ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ನೀರಿಗೆ ಹಾಹಾಕಾರ : ಭವಿಷ್ಯದಲ್ಲಿ ಕಾದಿದೆ ಸಂಚಕಾರ ..!

Pinterest LinkedIn Tumblr

siಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ, ಉದ್ಯಾನನಗರಿ ಎಂಬ ಖ್ಯಾತಿಗೆ ಒಳಗಾಗಿದ್ದ ಬೆಂಗಳೂರು ಇತ್ತೀಚೆಗೆ ಬರಡುಭೂಮಿಯಾಗಿ ಪರಿವರ್ತನೆಯಾಗಿದೆ. ಪರಿಣಾಮ ಬಿಸಿಲಿನ ಬೇಗೆಗೆ ನಗರ ಕಾದ ಕಾವಲಿಯಂತಾಗಿದ್ದು , ಎಲ್ಲೆಡೆ ನೀರಿಗೆ ಹಾಹಾಕಾರ ಭುಗಿಲೆದ್ದಿದೆ. ಒಂದೆರಡು ತಿಂಗಳು ಮಳೆರಾಯ ಮುನಿಸಿಕೊಂಡರೆ ನೀರಿನ ದಾಹ ತೀರದೆ ಅದೆಷ್ಟೋ ಅಮಾಯಕ ಪ್ರಾಣಗಳು ಬಲಿಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ನಗರದ ಹಳೇಪ್ರದೇಶಗಳು ಸೇರಿದಂತೆ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳು ಮತ್ತು ನಗರಸಭೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಲ್ಲಿನ ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ.

ನಗರದ ಹೃದಯಭಾಗದಲ್ಲಿರುವ ಟ್ಯಾನರಿರಸ್ತೆಯಲ್ಲಿ ಕುಡಿಯುವ ನೀರು ಸಿಗದೆ ಅಲ್ಲಿನ ಜನ ಪರದಾಡುತ್ತಿದ್ದಾರೆ. ಗುಟುಕು ನೀರಿಗಾಗಿ ಹಣ ತೆತ್ತು ಬಿಂದಿಗೆ ನೀರು ಖರೀದಿಸುವುದು ಇಲ್ಲಿ ಮಾಮೂಲು. ನೀರಿನ ಅಭಾವವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತಳ್ಳುವ ಗಾಡಿಗಳಲ್ಲಿ ಬಿಂದಿಗೆ ನೀರನ್ನು ವ್ಯಾಪಾರ ಮಾಡುತ್ತಿದ್ದಾರೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಇದುವರೆಗೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲ್ಲಿನ ಜನಕ್ಕೆ ಬೋರ್‌ವೆಲ್ ನೀರೇ ಗತಿಯಾಗಿದ್ದು, ಆದರೆ ಇತ್ತೀಚೆಗೆ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶ್ರೀಮಂತ, ಮಧ್ಯಮ ಹಾಗೂ ಬಡವರ್ಗದವರು ದುಡ್ಡು ಕೊಟ್ಟು ಕ್ಯಾನ್ ನೀರನ್ನು ಖರೀದಿಸುವುದು ಅನಿವಾರ್ಯವಾಗಿದೆ.

ಉಳಿದಂತೆ ನಗರದ ಬೊಮ್ಮನಹಳ್ಳಿ , ಆವಲಹಳ್ಳಿ, ಅಂಜನಾಪುರ, ಗೊಟ್ಟಿಗೆರೆ, ಮಾರತ್‌ಹಳ್ಳಿ, ವರ್ತೂರು, ಕೆ.ಆರ್.ಪುರ, ಕೈಕೊಂಡನಹಳ್ಳಿ, ಇಬ್ಬಲೂರು, ಸುಂಕದಕಟ್ಟೆ, ಹೆಗ್ಗನಹಳ್ಳಿ, ಹೇರೋಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ಕುಡಿಯುವ ನೀರು ಸಿಗದೆ ಜನ ಪಾಡುಪಡುವಂತಾಗಿದೆ.

ಮಾಫಿಯಾ:

