ಬೆಂಗಳೂರು: ಸಂಪುಟ ಪುನಾರಚನೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಗುಂಪಿನ ರಾಜಕೀಯ ಆರಂಭವಾಗಿದೆ. ಹೌದು ಕಾಂಗ್ರೆಸ್ ಪಕ್ಷದಲ್ಲೇ ಒಟ್ಟು ಮೂರು ಗುಂಪುಗಳಾಗಿರುವುದು ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.
ಒಂದೆಡೆ ಶನಿವಾರ ಸಂಜೆ ಖಾಸಗಿ ಹೋಟೆಲ್ ನಲ್ಲಿ ಸಮಾನ ಮನಸ್ಕರ ಶಾಸಕರ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ಸಿದ್ದಪಡಿಸುವುದಾಗಿ ಶಾಸಕ ಮುನಿರತ್ನ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮತ್ತೊಂದೆಡೆ ಪಶು ಸಂಗೋಪನಾ ಸಚಿವ ಎ.ಮಂಜು ನೇತೃತ್ವದಲ್ಲಿ ಸಂಪುಟದಲ್ಲಿ ಒಕ್ಕಲಿಗ ಶಾಸಕರಿಗೆ ಪ್ರಾಶಸ್ತ್ಯ ನೀಡಬೇಕೆಂದು ಒತ್ತಾಯಿಸಲು ಗುಂಪೊಂದು ಸಿದ್ಧತೆ ನಡೆಸಿದೆ.
ಇವೆಲ್ಲದರ ನಡುವೆ ಸಮಾನ ಮನಸ್ಕ ಶಾಸಕರಿಗೆ ಸೆಡ್ಡು ಹೊಡೆಯಲು ಪರ್ಯಾಯವಾಗಿ ಹಿರಿಯ ಶಾಸಕರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಹಿರಿಯ ಶಾಸಕರು ಸಮಾನ ಮನಸ್ಕ ಶಾಸಕರಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಗುಂಪಿನ ರಾಜಕೀಯ ಆರಂಭವಾಗಿದೆ.
-ಉದಯವಾಣಿ