ಕರ್ನಾಟಕ

ಬೆಂಗಳೂರು ನಗರದಲ್ಲಿ ನಾಲ್ಕು ಕಡೆ ಬೆಂಕಿ ಆಕಸ್ಮಿಕ :ಮೂರು ವಾಹನಗಳಿಗೆ ಹಾನಿ

Pinterest LinkedIn Tumblr

fire

ಬೆಂಗಳೂರು: ರವಿವಾರ ಮುಂಜಾನೆ ಕಾಣಿಸಿಕೊಂಡ ಬೆಂಕಿ ಅವಘಡದಿಂದಾಗಿ ಮೂರು ವಾಹನಗಳಿಗೆ ಭಾಗಶಃ ಹಾನಿಯಾಗಿವೆ. ಕಾಟನ್‌ಪೇಟೆ: ಜಾಲಿ ಮೊಹಲ್ಲಾದ 3ನೆ ಕ್ರಾಸ್‌ನಲ್ಲಿ ರಸ್ತೆ ಬದಿಯಿರುವ ಟ್ರಾನ್ಸ್‌ಫಾರಂ ಪಕ್ಕದಲ್ಲಿ ರಾತ್ರಿ ಟಾಟಾ ಸುಮೋ ಹಾಗೂ ಕೆನೆಟಿಕ್ ಹೋಂಡಾ ನಿಲ್ಲಿಸಲಾಗಿತ್ತು. ಮುಂಜಾನೆ 3 ಗಂಟೆ ಸಮಯದಲ್ಲಿ ಟ್ರಾನ್ಸ್‌ಫಾರಂನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಿಡಿ ಈ ವಾಹನಗಳಿಗೆ ತಾಗಿದ ಪರಿಣಾಮ ಭಾಗಶಃ ಹಾನಿಯಾಗಿದೆ.

ನಂದಿನಿಲೇಔಟ್: ನರಸಿಂಹಲು ಬಡಾವಣೆಯ ಎಫ್‌ಟಿಐ ಸರ್ಕಲ್ ಸಮೀಪದ ರಸ್ತೆ ಬದಿಯ ಖಾಲಿ ನಿವೇಶನದಲ್ಲಿ ಕಾರು ನಿಲ್ಲಿಸಲಾಗಿತ್ತು. ಈ ನಿವೇಶನದಲ್ಲಿ ಸಂಗ್ರಹವಾಗಿದ್ದ ಕಸಕ್ಕೆ ರಾತ್ರಿ ಬೆಂಕಿ ಹಚ್ಚಲಾಗಿದೆ. ಮುಂಜಾನೆ 1.30ರಲ್ಲಿ ಬೆಂಕಿಯ ಕಿಡಿ ಕಾರಿಗೆ ತಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರು ಸ್ವಲ್ಪ ಭಾಗ ಸುಟ್ಟಿದೆ.

ಕಮರ್ಷಿಯಲ್ ಸ್ಟ್ರೀಟ್: ಕಾಮರಾಜ ರಸ್ತೆಯಲ್ಲಿನ ಕಮರ್ಷಿಯಲ್ ಪ್ಲಾಜಾ ಕಟ್ಟಡದ ನೆಲಮಹಡಿಯ ಕಚೇರಿಯಲ್ಲಿ ಬೆಳಗಿನ ಜಾವ 5.30ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದ ಸ್ಥಳೀಯರು ತಕ್ಷಣ ಅಗ್ನಿಶಾಮಕಕ್ಕೆ ತಿಳಿಸಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಈ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಮೂರೂ ಪ್ರಕರಣಗಳನ್ನು ಆಯಾ ಠಾಣೆಯ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಬೆಂಗಳೂರು, ಏ.24-ನಗರದ ಅಗರಬತ್ತಿ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿಯಾಗಿರುವ ಘಟನೆ ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಇಲ್ಲಿನ 2ನೆ ಕ್ರಾಸ್, 9ನೆ ಮುಖ್ಯರಸ್ತೆಯ ಪಿಳ್ಳಮ್ಮ ಬ್ಲಾಕ್‌ನಲ್ಲಿನ ಅಗರಬತ್ತಿ ಕಾರ್ಖಾನೆಯಲ್ಲಿ ರಾತ್ರಿ 11.30ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಗಮನಿಸಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಏಳು ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರು.

ಮುಂಜಾನೆ 5 ಗಂಟೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಯ ಅವಘಡದಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಶ್ರೀರಾಮಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Write A Comment