ಕರ್ನಾಟಕ

ಜನಾರ್ಧನ ಪೂಜಾರಿ ಅವರಿಗೆ ಬುದ್ಧಿವಾದ ಹೇಳಲು ಹೋದ ಆಂಜನೇಯಗೆ ಬೆಂಡೆತ್ತಿದ ಹರಿಪ್ರಸಾದ್

Pinterest LinkedIn Tumblr

ppojari

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಮುಸುಕಿನ ಗುದ್ದಾಟ ಇದೆ ಎಂಬುದು ಪದೇ ಪದೇ ಜಗಜ್ಜಾಹೀರಾಗಿದೆ.

ಬಹಿರಂಗವಾಗಿಯೇ ಹಿರಿಯ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲ ಸಚಿವರ ಕಾರ್ಯವೈಖರಿ ವಿರುದ್ಧ ಟೀಕೆ ಮಾಡುತ್ತಿದ್ದು, ಇಂದೂ ಸಹ ಹಿರಿಯ ನಾಯಕರು ಸಚಿವ ಆಂಜನೇಯ ಅವರ ವಿರುದ್ಧ ಟೀಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರಲ್ಲಿರುವ ವೈಮನಸ್ಯವನ್ನು ಮತ್ತೊಮ್ಮೆ ಬಯಲು ಮಾಡಿದರು.

ಸರ್ಕಾರದ ವಿರುದ್ಧ ಆಗಾಗ್ಗೆ ಚಾಟಿ ಬೀಸುವ ಜನಾರ್ಧನ ಪೂಜಾರಿ ಅವರಿಗೆ ಬುದ್ಧಿವಾದ ಹೇಳಲು ಹೋದ ಸಚಿವ ಆಂಜನೇಯ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ತರಾಟೆಗೆ ತೆಗೆದುಕೊಂಡ ಪ್ರಸಂಗ ಬಿಲ್ಲವ ಭವನ ಉದ್ಘಾಟನಾ ಸಮಾರಂಭದಲ್ಲಿ ನಡೆದಿದೆ.

ಕೆಲವರು ಸಚಿವರಾಗುತ್ತಿದ್ದಂತೆಯೇ ಎಲ್ಲರಿಗೂ ಬುದ್ಧಿವಾದ ಹೇಳಬಹುದು ಎನ್ನುವ ಭಾವನೆ ಬರುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಸಚಿವ ಆಂಜನೇಯ ವಿರುದ್ಧ ಹರಿಹಾಯ್ದರು.

ನಗರದ ಹೊರ ವಲಯದ ಹುಳಿಮಾವಿನಲ್ಲಿ ಬಿಲ್ಲವ ಭವನ ಹಾಗೂ ನಾರಾಯಣ ನೇತ್ರಾಲಯದ 4ನೇ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಆಂಜನೇಯ, ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರಿಗೆ ಮುಖ್ಯಮಂತ್ರಿ ವಿರುದ್ಧ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ಬಿ.ಕೆ. ಹರಿಪ್ರಸಾದ್ ಕೆಲವರಿಗೆ ಸಚಿವ ಸ್ಥಾನ ಸಿಕ್ಕುತ್ತಿದ್ದಂತೆಯೇ ಎಲ್ಲರಿಗೂ ಬುದ್ಧಿವಾದ ಹೇಳಬಹುದು ಅಂದುಕೊಳ್ಳುತ್ತಾರೆ.

ಅದು ಆಗಬಾರದು ಜನಾರ್ಧನ ಪೂಜಾರಿ ಅವರು ಅತ್ಯಂತ ಪ್ರಾಮಾಣಿಕರು, ಆ ಕಾರಣಕ್ಕೆ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಮೇಲೆ ಒಂದು ಸಣ್ಣ ಆರೋಪ ಕೂಡ ಇಲ್ಲ, ಯಾವುದೇ ಕಾರಣಕ್ಕೂ ಜನಾರ್ಧನ ಪೂಜಾರಿ ಅವರು ಬದಲಾಗಬಾರದು ಎಂದರು.

