ಕರ್ನಾಟಕ

ಪದ್ಮನಾಭರೆಡ್ಡಿಗೆ ಮೇಯರ್ ಮಂಜುನಾಥರೆಡ್ಡಿ ತಿರುಗೇಟು

Pinterest LinkedIn Tumblr

manಬೆಂಗಳೂರು, ಮಾ.22- ನಗರದ ಕಸ ವಿಲೇವಾರಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಮೇಯರ್ ಮಂಜುನಾಥರೆಡ್ಡಿ ಮತ್ತು ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಇಂದಿಲ್ಲಿ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ವಿಷಯದಲ್ಲೂ ಹುಳುಕು ಹುಡುಕುವುದೇ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿಯವರ ಕೆಲಸವಾಗಿದೆ. ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಗಾದೆ ಮಾತಿನಂತೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಾದ ಕರ್ಮಕಾಂಡಗಳೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಹರಿಹಾಯ್ದ ಅವರು, ಬಿಜೆಪಿ ಅವಧಿಯಲ್ಲಿ ಕಾಂಗ್ರೆಸ್‌ನ ವಿರೋಧದ ನಡುವೆಯೂ ಕಸ ವಿಲೇವಾರಿ ಗುತ್ತಿಗೆಯನ್ನು ಬಿವಿಜಿ ಸಂಸ್ಥೆಗೆ ನೀಡಿ ಕಸದ ಸಮಸ್ಯೆ ಉಲ್ಬಣಿಸಲು ಕಾರಣವಾಗಿದ್ದಾರೆ. ಸಂಸ್ಥೆಯವರು ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವುದರಿಂದ ಇಷ್ಟೆಲ್ಲ ಲೋಪದೋಷಕ್ಕೆ ಕಾರಣವಾಗಿದೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಬಿವಿಜಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದೇವೆ ಎಂದರು. ಡಿಸಿ ಬಿಲ್ ಮುಖಾಂತರ ಕಸ ವಿಲೇವಾರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ. ಡಿಸಿ ಬಿಲ್ ಪ್ರಾರಂಭವಾಗಿದ್ದು, ಬಿಜೆಪಿಯವರ ಅಧಿಕಾರಾವಧಿಯಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

198 ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಟೆಂಡರ್ ಕರೆದಿದ್ದು, ಕೆಲವು ಶರತ್ತುಗಳು ಕಠಿಣವಾಗಿವೆ ಎಂದು 151 ಕಡೆ ಗುತ್ತಿಗೆದಾರರು ಟೆಂಡರ್ ಹಾಕಿಲ್ಲ. ಹಾಗಾಗಿ ಶರತ್ತುಗಳನ್ನು ಸರಳೀಕರಣಗೊಳಿಸುವಂತೆ ಗುತ್ತಿಗೆದಾರರು ಮನವಿ ಮಾಡಿದ್ದು, ಅವರೊಂದಿಗೆ ಸಭೆ ನಡೆಸಿ ಉಳಿದ 151 ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಟೆಂಡರ್ ಕರೆಯಲಾಗುವುದು ಎಂದರು. ನಗರದಲ್ಲಿ ಶೇ.30 ರಿಂದ 35ರಷ್ಟು ಕಸ ವಿಂಗಡಣೆ ಮಾಡಲಾಗುತ್ತಿದ್ದು, ಲಿಂಗಬೀರನಹಳ್ಳಿ ಬಳಿ ಸೇರಿದಂತೆ ಏಳು ಕಡೆ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಅಲ್ಲಿ ತ್ಯಾಜ್ಯ ಬೇರ್ಪಡಿಸಿ ಜೈವಿಕ ಇಂಧನ ತಯಾರಿಕೆಗೆ ಸಿದ್ಧತೆ ನಡೆಸಲಾಗುತ್ತದೆ ಎಂದರು.

ಕಸ ಸಂಸ್ಕರಣೆಗೆ ಹಲವಾರು ವಿದೇಶಿ ಸಂಸ್ಥೆಗಳು ಮುಂದೆ ಬಂದಿದ್ದು, ಈಗ ನೆದರ್‌ಲ್ಯಾಂಡ್ ಸಂಸ್ಥೆಗೆ ಅನುಮತಿ ದೊರೆತಿದ್ದು, ಡೆನ್ಮಾರ್ಕ್ ಮತ್ತು ಇಸ್ರೇಲ್ ಕಂಪೆನಿಯೊಂದಿಗೂ ಸಹ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ನಗರ ಉದ್ಭವಿಸಿರುವ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು. 25 ಕಾಂಪ್ಯಾಕ್ಟರ್: ನಗರದ ಕಸ ವಿಲೇವಾರಿಗಾಗಿ ಸರ್ಕಾರ ಪಾಲಿಕೆಗೆ 25 ಕಾಂಪ್ಯಾಕ್ಟರ್‌ಗಳನ್ನು ನೀಡಲಾಗುತ್ತಿದೆ. ಈ ಕಾಂಪ್ಯಾಕ್ಟರ್‌ಗಳಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

Write A Comment