ಕರ್ನಾಟಕ

ಆಸ್ತಿ ತೆರಿಗೆ ಗೊಂದಲ ನಿವಾರಣೆಗೆ ಮೇಯರ್ ಯತ್ನ

Pinterest LinkedIn Tumblr

Manjunath-Reddyಬೆಂಗಳೂರು, ಮೇ ೬- ನಗರದಲ್ಲಿ ಆಸ್ತಿ ತೆರಿಗೆ ಕುರಿತಂತೆ ಇರುವ ಗೊಂದಲವನ್ನು ಖುದ್ದು ಅರಿಯಲು ಮೇಯರ್ ಮಂಜುನಾಥ ರೆಡ್ಡಿ ಅವರು ಇಂದು ಮಧ್ಯಾಹ್ನ ನಗರದ ವಿವಿಧ ಬ್ಯಾಂಕುಗಳು ಹಾಗೂ ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಎಂ.ಜಿ. ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ಗೆ ಭೇಟಿ ನೀಡಿದ ಅವರು ಆನ್ ಲೈನ್ ಗೊಂದಲದ ಬಗ್ಗೆ ಅಲ್ಲಿನ ಪ್ರಧಾನ ವ್ಯವಸ್ಥಾಪಕರೊಂದಿಗೆ ಸಮಾಲೋಚನೆ ನಡೆಸಿದರು.
ತೆರಿಗೆ ಪಾವತಿ ಮಾಡಲು ಬ್ಯಾಂಕುಗಳಿಗೆ ಬಂದ ತೆರಿಗೆದಾರರೊಂದಿಗೆ ಚರ್ಚೆ ನಡೆಸಿದ ಮೇಯರ್ ಅವರು, ಕೆಲ ತಾಂತ್ರಿಕ ಸಮಸ್ಯೆಗಳು ಎದುರಾದ್ದರಿಂದ ಆನ್ ಲೈನ್ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿತ್ತು, ಈಗ ಸರಿಪಡಿಸಲಾಗಿದೆ ಎಂದು ನಾಗರಿಕರಲ್ಲಿ ವಿಶ್ವಾಸ ತುಂಬಿದರು.
ನಾಗರಿಕ ಸೇವಾ ಕೇಂದ್ರಗಳಿಗೂ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳು ತೆರಿಗೆ ಪಾವತಿಸಿಕೊಳ್ಳುವಾಗ ತೆರಿಗೆದಾರರೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆಯೂ ಅಲ್ಲಿನ ನಾಗರಿಕರಿಂದ ಮಾಹಿತಿಯನ್ನು ಕಲೆ ಹಾಕಿದರು.
ಶಾಂತಲ ನಗರ ವಾರ್ಡ್‌ನಲ್ಲಿರುವ ವಾರ್ಡ್ ಕಚೇರಿಯಲ್ಲಿ ಆಸ್ತಿ ತೆರಿಗೆ ಕಟ್ಟುವಾಗ ಎದುರಾಗುವ ತೊಂದರೆಗಳ ಬಗ್ಗೆ ನಾಗರಿಕರು ಮೇಯರ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಮೇಯರ್ ಅವರು ಅಲ್ಲಿನ ಕಂದಾಯ ಅಧಿಕಾರಿಗಳ ಸಹಾಯದೊಂದಿಗೆ ನಾಗರಿಕರಿಗೆ ಆಸ್ತಿ ತೆರಿಗೆ ಅರ್ಜಿ ತುಂಬುವಲ್ಲಿ ನೆರವಾದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ, ಮತ್ತಿತರರು ಉಪಸ್ಥಿತರಿದ್ದರು.

Write A Comment