ಕರ್ನಾಟಕ

ಬ್ರಹ್ಮಾಂಡ ಅಕ್ರಮ ಜಾಲ : ಹೆಡ್‌ಮಾಸ್ಟರ್ ಸೇರಿ 520 ಮಂದಿ ಶಾಮೀಲು

Pinterest LinkedIn Tumblr

PU-boardಬೆಂಗಳೂರು, ಮಾ. ೨೫: ದ್ವಿತೀಯ ಪಿಯುಸಿ ರಾಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಯ, ಶಿಕ್ಷಕ, ಭದ್ರತಾ ಸಿಬ್ಬಂದಿ ಸೇರಿದಂತೆ ೫೨೦ ಮಂದಿ ವಿದ್ಯಾರ್ಥಿಗಳು ಭಾಗಿಯಾಗಿರುವ ಮಹತ್ವದ ಸುಳಿವು ಸಿಐಡಿಗೆ ಲಭ್ಯವಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕಳೆದ ಮೂರು ದಿನಗಳಿಂದ ಹಗಲಿರುಳೆನ್ನದೆ ತನಿಖೆ ನಡೆಸುತ್ತಿರುವ ಡಿಐಜಿ ಸೋನಿಯಾ ನಾರಂಗ್ ಅವರ ನೇತೃತ್ವದ ಸಿಐಡಿ ಅಧಿಕಾರಿಗಳ ವಿಶೇಷ ತಂಡಗಳು ಪ್ರಕರಣದಲ್ಲಿ ಭಾಗಿಯಾಗಿರುವವರ ಜಾಡು ಹಿಡಿದು ಕಾರ್ಯಾಚರಣೆ ಕೈಗೊಂಡಿದೆ.

* ಪ್ರಶ್ನೆ ಪತ್ರಿಕೆ ಸೋರಿಕೆ ಸಿಐಡಿಗೆ ಮಹತ್ವದ ಸುಳಿವು ಲಭ್ಯ
* ಮುಖ್ಯೋಪಾಧ್ಯಾಯ, ಶಿಕ್ಷಕ ಸೇರಿ ೫೨೦ ಮಂದಿ ಭಾಗಿ
* ಹಲವರ ವಿಚಾರಣೆ; ತಪ್ಪಿತಸ್ಥರಿಗಾಗಿ ತೀವ್ರ ಶೋಧ
* ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳ ವಿಚಾರಣೆ

ಇಲ್ಲಿಯವರೆಗಿನ ತನಿಖೆಯಲ್ಲಿ ರಾಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಯ, ಓರ್ವ ಶಿಕ್ಷಕ, ಭದ್ರತಾ ಸಿಬ್ಬಂದಿ ಭಾಗಿಯಾಗಿರುವುದು ಕಂಡುಬಂದಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ೫೨೦ ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಹಲವು ವಿದ್ಯಾರ್ಥಿಗಳು ವಾಟ್ಸಪ್‌ನಿಂದ ಪಡೆದು ಪರೀಕ್ಷೆ ಬರೆದಿರುವುದು ಪತ್ತೆಯಾಗಿದೆ.
ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋರಿಕೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳು ಹಾಗೂ ವಾಟ್ಸಪ್‌ನಿಂದ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪಡೆದು ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಲು ತನಿಖಾಧಿಕಾರಿಗಳು ಹಿಂದೇಟು ಹಾಕಿದ್ದಾರೆ.
ಪರೀಕ್ಷೆ ಪೂರ್ಣಗೊಂಡ ನಂತರ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಅದನ್ನ ಪಡೆದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡು ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ಕಾರ್ಯೋನ್ಮಖರಾಗಿದ್ದಾರೆ.
ಪ್ರಶ್ನೆ ಪತ್ರಿಕೆಯು ಮೊದಲಿಗೆ ಬಳ್ಳಾರಿ ಹಾಗೂ ಕೋಲಾರದಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತಾದರೂ ತನಿಖೆ ನಡೆದಂತೆ ರಾಜ್ಯದ ಎಲ್ಲೆಡೆ ಸೋರಿಕೆಯಾಗಿರುವುದು ಕಂಡುಬಂದಿದೆ. ಸೋರಿಕೆಯಾದ ಪ್ರಶ್ನೆಗಳು ವಾಟ್ಸಪ್ ಮೂಲಕ ಎಲ್ಲಾ ಕಡೆ ಹರಿದಾಡಿವೆ. ರಾಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳ ಪೈಕಿ ೩೭ ಪ್ರಶ್ನೆಗಳ ಪೈಕಿ ೩೬ ಪ್ರಶ್ನೆಗಳು ಸೋರಿಕೆಯಾಗಿವೆ.
ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ನೇರವಾಗಿ ಸಿಕ್ಕಿರುವವರು ಎಲ್ಲೂ ಕಂಡುಬಂದಿಲ್ಲ. ಆದರೆ ಪ್ರಶ್ನೆಗಳನ್ನು ಕೈಬರಹದಲ್ಲಿ ಇರುವುದನ್ನು ವಾಟ್ಸಪ್‌ನಲ್ಲಿ ಕಳುಹಿಸಲಾಗಿದೆ. ಪ್ರಶ್ನೆ ಪತ್ರಿಕೆಯ ಪುಟದಲ್ಲಿ ಎಲ್ಲೂ ನಾಳಿನ ಪ್ರಶ್ನೆ ಪತ್ರಿಕೆ ಎಂದು ನಮೂದಿಸಿಲ್ಲ. ಸಂಭವನೀಯ ಪ್ರಶ್ನೆ ಪತ್ರಿಕೆ ಎಂದು ದಾಖಲಾಗಿದ್ದು, ಅದನ್ನುಯ ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಿದಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿಂದಿನ ಪ್ರಕರಣಗಳನ್ನು ಪರಿಶೀಲಿಸಿರುವ ಸಿಐಡಿ ಅಧಿಕಾರಿಗಳು, ಈ ಬಾರಿಯ ಪರೀಕ್ಷಾ ಪ್ರಕ್ರಿಯೆಯ ಸಂಪೂರ್ಣ ಅಧ್ಯಯನ ನಡೆಸಿ ಸೋರಿಕೆಯಾಗಿರುವುದನ್ನು ಪತ್ತೆ ಹಚ್ಚಲು ತೊಡಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವವರ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬಹುದು. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಸಿಐಡಿಯ ಪೊಲೀಸ್ ಮಹಾನಿರ್ದೇಶಕ ಕಿಶೋರ್ ಚಂದ್ರ ತಿಳಿಸಿದ್ದಾರೆ.

Write A Comment