ಕರ್ನಾಟಕ

ಮುಂಗಾರು ಮೇ ಅಂತ್ಯಕ್ಕೆ ಆರಂಭವಾಗುವ ಸಾಧ್ಯತೆ..: ಸದ್ಯಕ್ಕೆ ಬಿಸಿಗಾಳಿ ತಪ್ಪಲ್ಲ

Pinterest LinkedIn Tumblr

rainಬೆಂಗಳೂರು,ಮೇ1- ತೀವ್ರ ಬರಗಾಲ ಹಾಗೂ ಬಿಸಿ ಗಾಳಿ ಹೆಚ್ಚಾಗಿದ್ದರೂ ಸಹ ಈ ಬಾರಿಯ ನೈರುತ್ಯ ಮುಂಗಾರು ಮೇ  ಅಂತ್ಯಕ್ಕೆ ಆರಂಭವಾಗುವ ಸಾಧ್ಯತೆಗಳಿವೆ. ಇದುವರೆಗೆ ನೀಡಿರುವ ಹವಾಮಾನ ತಜ್ಞರ ದೀರ್ಘಾವಧಿ ಮುನ್ಸೂಚನೆ ಪ್ರಕಾರ, ನೈರುತ್ಯ ಮುಂಗಾರು ಮೇ  ಅಂತ್ಯಕ್ಕೆ ಪ್ರಾರಂಭವಾಗುವ ಸಂಭವವಿದ್ದು , ರಾಜ್ಯದಲ್ಲಿ ಜೂನ್ ಮೊದಲ ವಾರದಲ್ಲೇ ವ್ಯಾಪಕ ಪ್ರಮಾಣದಲ್ಲಿ ಮಳೆ ಆರಂಭವಾಗಲಿದೆ. ಈ ಬಾರಿಯ ಮುಂಗಾರು ಮಳೆ ವಾಡಿಕೆಯಂತೆ ಮೇ ಅಂತ್ಯ ಇಲ್ಲವೆ ಜೂನ್  1ರಂದೇ  ಆರಂಭವಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ  ಈ ಸಂಜೆಗೆ ತಿಳಿಸಿದರು.

ಜೂನ್ ತಿಂಗಳಿನಲ್ಲಿ ಮುಂಗಾರು ವ್ಯಾಪಕವಾಗಿ ರಾಜ್ಯಾದ್ಯಂತ ಆವರಿಸಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ರಾಜ್ಯಕ್ಕೆ ಈ ಬಾರಿಯ ಮುಂಗಾರು ಉತ್ತಮವಾಗಿದ್ದರೂ ಸಹ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆಗಳಿವೆ. ಈ ಜಿಲ್ಲೆಗಳಲ್ಲಿ ಮೇನಲ್ಲಿ ಉತ್ತಮ ಮಳೆಯಾದರೂ ಜೂನ್ ಮತ್ತು ಜುಲೈನಲ್ಲಿ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಗಳಿವೆ. ಆದರೂ ಮೇ  ಅಂತ್ಯಕ್ಕೆ ಮತ್ತೊಂದು ಸುತ್ತಿನ ಮಳೆ ಕುರಿತ ದೀರ್ಘಾವಧಿ ಮುನ್ಸೂಚನಾ ವರದಿ ಬಿಡುಗಡೆಯಾಗಲಿದ್ದು , ಆಗ ಮುಂಗಾರು ಮಳೆ ಪ್ರಮಾಣ ಎಲ್ಲಿ ಹೆಚ್ಚು ಕಡಿಮೆಯಾಗಲಿದೆ ಎಂಬುದು ಖಚಿತವಾಗಿ ದೊರೆಯಲಿದೆ ಎಂದರು.

ಬೇಸಿಗೆ ಬರಗಾಲವಲ್ಲ: ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾದರೆ ಬರಗಾಲವೆಂದು ಘೋಷಣೆ ಮಾಡಲಾಗುತ್ತದೆ. ಆದರೆ ಮುಂಗಾರು ಪೂರ್ವ ಅಥವಾ ಬೇಸಿಗೆಯಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾದರೆ ಬರಗಾಲವೆಂದು ಪರಿಗಣಿಸುವುದಿಲ್ಲ ಎಂದು ಶ್ರೀನಿವಾಸ್ ರೆಡ್ಡಿ ಸ್ಪಷ್ಟಪಡಿಸಿದರು. ಆದರೆ  ಆಲಿಕಲ್ಲು ಮಳೆಬಿದ್ದು ಬೆಳೆ ಹಾನಿ  ಉಂಟಾದರೆ ಪರಿಹಾರ ಸಿಗಲಿದೆ.  ಜೊತೆಗೆ ಬಿಸಿಲಿನ ಬೇಗೆಗೆ ಮೃತಪಟ್ಟಿರುವುದು ದೃಢಪಟ್ಟರೆ ಪರಿಹಾರ ದೊರಕಲಿದೆ. ಈ  ಎರಡು ಕಾರಣಗಳನ್ನು ಹೊರತುಪಡಿಸಿ ಬೇರೆ ಕಾರಣಗಳಿಂದಾಗಿ ಪರಿಹಾರ ದೊರೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜನವರಿಯಿಂದ ಮೇ ಅಂತ್ಯದವರೆಗೆ ರಾಜ್ಯದಲ್ಲಿ ಶೇ.62ರಷ್ಟು ಮಳೆ ಕೊರತೆ ಉಂಟಾಗಿದೆ. ಬೇಸಿಗೆಯಲ್ಲಿ ಬೀಳುವುದೇ ಕಡಿಮೆ ಮಳೆ.  ಕಳೆದ ಐದು ತಿಂಗಳ ಅವಧಿಯಲ್ಲಿ ರಾಜ್ಯದ ಸರಾಸರಿ ವಾಡಿಕೆ ಮಳೆ ಪ್ರಮಾಣ 46 ಮಿ.ಮೀ ಮಾತ್ರ ಆದರೆ ಇದುವರೆಗೆ ಕೇವಲ 17 ಮಿ.ಮೀನಷ್ಟು ಮಳೆ ಬಿದ್ದಿದ್ದು ಶೇ.60ರಷ್ಟು ಕೊರತೆ ಉಂಟಾಗಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮೇ 2ನೇ ವಾರದ  ನಂತರ ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ಆದರೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳು ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಪೂರ್ವ ಮುಂಗಾರು ಮಳೆ ಕಡಿಮೆಯಾಗಿರುವುದು ಹಾಗೂ ಬರದ ತೀವ್ರತೆ ಹೆಚ್ಚಾಗಿರುವ ಕಾರಣದಿಂದ ಬಿಸಿಗಾಳಿ ಮೇ ತಿಂಗಳಿನಲ್ಲೂ ಮುಂದುವರೆಯಲಿದೆ. ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಗರಿಷ್ಠ ತಾಪಮಾನ ಏರಿಕೆಯಾದಂತೆ ಮೇನಲ್ಲೂ ಕೂಡ ಹೆಚ್ಚಳ ಆಗುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 3-4 ಡಿಗ್ರಿ ಸೆಲ್ಸಿಯಸ್‌ನಷ್ಟು ಸರಾಸರಿಗಿಂತ ಹೆಚ್ಚಾಗಿದ್ದು  ಮತ್ತಷ್ಟು ಏರಿಕೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು.

Write A Comment