂರಿನ ದೀಕ್ಷಾ ಕಾಲೇಜಿನ ಆಡಳಿತ ಮಂಡಳಿಯ ಮೇಲೆ ಪ್ರಭಾವ ಬೀರಿ ಅಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನನ್ನ ಅಣ್ಣ ಲೋಕೇಶ್‌ನನ್ನು ಕೆಲಸದಿಂದ ತೆಗೆದು ಹಾಕಿಸಿದ್ದಾರೆ ಎಂದು ದೂರಿದರು. ನನ್ನ ಪತಿ ಮರಣ ಹೊಂದಿದ್ದು , ಅಣ್ಣನೇ ನನಗೆ ಆಧಾರ. ನನ್ನ ಆರೋಗ್ಯ ಸರಿ ಇಲ್ಲ. ನಮಗೆ ನ್ಯಾಯ ಕೊಡಿಸಿ, ಅಣ್ಣ ಲೋಕೇಶ್‌ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ನಮ್ಮನ್ನು ಬದಕಲು ಬಿಡಿ ಎಂದು ಲತಾ ಮನವಿ ಮಾಡಿದರು.

Write A Comment