ಕರ್ನಾಟಕ

ಶೈಕ್ಷಣಿಕ ಕ್ಷೇತ್ರದ ಅಂಕೆಶಂಕೆ ನಿವಾರಣೆ

Pinterest LinkedIn Tumblr

smrutiಬೆಂಗಳೂರು, ಮಾ. ೨೨ – ಶಿಕ್ಷಣ ಕ್ಷೇತ್ರದಲ್ಲಿರುವ ಲೈಸೆನ್ಸ್ ರಾಜ್ ಮತ್ತು ಇನ್ಸ್‌ಪೆಕ್ಟರ್ ರಾಜ್ ಪದ್ಧತಿಯನ್ನು ನಿವಾರಿಸಿ ಪಾರದರ್ಶಕ ಹಾಗೂ ಮುಕ್ತ ಚಿಂತನೆಯನ್ನು ಹೊಂದಿರುವ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ನಗರದಲ್ಲಿಂದು ಏರ್ಪಡಿಸಿದ್ದ ಇಪಿಎಸ್‌ಐ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ, ಉನ್ನತ, ಪ್ರೌಢ ಮುಂತಾದ ವಿಭಾಗಗಳಲ್ಲಿ ಅಸಮಾನತೆ ಇದ್ದು, ಇದನ್ನು ಹೋಗಲಾಡಿಸಲು ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು, ಸುಧಾರಣೆಗಳನ್ನು ಜಾರಿಗೆ ತಂದಿದೆ.

ಹೊಸ ಶಿಕ್ಷಣ ನೀತಿ ಜಾರಿ ಸಂಬಂಧ ಗ್ರಾಮೀಣ ಮಟ್ಟದ ಶಿಕ್ಷಣ ಸಂಸ್ಥೆಗಳಿಂದಲೂ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆಯಲಾಗಿದೆ. ಶಿಕ್ಷಣ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಕಾಲ ಮಿತಿ ಚೌಕಟ್ಟಿನೊಳಗೆ ನಡೆದರೆ ಮಾತ್ರ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಶಿಕ್ಷಣಕ್ಕೆ ಸಂಬಂಧಿದ ಎಲ್ಲಾ ವಿಶ್ಲೇಷಣೆಗಳು, ಸರ್ವೆಗಳು ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಿಂದಲೂ ಸಂಗ್ರಹಿಸಿ ಕ್ರೋಢೀಕರಿಸಿ ನೀತಿ ನಿರೂಪಣೆ ಮಾಡಲಾಗುತ್ತಿದೆ. ಉನ್ನತ ಶಿಕ್ಷಣದ ಖಾಸಗಿ ಸಂಸ್ಥೆಗಳಲ್ಲಿರುವ ಸರಕಾರಿ ನಾಮನಿರ್ದೇಶನ ಪದ್ಧತಿಯನ್ನು ಬದಲಿಸಿ ಹೆಚ್ಚು ಪಾರದರ್ಶಕವಾದ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡ ನಾಮನಿರ್ದೇಶನಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಾನ್ಯತೆ ಪಡೆದ ಕಾಲೇಜುಗಳಿಗೆ ಅನುಮತಿ ನೀಡುವ ಕ್ರಮಗಳಲ್ಲೂ ಸುಧಾರಣೆ ತರಲಾಗಿದೆ.

10 ವರ್ಷಗಳ ಕಾಲ ನಿರಂತರವಾಗಿ ಮ್ಯಾಕ್‌ನಿಂದ ಉತ್ತಮ ದರ್ಜೆ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಉನ್ನತ ದರ್ಜೆಯ ಮಾನ್ಯತೆ ಮುಂದುವರೆಸಲಾಗುವುದು. ತಾಂತ್ರಿಕ ಶಿಕ್ಷಣ ಸಂಸ್ಥೆಗಳು 5 ವರ್ಷಗಳ ಕಾಲ ಮಾನ್ಯತೆ ಪಡೆದಿದ್ದರೆ ಮುಂದಿನ 5 ವರ್ಷಗಳಿಗೂ ಅವುಗಳನ್ನು ವಿಸ್ತರಿಸಲಾಗುವುದು. ಎಲ್ಲಾ ವರ್ಗದ ಜನರಿಗೂ ಉನ್ನತ ಶಿಕ್ಷಣ ದೊರೆಯಬೇಕೆಂಬುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾ‌ಡಬೇಕಿದೆ. ಖಾಸಗಿ ಸಂಸ್ಥೆಗಳು ಸಾಮಾಜಿಕ ಕಾಳಜಿ ಹಾಗೂ ಬದ್ಧತೆ ಪ್ರದರ್ಶಿಸಬೇಕಾಗಿದೆ. ಹೆಚ್ಚು ವಿದ್ಯಾರ್ಥಿ ವೇತನ ನೀಡುವಿಕೆ, ಬಡಜನರಿಗೆ ಹೆಚ್ಚಿನ ಸ್ಥಾನ ನೀಡುವುದು ಮುಂತಾದ ಉಪ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಯುಜಿಸಿ 2010ರ ನಿಯಮ ಮತ್ತು ನಿಯಂತ್ರಣಗಳು ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಈಗ ಅಭಿಪ್ರಾಯ ವ್ಯಕ್ತಪಡಿಸುವುದು ಸಮಂಜಸವಲ್ಲ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಪಾರದರ್ಶಕತೆ ಅಗತ್ಯವಿದ್ದು, ಕಾಲೇಜುಗಳು ತಮ್ಮ ಪಠ್ಯಕ್ರಮ, ಸೌಲಭ್ಯ ಮುಂತಾದ ಮಾಹಿತಿಗಳನ್ನು ಮೊಬೈಲ್ ಆಪ್ ಮತ್ತು ಪೋರ್ಟಲ್‌‌ಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸುಲಭವಾಗಿ ದೊರಕುವಂತೆ ಮಾಡಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ಉನ್ನತ ಶಿಕ್ಷಣದ ಬೆಳವಣಿಗೆಗೆ ಹೆಚ್ಚಿನ ಅನುಧಾನ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ಪೂಜಾಗಾಂಧಿ ಮತ್ತಿತರರು ಭಾಗವಹಿಸಿದ್ದರು.

Write A Comment