ವಿಜಯಪುರ: ‘ಮುದ್ದೇಬಿಹಾಳದಲ್ಲಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.
‘ಖಾಸಗಿ ವಾಹನದಲ್ಲಿ ಪತ್ರಿಕೆ ಕೊಂಡೊಯ್ದಿರುವುದು ಪೂರ್ವಯೋಜಿತ. ಆದರೆ, ವಾಹನದಲ್ಲಿ ಖಾಸಗಿ ವ್ಯಕ್ತಿಗಳು ಇದ್ದದ್ದು ಸಂಶಯಕ್ಕೆ ಎಡೆ ಮಾಡಿದೆ. ಖಾಸಗಿ ವ್ಯಕ್ತಿಗಳು ವಾಹನದಲ್ಲಿ ಯಾಕೆ ಇದ್ದರು ಎಂಬ ಕಾರಣ ತಿಳಿದು ಬಂದಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಬೆಂಗಾವಲು ವಾಹನದ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆ ರವಾನೆಯಾಗಬೇಕಿತ್ತು. ಪ್ರಕರಣ ಕುರಿತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವರದಿ ಕೇಳಿದೆ. ಆದಷ್ಟು ಬೇಗ ಘಟನೆ ಬಗ್ಗೆ ಪ್ರಾಥಮಿಕ ವರದಿ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.
‘ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ.ಹೊಸೂರು ಅವರಿಗೆ ಘಟನೆಯ ಕುರಿತು ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಪರೀಕ್ಷಾ ಕಾರ್ಯ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದರೂ ಈ ಅಚಾತುರ್ಯ ನಡೆದಿರುವುದು ವಿಪರ್ಯಾಸ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