ಕರ್ನಾಟಕ

ಲವ್ ಮ್ಯಾರೇಜ್ ಮಾಡಿಸಿದ್ದಕ್ಕೆ ಭೀಕರವಾಗಿ ಕೊಲೆಗೈದ್ರು…!

Pinterest LinkedIn Tumblr

venkatesh

ಬೆಂಗಳೂರು: ಆತ ಆ ಏರಿಯಾಗೆಲ್ಲಾ ಚಿರ ಪರಿಚಿತ. ಹೇಳಬೇಕು ಅಂದ್ರೆ ಆ ಏರಿಯಾಗೆ ಆತನೇ ಲೀಡರ್ ಇದ್ದ ಹಾಗೆ. ಸಮಾಜ ಸೇವೆಗಳಲ್ಲಿ ಆತನದ್ದು ಎತ್ತಿದ ಕೈ. ಹೀಗೆ ಆತ ಒಂದು ಲವ್ ಮ್ಯಾರೇಜ್ ಮಾಡಿಸಿದ್ದ. ಆದ್ರೆ ಅದೇ ಲವ್ ಮ್ಯಾರೇಜ್ ಇವತ್ತು ಆತನನ್ನ ಮಸಣ ಸೇರುವತೆ ಮಾಡಿದೆ.

ನಿನ್ನೆ ರಾತ್ರಿ 10.30ರ ಸಮಯದಲ್ಲಿ ಪುಲಿಕೇಶಿನಗರದ ಲಾಜರ್ ಲೇಔಟ್‍ನ ನಿವಾಸಿ ವೆಂಕೆಟೇಶ್, ದೇವಸ್ಥಾನದಿಂದ ಮನೆ ಕಡೆ ನಡೆದು ಹೋಗುತ್ತಿದ್ದರು. ಇದೇ ಸಮಯವನ್ನ ಕಾಯುತ್ತಿದ್ದ ಇಬ್ಬರು ಯುವಕರು ವೆಂಕಟೇಶ್ ಅವರನ್ನ ರಸ್ತೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶ್ ರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಸೇರಿಸೋದಕ್ಕೂ ಮುನ್ನವೇ ವೆಂಕಟೇಶ್ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಐವತ್ತು ವರ್ಷ ವಯಸ್ಸಿನ ವೆಂಕಟೇಶ್ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ವೆಂಕಟೇಶ್, ದರ್ಶನ್ ಎಂಬಾತನ ಅಕ್ಕ ಹೇಮಾವತಿಗೆ ಲವ್ ಮ್ಯಾರೇಜ್ ಮಾಡಿಸಿದ್ದ. ಹೀಗೆ ವಿವಾಹವಾಗಿದ್ದ ಆಕೆ ಆರು ತಿಂಗಳ ಹಿಂದೆ ಸಿಮೆಎಣ್ಣೇ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ವೈಶಮ್ಯದ ಹಿನ್ನಲೆ ನಿನ್ನೆ ದರ್ಶನ್ ತನ್ನ ಸಂಬಂಧಿ ನವೀನ್ ಜೊತೆ ಸೇರಿ ವೆಂಕಟೇಶ್ ನನ್ನ ಕೊಲೆ ಮಾಡಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸದ್ಯ ಈ ಬಗ್ಗೆ ಪುಲಿಕೇಶಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರೋ ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ. ಏನೇ ಆಗಲಿ ಒಂದು ಆತ್ಮಹತ್ಯೆ ಹಿಂದಿನ ವೈಶಮ್ಯದ ವಿಚಾರ ಮತ್ತೊಂದು ಸಾವಿನಲ್ಲಿ ಅಂತ್ಯವಾಗಿರೋದು ನಿಜಕ್ಕೂ ದುರಂತವೇ ಸರಿ.

Write A Comment