ಈ ಸಂದರ್ಭದಲ್ಲಿ ಸಚಿವ ಆಂಜನೇಯ ವೇದಿಕೆಯಿಂದ ನಿರ್ಗಮಿಸಿದ್ದರು. ಇದಕ್ಕೂ ಮೊದಲು ಮಾತನಾಡಿದ್ದ ಸಚಿವ ಆಂಜನೇಯ, ಜನಾರ್ಧನ ಪೂಜಾರಿ ಅವರು ಒಬ್ಬ ನಿಷ್ಠುರ ರಾಜಕಾರಣಿ. ಭ್ರಷ್ಟಾಚಾರ ಮಾಡದೇ ಇರುವಂತಹ ವ್ಯಕ್ತಿ. ಆದರೆ ಇಂತಹವರನ್ನು ಮಂಗಳೂರಿನ ಜನತೆ ಚುನಾವಣೆಯಲ್ಲಿ ಸೋಲಿಸಿದ್ದಾರೆ.

ಈ ಸೋಲಿಗೆ ಜನಾರ್ಧನ ಪೂಜಾರಿ ಅವರ ಹೇಳಿಕೆಗಳೇ ಕಾರಣ. ನೀವು ಕಡಿಮೆ ಮಾತನಾಡಿದರೆ ಮತ್ತೆ ಲೋಕಸಭೆಗೆ ಹೋಗಬಹುದು ಎಂದು ವೇದಿಕೆಯಲ್ಲಿದ್ದ ಜನಾರ್ಧನ ಪೂಜಾರಿ ಅವರಿಗೆ ಹೇಳಿದ್ದರು.

ಕಾಂಗ್ರೆಸ್‌ನಲ್ಲಿ ಅತ್ಯಂತ ಹಿರಿಯ ರಾಜಕಾರಣಿ ನೀವು. ಪ್ರಾಮಾಣಿಕ ವ್ಯಕ್ತಿಗೆ ನೈತಿಕತೆ ಹೆಚ್ಚಿರುತ್ತೆ. ಆ ನೈತಿಕತೆಯೇ ಒಮ್ಮೊಮ್ಮೆ ದಾರಿ ತಪ್ಪಿಸುತ್ತದೆ. ಆದ್ದರಿಂದ ಆರೋಗ್ಯಕರ ಟೀಕೆ-ಟಿಪ್ಪಣಿ ಮಾಡಿದರೆ ಒಳ್ಳೆಯದು ಎಂದು ಸಚಿವ ಆಂಜನೇಯ ತಮ್ಮ ಭಾಷಣದಲ್ಲಿ ಪದೇ ಪದೇ ಹೇಳಿ ಪರೋಕ್ಷವಾಗಿ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಬೇಡಿ ಎಂದು ಹೇಳಿದ್ದರು.

ಆಂಜನೇಯರವರ ಭಾಷಣದ ನಂತರ ಮಾತನಾಡಲು ನಿಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಆಂಜನೇಯರವರ ಮಾತುಗಳಿಗೆ ತೀವ್ರ ಅಸಮಾಧಾನ ಹೊರಹಾಕಿದರು.

ಇದಕ್ಕೂ ಮೊದಲು ಬಿಲ್ಲವ ಭವನ ಹಾಗೂ ನಾರಾಯಣ ನೇತ್ರಾಲಯವನ್ನು ಹಿರಿಯ ನಾಯಕ ಜನಾರ್ಧನ ಪೂಜಾರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪೂಜಾರಿ ಅವರು ನಾರಾಯಣ ನೇತ್ರಾಲಯದಲ್ಲಿ ತಮ್ಮ ಎರಡೂ ಕಣ್ಣುಗಳನ್ನು ನೇತ್ರ ತಜ್ಞ ಡಾ. ಭುಜಂಗಶೆಟ್ಟಿ ಅವರಿಂದ ತಪಾಸಣೆ ಮಾಡಿಸಿಕೊಂಡರು.

ಸಮಾರಂಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಸತೀಶ್ ರೆಡ್ಡಿ, ವಿಧಾನ ಪರಿಷತ್ ಸಚಿವ ವಿ.ಎಸ್. ಉಗ್ರಪ್ಪ ಮತ್ತಿತರರು ಭಾಗಿಯಾಗಿದ್ದರು.

Write A Comment