ಕರ್ನಾಟಕ

ವಕ್ಫ್ ಆಸ್ತಿ ಗುಳುಂ- ಮೇಲ್ಮನೆ ಕಲಾಪವೂ ಸ್ವಾಹಾ

Pinterest LinkedIn Tumblr

kalapaಬೆಂಗಳೂರು, ಮಾ. ೨೪- ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಸಂಬಂಧ ಅಲ್ಪಸಂಖ್ಯಾತ ಆಯೋಗದ ವರದಿಯನ್ನು ಮಂಡಿಸಲೇಬೇಕೆಂದು ಪಟ್ಟು ಹಿಡಿದು ವಿಧಾನ ಪರಿಷತ್ತಿನಲ್ಲಿಂದು ಬಿಜೆಪಿ ಸದಸ್ಯರು ನಡೆಸಿದ ಧರಣಿಗೆ ಸದನದ ಇಡೀ ದಿನದ ಕಲಾಪ ಆಹುತಿಯಾಯಿತು.
ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸಭಾಪತಿ ಅವರು ನೀಡಿರುವ ರೂಲಿಂಗ್‌ನಂತೆ ಸದನದಲ್ಲಿ ವರದಿ ಮಂಡಿಸಬೇಕೆಂದು ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪಗಳು, ಮಾತಿನ ಚಕಮಕಿ ನಡೆಯಿತ್ತಲ್ಲದೆ ಸದನವನ್ನು ಎರಡು ಬಾರಿ ಮುಂದೂಡಿ ನಂತರ ಸೋಮವಾರಕ್ಕೆ ಮುಂದೂಡಲಾಯಿತು.
ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿಯ ಮಧುಸೂದನ್ ಅಲ್ಪಸಂಖ್ಯಾತ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು. ಸಭಾನಾಯಕರು ಈ ಬಗ್ಗೆ ಇಂದೇ ಮಂಡಿಸುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ನುಡಿದಂತೆ ನಡೆಯಬೇಕು ಎಂದು ಆಗ್ರಹಪಡಿಸಿದರು.
ಸಭಾನಾಯಕ ಎಸ್.ಆರ್. ಪಾಟೀಲ್, ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರು ಶಿವಮೊಗ್ಗ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸದನಕ್ಕೆ ಬಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ. ಇಂದು ಸದನದ ಆರಂಭದಲ್ಲೇ ವರದಿ ಮಂಡಿಸುವುದಾಗಿ ನಾನೆಂದೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಭಾನಾಯಕರ ಹೇಳಿಕೆಗೆ ತೀಕ್ಷ್ಮವಾಗಿಯೇ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ವರದಿಯನ್ನು ಮಂಡಿಸಲು ಕಾನೂನು ಸಚಿವರೇ ಬರಬೇಕೇ. ನಿಮಗೆ ವರದಿಯನ್ನು ಮಂಡಿಸಲು ಏನಾದರೂ ಕಾನೂನಿನ ಅಡ್ಡಿ ಇದೆಯೇ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ ನಾಯಕ ಬಸವರಾಜಹೊರಟ್ಟಿ, ಕಾನೂನು ಸಚಿವರಿಗೆ ಸದನ ಮುಖ್ಯವೋ ಘಟಿಕೋತ್ಸವ ಮುಖ್ಯವೋ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರೊಂದಿಗೆ ಉನ್ನತ ಶಿಕ್ಷಣ ಸಚಿವರು ಇರಲೇಬೇಕು. ಸದನಕ್ಕೆ ಗೈರುಹಾಜರಾಗಿ ಅಗೌರವ ತೋರಿಸಲು ಅಲ್ಲಿಗೆ ತೆರಳಿದ್ದಾರೆ ಎಂದು ಯಾರೂ ಭಾವಿಸುವ ಅಗತ್ಯವಿಲ್ಲ ಎಂದು ಕಾನೂನು ಸಚಿವರು ಘಟಿಕೋತ್ಸವದಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡರು.
ಮಾತು ಮುಂದುವರಿಸಿದ ಮುಖ್ಯಮಂತ್ರಿಗಳು ವರದಿಯನ್ನು ಸರ್ಕಾರದ ಯಾವುದೇ ಸಚಿವರು ಮಂಡಿಸಬಹುದು. ಆದರೆ, ಈ ವರದಿಯ ಬಗ್ಗೆ ಕಾನೂನು ಸಚಿವರು ಮೊದಲಿನಿಂದಲೂ ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರೇ ಈ ಬಗ್ಗೆ ಸೂಕ್ತ ವಿವರಣೆಯನ್ನು ನೀಡಬಲ್ಲರು. ಮಧ್ಯಾಹ್ನ ಮೂರು ಗಂಟೆಯವರೆಗೆ ತಾಳ್ಮೆಯಿಂದಿರಿ ಎಂದು ಪ್ರತಿಪಕ್ಷಗಳ ಸದಸ್ಯರಿಗೆ ಕಿವಿಮಾತು ಹೇಳಿದರು.
