ಕರ್ನಾಟಕ

ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಕಾಟ; ಬಿಬಿಎಂಪಿ ಪರದಾಟ!

Pinterest LinkedIn Tumblr

dog vidhana

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ, ವಿಧಾನಸೌಧ, ವಿಕಾಸಸೌಧದ ಆವರಣದಲ್ಲಿ ಕನಿಷ್ಠ 60 ಬೀದಿ ನಾಯಿಗಳು ಆಶ್ರಯ ಪಡೆದಿದ್ದು, ಆಡಳಿತ ಕೇಂದ್ರಕ್ಕೆ ಭೇಟಿ ನೀಡುವ ಶಾಸಕರು ಹಾಗೂ ಅಧಿಕಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.

ಶಾಸಕರು, ಶಾಸಕರನ್ನು ಭೇಟಿ ಮಾಡಲು ಬರುವವರತ್ತ ಬೀದಿ ನಾಯಿಗಳು ಬೊಗಳುವುದರಿಂದ ಕಿರಿಕಿರಿ ಉಂಟಾಗುತ್ತಿದೆ. ಆದರೆ ನಾಯಿಗಳನ್ನು ಹಿಡಿದು ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ ಅಧಿಕಾರಿಗಳು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಬೀದಿ ನಾಯಿಗಳನ್ನು ಹಿಡಿಯಲು ಮುಂದಾಗುವ ಅಧಿಕಾರಿಗಳಿಗೆ ಪ್ರಾಣಿದಯಾ ಸಂಘದ ಅಂಕುಶ ಇದೆ. ವಿಧಾನಸೌಧದಲ್ಲಿರುವ ಬೀದಿ ನಾಯಿಗಳನ್ನು ಬೆಳಿಗ್ಗೆ ವೇಳೆ ವಾಕಿಂಗ್ ಬರುವ ಸಾರ್ವಜನಿಕರು ಪೋಷಿಸುತ್ತಿದ್ದು, ವಿಧಾನಸೌಧದ ಬಳಿ ಇರುವ ಗೋಪಾಲ ಗೌಡ ವೃತ್ತ( ಎಂಎಸ್ ಬಿಲ್ಡಿಂಗ್ ಹತ್ತಿರ) ಹಾಗೂ ಕಬ್ಬನ್ ಪಾರ್ಕ್ ಗೇಟ್, ಹೈಕೋರ್ಟ್ ಬಳಿ ಈ ಬೀದಿ ನಾಯಿಗಳಿಗೆ ಹಾಲು ಹಾಗೂ ಬ್ರೆಡ್ ನೀಡುತ್ತಾರೆ. ಇದರಿಂದಾಗಿ ಬೀದಿ ನಾಯಿಗಳು ವಿಧಾನಸೌಧ ಆವರಣ ಬಿಟ್ಟು ಹೋಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧದ ಆಸುಪಾಸಿನಲ್ಲಿ ಸುಮಾರು 150 ಬೀದಿ ನಾಯಿಗಳಿದ್ದು, ನಾಯಿಗಳ ಕಾಟದಿಂದ ಕಿರಿಕಿರಿಯಷ್ಟೇ ಅಲ್ಲದೇ ಕೆಲಸಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ವಿಧಾನಸೌಧದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ವಿಧಾನಮಂಡಲ ಅಧಿವೇಶನ ನಡೆಯಬೇಕಾದರೆ ಗಣ್ಯ ವ್ಯಕ್ತಿಗಳು ವಿಧಾನಸೌಧಕ್ಕೆ ಆಗಮಿಸುತ್ತಾರೆ, ಅವರತ್ತ ನಾಯಿಗಳು ಬೊಗಳುವುದರಿಂದ ಕಿರಿಕಿರಿ ಉಂಟಾಗುತ್ತದೆ, ನಾವು ಸಮಾಜಘಾತುಕರಿಂದ ಗಣ್ಯ ವ್ಯಕ್ತಿಗಳಿಗೆ ಭದ್ರತೆ ನೀಡಬಹುದೇ ಹೊರತು ನಾಯಿಗಳಿಂದ ಅಲ್ಲ ಎಂದು ಭದ್ರತಾ ಸಿಬ್ಬಂದಿಗಳು ತಿಳಿಸಿದ್ದಾರೆ. ಹೆಚ್ಚುತ್ತಿರುವ ನಾಯಿಗಳ ಕಾಟದ ಬಗ್ಗೆ ವಿಧಾನಸೌಧದ ಅಧಿಕಾರಿಗಳು ಬಿಬಿಎಂಪಿಗೆ ಪತ್ರ ಬರೆದಿದ್ದು ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ.

Write A Comment