ಕರ್ನಾಟಕ

‘ಸ್ಮಾರ್ಟ್’ ಹಳ್ಳಿಗಳ ಅಭಿವೃದ್ಧಿ

Pinterest LinkedIn Tumblr

22j5clrಬೆಂಗಳೂರು, ಏ. ೨೨ – ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳನ್ನು ಮಾಡಲು ಮುಂದಾಗಿದ್ದು, ಅದರ ಬದಲು ‘ಸ್ಮಾರ್ಟ್ ಹಳ್ಳಿಗಳನ್ನಾಗಿ ಪರಿವರ್ತಿಸುವುದು ಅಗತ್ಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಇಂದು ಇಲ್ಲಿ ಸಲಹೆ ಮಾಡಿದ್ದಾರೆ.
ಹಳ್ಳಿಗಳಿಗೆ ಕುಡಿಯುವ ನೀರು, ಶೌಚಾಲಯ, ರಸ್ತೆ, ಬೀದಿದೀಪ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸುವ ಜತೆಗೆ ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಂಡಾಗ ನಗರಮುಖಿಯಾಗಿರುವ ಜನ ಹಳ್ಳಿಗಳತ್ತ ಮುಖ ಮಾಡುತ್ತಾರೆ ಎಂದು ಹೇಳಿದರು.
ವಿಶ್ವ ಭೂ ದಿನದ ಅಂಗವಾಗಿ ಗ್ರೀನ್ ಪಾತ್ ಸಂಸ್ಥೆ ಮಲ್ಲೇಶ್ವರಂನಲ್ಲಿರುವ ಹಸಿರು ತೋಟದಲ್ಲಿ ಆಯೋಜಿಸಿದ್ದ ೨ ದಿನಗಳ ‘ಭೂಮಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳಿಗೆ ಮೂಲ ಸೌಕರ್ಯ ನೀಡಲು ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಮೇಲೆ ನಿರಂತರ ಶೋಷಣೆಯಾಗುತ್ತಿದೆ. ಹೀಗಾಗಿ ಒಂದಿಲ್ಲೊಂದು ಸಮಯದಲ್ಲಿ ಪ್ರಕೃತಿ ಮಾನವನ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದರು.
ಈ ಮುಂಚೆ ಭೂಮಿಯನ್ನು ತಾಯಿ ಸಮಾನರಂತೆ ರೈತರು ನೋಡಿಕೊಳ್ಳುತ್ತಿದ್ದರು. ಈಗ ತಾಯಿ ಸ್ಥಾನವನ್ನು ಹೆಂಡತಿ ಸ್ಥಾನವಾಗಿ ಮಾರ್ಪಾಡಾಗಿದೆ. ಇದರಿಂದಾಗಿ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿದರು.
ಭಾರತ ಹಿಂದೆ ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿತ್ತು. ಈಗ ಹೆಚ್ಚೆಚ್ಚು ರಸಗೊಬ್ಬರವನ್ನು ಬಳಸಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆಯೂ ಕೂಡ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸಾವಯವ ಕೃಷಿಗೆ ಆಧ್ಯತೆ ನೀಡುವ ಮೂಲಕ ರೈತರನ್ನು ಹೆಚ್ಚೆಚ್ಚು ಕೃಷಿ ಕಡೆ ತೊಡಗಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

Write A Comment