ಬಿಜೆಪಿ ಸದಸ್ಯರು ತಮ್ಮ ಧರಣಿಯನ್ನು ವಾಪಸ್ಸು ಪಡೆಯುವಂತೆ ಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ ಅವರು ಪದೇ ಪದೇ ಮನವಿ ಮಾಡಿಕೊಂಡರೂ ಫಲ ಕೊಡಲಿಲ್ಲ. ಆಗ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಮತ್ತೆ ಸದನ ಸಮಾವೇಶಗೊಂಡಾಗಲೂ ಬಿಜೆಪಿ ಸದಸ್ಯರು ತಮ್ಮ ಧರಣಿಯನ್ನು ಮುಂದುವರೆಸಿದ್ದರು. ಕೆ.ಎಸ್. ಈಶ್ವರಪ್ಪ ಅವರು ಸದನ ಕಲಾಪ ಸಲಹಾ ಸಮಿತಿ, ನ್ಯಾಯಾಲಯ ಹಾಗೂ ಈ ಸದನದ ಸಭಾಪತಿಗಳು ವರದಿಯನ್ನು ಮಂಡಿಸುವಂತೆ ಆದೇಶ ನೀಡಿದ್ದಾರೆ. ಆದರೆ, ವರದಿ ಮಂಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಈ ಮಧ್ಯೆ ಕ್ರಿಯಾಲೋಪವೆತ್ತಿ ಮಾತನಾಡಲು ಎದ್ದು ನಿಂತ ಕಾಂಗ್ರೆಸ್‌ನ ಉಗ್ರಪ್ಪ ಅವರಿಗೆ ಮಾತನಾಡಲು ಉಪಸಭಾಪತಿ ಮರಿತಿಬ್ಬೇಗೌಡ ಅವಕಾಶ ನೀಡಲಿಲ್ಲ.
ಆಗ ಮಾತು ಮುಂದುವರಿಸಿದ ಈಶ್ವರಪ್ಪ, ಮಧ್ಯಾಹ್ನ ಸದನದಲ್ಲಿ ಕಾನೂನು ಸಚಿವರಿಂದಲೇ ವರದಿಯನ್ನು ಮಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ತಿಳಿಸಲಿ ಎಂದು ಹೇಳಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನೀವು ಹೇಳಿದ ಹಾಗೆಲ್ಲಾ ಕೇಳುವುದಕ್ಕಾಗುವುದಿಲ್ಲ ಎಂದು ತಿರುಗೇಟು ನೀಡಿದರು. ಸರ್ಕಾರದ ಸಹಾಯಕ್ಕೆ ಬಂದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಪುಟ್ಟಣ್ಣ ಅವರು ಮಧ್ಯಾಹ್ನ 3 ಗಂಟೆಗೆ ಕಾನೂನು ಸಚಿವರು ವರದಿ ಮಂಡಿಸುವುದಾಗಿ ಸರ್ಕಾರವೇ ತಿಳಿಸಿದೆ. ಅವರು ಮೊದಲು ವರದಿ ಮಂಡಿಸಲಿ ನಿಮಗೆ ಇಷ್ಟವಾಗದಿದ್ದಲ್ಲಿ ನಿಮ್ಮ ಬೆಂಬಲಕ್ಕೆ ನಾವೂ ಇರುತ್ತೇವೆ. ಧರಣಿ ವಾಪಸ್ ಪಡೆದು ಪ್ರಶ್ನೋತ್ತರ ಕಲಾಪ ನಡೆಸಲು ಅನುವು ಮಾಡಿಕೊಡಿ ಎಂದು ಧರಣಿ ನಿರತರಿಗೆ ಮನವಿ ಮಾಡಿದರು. ಈ ಹಂತದಲ್ಲಿ ಮದುಸೂಧನ್ ಅವರು ಮಾತನಾಡಲು ಹೊರಟಾಗ ಉಪಸಭಾಪತಿ ಮರಿತಿಬ್ಬೇಗೌಡ ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಪದೇ ಪದೇ ಈ ರೀತಿ ವರ್ತಿಸಿದರೆ ಹೇಗೆ ಸದನ ನಡೆಸುವುದು ಎಂದು ಏರಿದ ದನಿಯಲ್ಲೇ ತರಾಟೆಗೆ ತೆಗೆದುಕೊಂಡರು.
ಆಗಲೂ ಸದನ ನಡೆಸಲು ಆಗದೆ ಮತ್ತೊಮ್ಮೆ 10 ನಿಮಿಷಗಳ ಕಾಲ ಮುಂದೂಡಿದರು. ಸದನ ಮತ್ತೆ ಸೇರಿದಾಗಲೂ ಧರಣಿ ಮುಂದುವರೆದಿತ್ತು. ಕಾನೂನು ಸಚಿವರು ಮಧ್ಯಾಹ್ನ ಬಂದು ಸದನದಲ್ಲಿ ವರದಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಎಂದು ಸರ್ಕಾರ ತನ್ನ ನಿಲುವಿಗೆ ಅಂಟಿಕೊಂಡರೆ ವರದಿ ಮಂಡಿಸಲೇಬೇಕು ಎಂದು ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದ್ದರಿಂದ ಮರಿತಿಬ್ಬೇಗೌಡ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.

Write A Comment