ರಾಜ್ಯವನ್ನು ಕಾಡಿರುವ ಭೀಕರ ಬರ ಅಧ್ಯಯನಕ್ಕಾಗಿ ಸಚಿವರುಗಳ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ನಾಳೆಯಿಂದಲೇ ಪ್ರವಾಸ ಆರಂಭಿಸಲಿದ್ದಾರೆ. ಏ.30ರೊಳಗೆ ತಂಡಗಳು ವರದಿ ನೀಡಲಿವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ವಿವಿಧ ಇಲಾಖೆಗಳ ಐವತ್ತು ಲಕ್ಷವರೆಗಿನ ಕಾಮಗಾರಿಗಳಲ್ಲಿ ಶೇ.24ರಷ್ಟು ಪರಿಷ್ಟಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆ ದಾರರಿಗೆ ಮೀಸಲಿಡಲು ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎಸ್ಸಿಗೆ ಶೇ.17.5 ಹಾಗೂ ಎಸ್ಟಿಗೆ ಶೇ.6.95ರಷ್ಟು ಮೀಸಲಾತಿಯನ್ನು ಟೆಂಡರ್ನಲ್ಲಿ ಕಲ್ಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ಇದಲ್ಲದೆ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇನ್ನು ಮುಂದೆ ಯಾವುದೇ ಕೋರ್ಸ್ಗಳಿಗೆ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡದಿರಲು ಮತ್ತು ಬೇರೆ ಕೇಂದ್ರಗಳಿಗೆ ಮಾನ್ಯತೆ ನೀಡದಿರಲು ನಿರ್ಧರಿಸಲಾಗಿದೆ. ರಾಮನಗರ ಜಿಲ್ಲೆ ಅರ್ಚಕರಹಳ್ಳಿಯಲ್ಲಿ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಅಡಿಯಲ್ಲಿ ಎರಡು ಹೊಸ ಆಸ್ಪತ್ರೆ ಕಟ್ಟಲು 548ಕೋಟಿ ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ವಿವಿ ಅಡಿಯಲ್ಲಿ ಮತ್ತು 750 ಹಾಸಿಗೆಗಳ ಆಸ್ಪತ್ರೆ ಸರ್ಕಾರದ ಉಸ್ತುವಾರಿಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ಹಜಾಮ ಹಾಗೂ ನಾಯಿಂಡ ಪದವನ್ನು ತೆಗೆದು ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ವಿವಿಧ ಇಲಾಖೆಗಳಲ್ಲಿ ಕಡತಗಳ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ 4816 ಕಡತಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
30ರೊಳಗೆ ವರದಿ ನೀಡಲು ಸೂಚನೆ:
ಬರ ಪರಿಸ್ಥಿತಿ ಅಧ್ಯಯನ ಮಾಡಲು ಮತ್ತು ನಿಭಾಯಸಲು ರಚಿಸಲಾಗಿದ್ದ ಸಂಪುಟ ಉಪ ಸಮಿತಿಗಳು ಇದೇ ತಿಂಗಳ 30ರೊಳಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಸಚಿವ ಸಂಪುಟಸಭೆ ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬರ ಪರಿಸ್ಥಿತಿಯ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈಗಾಗಲೇ ಮುಖ್ಯಮಂತ್ರಿ ಅವರು ಕೂಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಚಿವ ಸಂಪುಟದ ಹಿರಿಯ ಸದಸ್ಯರ ನೇತೃತ್ವದಲ್ಲಿ ಉಪಸಮಿತಿಗಳನ್ನು ರಚಿಸಲಾಗಿದ್ದು, ಅವರು ಶೀಘ್ರವೇ ವರದಿ ನೀಡಬೇಕೆಂದು ಸೂಚಿಸಲಾಗಿದೆ.
ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 357ಕೋಟಿ ಈಗಾಗಲೇ ಹಣ ಜಮಾವಣೆಯಾಗಿದೆ. ಕುಡಿಯುವ ನೀರಿಗೆ 150 ಕೋಟಿ ರೂ. ಒದಗಿಸಲಸಾಗಿದೆ. ನರೇಗಾ ಯೋಜನೆಯಡಿ 800 ಕೋಟಿ ನೀಡಲಾಗಿದೆ. ಕುಡಿಯುವ ನೀರಿನ ಅಭಾವ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಈ ಹಣ ಬಳಸಬಹುದಾಗಿದೆ. 150 ಕೋಟಿ ಪೈಕಿ ಈಗಾಗಲೇ 50 ಕೋಟಿ ಬಿಡುಗಡೆಯಾಗಿತ್ತು. 200 ಕೋಟಿಯನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ಜಯಚಂದ್ರ ಸಂಪುಟಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಿಶ್ವೇಶ್ವರಯ್ಯ ರಾಷ್ಟ್ರೀಯ ಅಕಾಡೆಮಿಯನ್ನು 136 ಕೋಟಿ ರೂ. ವೆಚ್ಚದಲ್ಲಿ ದೇವನಹಳ್ಳಿಯಲ್ಲಿ ಸ್ಥಾಪಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಸ್ಥಾಪಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗುತ್ತಿದೆ. ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ತುಮಕೂರು, ಬಳ್ಳಾರಿ, ಚಿತ್ರದುರ್ಗಗಳಲ್ಲಿ ಪರಿಸರ ಪುನಶ್ಚೇತನ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 7ಸಾವಿರ ಕೋಟಿ ಲಭ್ಯವಿದ್ದು, ಒಟ್ಟು 15 ಸಾವಿರ ಕೋಟಿ ಗಣಿ ಮಾಲೀಕರಿಂದ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.