ಕರ್ನಾಟಕ

ಪತ್ನಿ ಕತ್ತು ಕೊಯ್ದು ಕೊಲೆ

Pinterest LinkedIn Tumblr

murder

ಬೆಂಗಳೂರು: ಕಾಡುಗೋಡಿಯ ತರಕಾರಿ ಮಾರುಕಟ್ಟೆ ಪ್ರದೇಶದ ಬಳಿ ಸೋಮವಾರ ಶಂಕರ್ ಎಂಬಾತ ತನ್ನ ಪತ್ನಿ ಗೀತಾ (25) ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಸ್ವಚ್ಛತಾ ಕೆಲಸ ಮಾಡುತ್ತಿದ್ದ ಗೀತಾ ಅವರು ಆರು ವರ್ಷದ ಹಿಂದೆ ಶಂಕರ್‌ನನ್ನು ಮದುವೆಯಾಗಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.

ಮದ್ಯ ವ್ಯಸನಿಯಾಗಿದ್ದ ಶಂಕರ್ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. 20 ದಿನದ ಹಿಂದೆಯೂ ಇದೇ ವಿಷಯಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಆಗ ಗೀತಾ ಅವರು ಮಕ್ಕಳೊಂದಿಗೆ ಕಾಡುಗೋಡಿಯಲ್ಲೇ ಇರುವ ತವರುಮನೆಗೆ ಹೋಗಿದ್ದರು.

ಬೆಳಿಗ್ಗೆ ಪತ್ನಿ ಮನೆಗೆ ಹೋಗಿದ್ದ ಶಂಕರ್, ಇನ್ನು ಮುಂದೆ ಜಗಳ ಮಾಡುವುದಿಲ್ಲ ಎಂದು ಹೇಳಿ ಮಧ್ಯಾಹ್ನ ವಾಪಸ್ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬಂದ ಕೆಲ ಹೊತ್ತಿನಲ್ಲೇ ಇಬ್ಬರ ಮಧ್ಯೆ ಮತ್ತೆ ಜಗಳ ಆರಂಭವಾಗಿದೆ.

ಈ ವೇಳೆ ಶಂಕರ್ ಚಾಕುವಿನಿಂದ ಗೀತಾ ಅವರ ಕತ್ತು ಕೊಯ್ದು, ಬಳಿಕ ಹೊಟ್ಟೆಗೆ ಎರಡು ಸಲ ಇರಿದಿದ್ದಾನೆ. ಚೀರಾಟ ಕೇಳಿ ಮನೆಗೆ ಬಂದ ಅಕ್ಕಪಕ್ಕದವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೀತಾ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

ಘಟನೆ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಾಡುಗೋಡಿ ಪೊಲೀಸರು ತಿಳಿಸಿದರು.

ಪುತ್ರಿಯನ್ನು ಹೊರಗೆ ಕೂರಿಸಿದ್ದ: ಮನೆಗೆ ಬರುವಾಗ ಗೀತಾ ಅವರು ಒಬ್ಬಳು ಪುತ್ರಿಯನ್ನು ಮಾತ್ರ ಜತೆಗೆ ಕರೆದುಕೊಂಡು ಬಂದಿದ್ದರು. ಮನೆಗೆ ಬಂದೊಡನೆ ಶಂಕರ್ ಜಗಳ ತೆಗೆದಾಗ ಭಯಗೊಂಡ ಪುತ್ರಿ ಅಳತೊಡಗಿದ್ದಾಳೆ.

ಆಗ ಸಮೀಪದ ಅಂಗಡಿಗೆ ಕರೆದುಕೊಂಡು ಹೋಗಿ ಫ್ರೈಡ್ ರೈಸ್ ಕೊಡಿಸಿಕೊಂಡು ಬಂದ ಆತ, ಮನೆಯ ಹೊರಗಡೆಯೇ ಕೂರಿಸಿದ್ದಾನೆ. ಬಳಿಕ ಒಳ ಹೋಗಿ ಪತ್ನಿ ಜತೆ ಜಗಳ ತೆಗೆದು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.

Write A Comment