ಇಬ್ಬಲೂರಿನಲ್ಲಿರುವ ಪ್ರತಿಯೊಂದು ಮನೆಯಲ್ಲೂ ಬೋರ್‌ವೆಲ್‌ಗಳಿವೆ. ಇಲ್ಲಿನ ಜನ ಕುಡಿಯುವ ನೀರು ಮಾರಾಟ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ತಲೆ ಎತ್ತುತ್ತಿರುವ ಅಪಾರ್ಟ್‌ಮೆಂಟ್‌ಗಳಿಗೆ ಕುಡಿಯುವ ನೀರು ಮಾರಾಟ ಮಾಡುವುದೇ ಇವರ ದಂಧೆಯಾಗಿದೆ. ಉಳಿದ ಕಡೆ ಟ್ಯಾಂಕರ್ ಮಾಫಿಯಾದ ಹಾವಳಿ ಹೆಚ್ಚಾಗಿದ್ದು , ನೀರಿನ ಅಭಾವವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರನ್ನು ಕಾಸಿಗಾಗಿ ಮಾರಿಕೊಳ್ಳುತ್ತಿದ್ದಾರೆ. ಸುಂಕದಕಟ್ಟೆ, ಹೆಗ್ಗನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಎತ್ತಿನಗಾಡಿಯಲ್ಲಿ ಸೀಮೆಎಣ್ಣೆ ಡ್ರಮ್‌ಗಳಲ್ಲಿ ನೀರು ತುಂಬಿಕೊಂಡು ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಹೇರೋಹಳ್ಳಿ ವಾರ್ಡ್‌ನ ವಿಘ್ನೇಶ್ವರ ನಗರ, ಮಾರುತಿನಗರ, ಮಹದೇಶ್ವರನಗರ ಸುತ್ತಮುತ್ತಲ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಒಂದು ದಿನ ಟ್ಯಾಂಕರ್ ಬರದಿದ್ದರೆ ಇಲ್ಲಿನ ಜನಕ್ಕೆ ಕುಡಿಯಲು ನೀರೇ ಇರುವುದಿಲ್ಲ. ಜನರ ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಬಿಬಿಎಂಪಿ ಸದಸ್ಯರು ಪ್ರತಿನಿತ್ಯ ಟ್ಯಾಂಕರ್‌ಗಳಲ್ಲಿ ಆಯಾ ಮನೆಗಳ ಸಂಪ್‌ಗಳಿಗೆ ನೀರು ತುಂಬಿಸುತ್ತಿದ್ದಾರೆ. ಪ್ರತಿನಿತ್ಯ 50 ಟ್ಯಾಂಕರ್‌ಗಳಿಗೆ ಈ ಭಾಗದ ಜನರ ನೀರಿನ ಸಂಪ್ ತುಂಬಿಸುವುದೆ ಕಾಯಕವಾಗಿದೆ.

ಅನುದಾನ:

ನಗರದಲ್ಲಿ ಉಂಟಾಗಿರುವ ನೀರಿನ ಹಾಹಾಕಾರ ತಪ್ಪಿಸುವ ಉದ್ದೇಶದಿಂದ ಪಾಲಿಕೆ ಬಜೆಟ್‌ನಲ್ಲಿ ಈ ಬಾರಿ ಕುಡಿಯುವ ನೀರಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಹಳೇ ವಾರ್ಡ್‌ಗಳಿಗೆ ತಲಾ 15 ಲಕ್ಷ , ಹೊಸ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ತಲಾ 40 ಲಕ್ಷ ರೂ.ಗಳ ಅನುದಾನ ಮೀಸಲಿರಿಸಲಾಗಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳ ಮೂಲಭೂತ ಸೌಕರ್ಯಕ್ಕಾಗಿ ಈ ಬಾರಿ ವಿಶೇಷ ಅನುದಾನ ಮೀಸಲಿರಿಸಲಾಗಿದ್ದು , ಇದರಲ್ಲಿ ಬಹುಪಾಲು ಕುಡಿಯುವ ನೀರಿನ ಬವಣೆ ನೀಗಿಸಲು ಮುಡುಪಾಗಿಟ್ಟಿರುವುದು ಉಲ್ಲೇಖಾರ್ಹ.

ರೋಗಭೀತಿ:

ಕೆಲ ಪ್ರದೇಶಗಳ ಬೋರ್‌ವೆಲ್‌ಗಳಲ್ಲಿ ಫ್ಲೋರೈಡ್ ಮಿಶ್ರಿತ ನೀರು ದೊರಕುತ್ತಿದ್ದು , ವಿಧಿ ಇಲ್ಲದೇ ಅದೇ ನೀರನ್ನು ದಿನನಿತ್ಯ ಬಳಸುತ್ತಿರುವುದರಿಂದ ಹಲವಾರು ಮಂದಿ ನಾನಾ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಕಾರಣವೇನು: ನಗರದ ಅಭಿವೃದ್ಧಿ ದೃಷ್ಟಿಯಿಂದ ನಡೆಸಲಾಗುತ್ತಿರುವ ಮರಗಳ ಮಾರಣಹೋಮ, ಕಾಂಕ್ರೀಟ್ ನಾಡಾಗಿ ಪರಿವರ್ತನೆಗೊಳ್ಳುತ್ತಿರುವು ದು, ನಗರದ ನಾಗರಿಕರು ಮಳೆ ನೀರು ಕೊಯ್ಲಿನ ಬಗ್ಗೆ ಅಸಡ್ಡೆ ತೋರುತ್ತಿರುವುದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ.

ನಗರದಲ್ಲಿ ಎಷ್ಟೇ ಮಳೆಯಾದರೂ ಭೂಮಿಗೆ ನೀರು ಇಳಿಯಲು ಸಾಧ್ಯವಿಲ್ಲದಂತೆ ಮೋರಿಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಭೂಮಿಯ ಒಡಲು ಸೇರದೆ ವ್ಯರ್ಥವಾಗಿ ಹರಿದು ಮೋರಿ ಸೇರುತ್ತಿದೆ. ಇನ್ನು ಮುಂದಾದರೂ ನಾಗರಿಕರು ಜೀವಜಲದ ಬಗ್ಗೆ ಅರಿವು ಮೂಡಿಸಿಕೊಂಡು ನೀರನ್ನು ಹಿಡಿದಿಡುವ ಕಾರ್ಯಕ್ಕೆ ಮುಂದಾಗದಿದ್ದರೆ ಭವಿಷ್ಯದಲ್ಲಿ ಹನಿ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ.

Write A Comment