ಕರ್ನಾಟಕ

ತೆರೆಯ ಮೇಲೆ ಬರಲಿರುವ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಚಿತ್ರ ಮೇ 1 ರಂದು ಮುಹೂರ್ತ; ಈ ಚಿತ್ರದ ಬಜೆಟ್ ಎಷ್ಟು ಗೊತ್ತೆ? ಮುಹೂರ್ತದ ವೇಳೆ ರೈ ನಿವಾಸದ ಮುಂದೆ ಎಷ್ಟು ಜನ ಸೇರಲಿದ್ದಾರೆ ಗೊತ್ತಾ.?

Pinterest LinkedIn Tumblr

rai

ಬೆಂಗಳೂರು: ರಾಮ್‍ಗೋಪಾಲ್‍ವರ್ಮಾ ಸಿನಿಮಾ ಮಾಡುತ್ತಾರೆಂದರೆ ಅಲ್ಲಿ ಹಾರರ್ ಇರಬೇಕು, ಇಲ್ಲವೇ ಅಂಡರ್ ವಲ್ರ್ಡ್ ಇರಬೇಕು. ಈ ರೀತಿಯ ಕತೆಗಳನ್ನೇ ಅವರು ಹೆಚ್ಚು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಮ್ಮ ರಾಜ್ಯದ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನ ಕಥನವನ್ನು ವರ್ಮಾ ಬೆಳ್ಳಿತೆರೆಗೆ ತರಲು ಹೊರಟಿದ್ದಾರೆ. ರೈ ಪಾತ್ರವನ್ನು ಬಾಲಿವುಡ್‍ನ ವಿವೇಕ್ ಓಬೇರಾಯ್ ಮಾಡಲಿದ್ದಾರೆ. ಈ ಚಿತ್ರದ ಮುಹೂರ್ತ ಮೇ.1 ರಂದು ಮುತ್ತಪ್ಪ ರೈ ನಿವಾಸದ ಮುಂದೆ ನಡೆಯಲಿದೆ. ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ.

ಅಂದು ಮುತ್ತಪ್ಪ ರೈ ಹುಟ್ಟು ಹಬ್ಬವೂ ಇದೆ. ಹೀಗಾಗಿ ರೈ ಅವರೇ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತೆಲುಗು ಮತ್ತು ಬಾಲಿವುಡ್‍ನ ಸಿನಿಮಾ ಮತ್ತು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಅದ್ದೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ರೈ ನೇತೃತ್ವದ ಜಯ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರೂ ಕೈ ಜೋಡಿಸಲಿದ್ದಾರೆ. ಅಂದ ಹಾಗೆ ಇದರ ಬಜೆಟ್ ಎಷ್ಟು ಗೊತ್ತೆ? ಭರ್ತಿ 55 ಕೋಟಿ ರೂ. ಮುಂಬೈ, ಲಂಡನ್ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಕನ್ನಡದ ಸಿಆರ್ ಮನೋಹರ್ ಇದನ್ನು ನಿರ್ಮಿಸುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಮುತ್ತಪ್ಪ ರೈ ಅವರನ್ನು ಭೇಟಿ ಮಾಡಿದ್ದ ವರ್ಮಾ ಕತೆಯನ್ನು ಕೇಳಿ ಥ್ರಿಲ್ ಆಗಿದ್ದರು. ಟ್ವಿಟರ್‍ನಲ್ಲಿ ರೈ ಜೀವನ ಕಥನಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದರು.` ಮುತ್ತಪ್ಪ ರೈ ಭೂಗತ ಲೋಕದ ಬಾಹುಬಲಿ..ಗಾಡ್ ಫಾದರ್‍ಗಿಂತ ಅದ್ಭುತವಾಗಿದೆ ಇವರ ಜೀವನ ಕಥನ.’ ಎಂದು ಹೊಗಳಿದ್ದರು. ಹೀಗಾಗಿ ಬರೀ ಕನ್ನಡದಲ್ಲಿ ಮಾತ್ರ ಅಲ್ಲದೆ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲೂ ಈ ಚಿತ್ರವನ್ನು ಮಾಡುತ್ತೇನೆ ಎಂದು ಹೇಳಿದ್ದರು. ಅಂದ ಹಾಗೆ ಮೊದಲು ರೈ ಪಾತ್ರಕ್ಕೆ ಸುದೀಪ್ ಆಯ್ಕೆ ಆಗಿದ್ದರು. ಕೊನೇ ಗಳಿಗೆಯಲ್ಲಿ ಅನಿವಾರ್ಯ ಕಾರಣಗಳಿಂದ ವಿವೇಕ್ ಓಬೇರಾಯ್ ಈ ಜಾಗಕ್ಕೆ ಬಂದರು.

ಎಲ್ಲರಿಗೂ ಗೊತ್ತಿರುವಂತೆ ಮುತ್ತಪ್ಪ ರೈ ಒಂದು ಕಾಲದಲ್ಲಿ ಭೂಗತ ಲೋಕವನ್ನು ಆಳುತ್ತಿದ್ದರು. ಅವರ ಮೇಲೆ ಕೊಲೆ ಸೇರಿದಂತೆ ಅನೇಕ ಆರೋಪಗಳಿದ್ದವು. ಅವರ ಮೇಲೆ ಕೊಲೆ ಯತ್ನವೂ ನಡೆದಿತ್ತು. ಕೊನೆಗೆ ದುಬೈಗೆ ಹೋಗಿ ನೆಲೆಸಿದರು. ರಾಜ್ಯಕ್ಕೆ ವಾಪಸಾದ ಮೇಲೆ ಇವರ ಮೇಲಿದ್ದ ಎಲ್ಲಾ ಕೇಸ್‍ಗಳು ಸಾಕ್ಷಿ ಆಧಾರದ ಕೊರತೆಯಿಂದ ಖುಲಾಸೆಯಾದವು. ಈಗ ಇವರು ಜಯ ಕರ್ನಾಟಕ ವೇದಿಕೆಯನ್ನು ಕಟ್ಟಿಕೊಂಡಿದ್ದಾರೆ. ಆ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಊರುಗಳಲ್ಲಿ ಈ ಸಂಘಟನೆಗಳಿವೆ.

ಇಲ್ಲಿವರೆಗೆ ನಮ್ಮ ರಾಜ್ಯದ ಜನರಿಗೆ ಮಾತ್ರ ಗೊತ್ತಿದ್ದ ರೈ ಜೀವನ ಕಥನ ಈಗ ವಿಶ್ವಕ್ಕೆ ಗೊತ್ತಾಗಲಿದೆ. ರಾಮ್ ಗೋಪಾಲ್ ವರ್ಮಾ ಇಂಥ ಕತೆಗಳಿಗೆ ಜೀವ ತುಂಬುವುದರಲ್ಲಿ ಎತ್ತಿದ ಕೈ. ಇವರ ನಿರ್ದೇಶನದ ಶಿವ, ಸರ್ಕಾರ್, ಸರ್ಕಾರ್ ರಾಜ್, ಡಿ ಕಂಪನಿ, ಸತ್ಯ ಚಿತ್ರಗಳು ಇದೇ ಹಿನ್ನೆಲೆ ಹೊಂದಿದ್ದವು. ಆ ಸಾಲಿಗೆ ಈಗ ರೈ ಸಿನಿಮಾ ಕೂಡ ಸೇರಲಿದೆ.

Write A Comment