ಕರ್ನಾಟಕ

ರಾಜು ನಿವಾಸಕ್ಕೆ ಪರಮೇಶ್ವರ ಭೇಟಿ, ಕುಟುಂಬಕ್ಕೆ ರು.5 ಲಕ್ಷ ಪರಿಹಾರ ವಿತರಣೆ

Pinterest LinkedIn Tumblr

paramesh

ಮೈಸೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ರಾಜು ಅವರ ನಿವಾಸಕ್ಕೆ ಮಂಗಳವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ಮೃತನ ಕುಟುಂಬಕ್ಕೆ ಐದು ಲಕ್ಷ ರುಪಾಯಿ ಪರಿಹಾರದ ಚೆಕ್ ನ್ನು ಸಹ ನೀಡಿದರು.

ಇಂದು ಮಧ್ಯಾಹ್ನ ಮೈಸೂರಿನ ಕ್ಯಾತಮಾರನಹಳ್ಳಿಯ ರಾಜು ಅವರ ನಿವಾಸಕ್ಕೆ ಪರಮೇಶ್ವರ ಅವರು ಭೇಟಿ ನೀಡಿದರು. ಪರಮೇಶ್ವರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಸ್ಥಳೀಯ ಶಾಸಕ ತನ್ವೀರ್ ಸೇಠ್ ಅವರು ಸಾಥ್ ನೀಡಿದರು. ಈ ವೇಳೆ ತನ್ವೀರ್ ಸೇಠ್ ವಿರುದ್ಧ ಸ್ಥಳೀಯರು ಘೋಷಣೆ ಕೂಗಿದ ಘಟನೆಯೂ ನಡೆಯಿತು.

ಬಳಿಕ ಪರಮೇಶ್ವರ ಅವರು ರಾಜು ಹತ್ಯೆ ನಡೆದ ಉದಯಗಿರಿಯ ವಿನಾಯಕ ಟೀ ಸ್ಟಾಲ್ ಬಳಿ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಾಜು ಹತ್ಯೆ ದುರದೃಷ್ಟಕರ, ತನಿಖೆ ನಂತರ ಕೊಲೆಯ ಹಿಂದಿನ ಉದ್ದೇಶ ಬಹಿರಂಗವಾಗಲಿದೆ ಎಂದರು.

ರಾಜು ಹತ್ಯೆಯ ನಂತರ ಮೈಸೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸೋಮವಾರ ರಾತ್ರಿ ಅಂತ್ಯ ಸಂಸ್ಕಾರದ ನಂತರವೂ ಎರಡು ಕೋಮುಗಳ ನಡುವೆ ಭಾರಿ ಪ್ರಮಾಣದ ಕಲ್ಲು ತೂರಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಬುಧವಾರದವರೆಗೂ ಮುಂದುವರೆಸಿದ್ದಾರೆ.

ಭಾನುವಾರ ಸಂಜೆ ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಹತ್ಯೆಯನ್ನು ಬಿಜೆಪಿ ಖಂಡಿಸಿತ್ತು. ಅಲ್ಲದೆ ಸೋಮವಾರ ಮೈಸೂರು ಬಂದ್ ಗೆ ಕರೆ ನೀಡಿತ್ತು.

Write A Comment